ADVERTISEMENT

ರಜೌರಿ– ಪೂಂಛ್‌ನಲ್ಲಿ ಉಗ್ರರ ಉಪಟಳ ಹೆಚ್ಚಳ: ಸೇನಾ ಮುಖ್ಯಸ್ಥ

ಭಯೋತ್ಪಾದನೆ ಜಾಲ ದೇಶದಿಂದ ಕಿತ್ತೊಗೆಯಲು ಬದ್ಧತೆಯಿಂದ ಕೆಲಸ: ಸೇನಾ ಮುಖ್ಯಸ್ಥ ಜನರಲ್‌ ಮನೋಜ್‌ ಪಾಂಡೆ

ಪಿಟಿಐ
Published 15 ಜನವರಿ 2024, 15:57 IST
Last Updated 15 ಜನವರಿ 2024, 15:57 IST
ಉತ್ತರಪ್ರದೇಶದ ಲಖನೌನಲ್ಲಿ ನಡೆದ 76ನೇ ಆರ್ಮಿ ಡೇ ಪರೇಡ್‌ ಅಂಗವಾಗಿ ಯೋಧರು ಬೈಕ್‌ ಸಾಹಸ ಪ್ರದರ್ಶಿಸಿದರು –ಪಿಟಿಐ ಚಿತ್ರ
ಉತ್ತರಪ್ರದೇಶದ ಲಖನೌನಲ್ಲಿ ನಡೆದ 76ನೇ ಆರ್ಮಿ ಡೇ ಪರೇಡ್‌ ಅಂಗವಾಗಿ ಯೋಧರು ಬೈಕ್‌ ಸಾಹಸ ಪ್ರದರ್ಶಿಸಿದರು –ಪಿಟಿಐ ಚಿತ್ರ   

ಲಖನೌ: ‘ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಸ್ತುತ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಆದರೆ, ಪೀರ್‌ ಪಂಜಾಲ್‌ ಮತ್ತು ರಜೌರಿ– ಪೂಂಛ್‌ ಪ್ರದೇಶಗಳಲ್ಲಿ ಭಯೋತ್ಪಾದನೆ ಚಟುವಟಿಕೆಗಳು ಹೆಚ್ಚಾಗಿವೆ’ ಎಂದು ಸೇನಾ ಮುಖ್ಯಸ್ಥ ಜನರಲ್‌ ಮನೋಜ್‌ ಪಾಂಡೆ ಸೋಮವಾರ ತಿಳಿಸಿದ್ದಾರೆ.

ಲಖನೌನಲ್ಲಿ ನಡೆದ 76ನೇ ಸೇನಾ ದಿನದ ಪ‍ರೇಡ್‌ನಲ್ಲಿ ಮಾತನಾಡಿದ ಅವರು, ‘ಭದ್ರತಾ ಪಡೆಗಳ ಸತತ ಪರಿಶ್ರಮದಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂಸಾಚಾರ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ’ ಎಂದರು.

‘ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಕದನ ವಿರಾಮ ಇದೆ. ಆದರೆ, ದೇಶದ ಒಳಗೆ ಉಗ್ರರು ನುಸುಳುವ ಯತ್ನಗಳನ್ನು ಗಮನಿಸಿದಾಗ, ಗಡಿಯಲ್ಲಿ ಭಯೋತ್ಪಾದಕ ಚಟುವಟಿಕೆಗಳು ಕಡಿಮೆಯಾಗಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಅನೇಕ ಒಳನುಸುಳುವಿಕೆ ಸಂಚುಗಳನ್ನು ಸೇನೆ ವಿಫಲಗೊಳಿಸಿದೆ’ ಎಂದು ತಿಳಿಸಿದರು.

ADVERTISEMENT

‘ಈಶಾನ್ಯ ಭಾರತದಲ್ಲಿ ಇತ್ತೀಚೆಗೆ ನಡೆದ ಗಲಭೆಗಳಿಗೆ ಸಂಬಂಧಿಸಿದಂತೆ ಈಗಾಗಲೇ ಪ್ರಮುಖ ಶಾಂತಿ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಅಲ್ಲದೇ ಬಂಡುಕೋರ ಗುಂಪುಗಳೊಂದಿಗೆ ಶಾಂತಿ ಮಾತುಕತೆ ನಡೆಸಲಾಗಿದೆ. ಇದರ ಫಲವಾಗಿ ಆ ಪ್ರದೇಶದಲ್ಲಿ ಇಂದು ಸಕಾರಾತ್ಮಕ ಬೆಳವಣಿಗೆ ಕಂಡುಬಂದಿದೆ. ಶಾಂತಿಯನ್ನು ಮರುಸ್ಥಾಪಿಸುವ ವಿಚಾರದಲ್ಲಿ ಭಾರತದ ಕ್ರಿಯಾಶೀಲ ನೀತಿಗಳು ಮಹತ್ವದ ಪಾತ್ರ ವಹಿಸುತ್ತವೆ. ಸರ್ಕಾರದ ನೀತಿ ಮತ್ತು ಸೇನೆಯ ಪರಿಶ್ರಮದಿಂದ ಇಂದು ಮಣಿಪುರದ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಗಿದೆ’ ಎಂದು ಪಾಂಡೆ ಅಭಿಪ್ರಾಯಪಟ್ಟರು.

‘ಸೇನೆಯು ಉತ್ತರ ಗಡಿಯಲ್ಲಿ ಯಾವುದೇ ಪರಿಸ್ಥಿತಿ ಎದುರಿಸಲು ಸಿದ್ಧ ಮತ್ತು ಸಮರ್ಥವಾಗಿದೆ. ಗಡಿ ಪ್ರದೇಶಗಳಲ್ಲಿ ಅತ್ಯಗತ್ಯ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ವಿಶೇಷ ಗಮನವನ್ನು ನೀಡಲಾಗಿದ್ದು, ಉತ್ತಮ ಪ್ರಗತಿಯನ್ನೂ ಸಾಧಿಸಲಾಗಿದೆ’ ಎಂದು ಜನರಲ್‌ ಮನೋಜ್‌ ಪಾಂಡೆ ಹೇಳಿದರು.

ಉತ್ತರಪ್ರದೇಶದ ಲಖನೌನಲ್ಲಿ ನಡೆದ 76ನೇ ಆರ್ಮಿ ಡೇ ಪರೇಡ್‌ ಅಂಗವಾಗಿ ಯೋಧರೊಬ್ಬರು ಪ್ಯಾರಾಗ್ಲೈಡಿಂಗ್‌ ಸಾಹಸ ಪ್ರದರ್ಶಿಸಿದರು –ಪಿಟಿಐ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.