ADVERTISEMENT

ಓಮೈಕ್ರಾನ್ ಆತಂಕವಿರುವ ದೇಶಗಳಿಂದ ಭಾರತಕ್ಕೆ ಬಂದ 6 ಜನರಿಗೆ ಕೋವಿಡ್

ಪಿಟಿಐ
Published 2 ಡಿಸೆಂಬರ್ 2021, 2:57 IST
Last Updated 2 ಡಿಸೆಂಬರ್ 2021, 2:57 IST
   

ನವದೆಹಲಿ: ಕೊರೊನಾ ರೂಪಾಂತರ ತಳಿ ಓಮೈಕ್ರಾನ್ ಆತಂಕದ ನಡುವೆ ಸೋಂಕು ಪತ್ತೆಯಾಗಿರುವ ದಕ್ಷಿಣ ಆಫ್ರಿಕಾ ಮತ್ತು ಯೂರೋಪ್ ದೇಶಗಳಿಂದ ಬುಧವಾರ ಸಂಜೆವರೆಗೆ ಭಾರತಕ್ಕೆ ಬಂದ 11 ವಿಮಾನಗಳಲ್ಲಿನ 3,476 ಪ್ರಯಾಣಿಕರ ಪೈಕಿ 6 ಪ್ರಯಾಣಿಕರಿಗೆ ಕೋವಿಡ್ ಪಾಸಿಟಿವ್ ಆಗಿದೆ.

ಸೋಂಕಿತರ ಮಾದರಿಯನ್ನು ಜಿನೋಮಿಕ್ ಸ್ವೀಕ್ವೆನ್ಸಿಂಗ್ ಪರೀಕ್ಷೆಗೆ ಕಳುಹಿಸಲಾಗಿದೆ.

ಅಂತರರರಾಷ್ಟ್ರೀಯ ಪ್ರಯಾಣದ ಕುರಿತಾದ ಕೇಂದ್ರದ ಪರಿಷ್ಕೃತ ಆದೇಶವು ಬುಧವಾರದಿಂದ ಜಾರಿಗೆ ಬಂದಿದೆ.

ADVERTISEMENT

'ಹೊಸದಾಗಿ ಪತ್ತೆಯಾಗಿರುವ ಕೊರೊನಾ ರೂಪಾಂತರ ತಳಿಯ ನಿಯಂತ್ರಣ ಮತ್ತು ನಿರ್ವಹಣೆಗಾಗಿ ಅಂತರರಾಷ್ಟ್ರೀಯ ಪ್ರಯಾಣಿಕರಿಗೆ ಕೇಂದ್ರವು ಹೊರಡಿಸಿದ ಮಾರ್ಗಸೂಚಿಗಳ ಕಾರ್ಯಾಚರಣೆಯ ಮೊದಲ ದಿನದಂದು ಆರು ಪ್ರಯಾಣಿಕರಿಗೆ ಕೋವಿಡ್ ಪಾಸಿಟಿವ್ ಆಗಿದೆ’ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

‘ಓಮೈಕ್ರಾನ್ ಅಪಾಯದ ಪಟ್ಟಿಯಲ್ಲಿ ಬ್ರಿಟನ್, ದಕ್ಷಿಣ ಆಫ್ರಿಕಾ, ಬ್ರೆಜಿಲ್, ಬೋಟ್ಸ್‌ವಾನಾ, ಚೀನಾ, ಮಾರಿಷಸ್, ನ್ಯೂಜಿಲೆಂಡ್, ಜಿಂಬಾಬ್ವೆ, ಸಿಂಗಾಪುರ, ಹಾಂಗ್ ಕಾಂಗ್ ಮತ್ತು ಇಸ್ರೇಲ್ ದೇಶಗಳಿವೆ. ಈ ದೇಶಗಳಿಂದ ಭಾರತಕ್ಕೆ ಆಗಮಿಸುವ ಪ್ರಯಾಣಿಕರಿಗೆ ಕೋವಿಡ್ ಪರೀಕ್ಷೆ ಸೇರಿದಂತೆ ಹೆಚ್ಚುವರಿ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ.

ಕೇಂದ್ರ ಆರೋಗ್ಯ ಸಚಿವಾಲಯವು ಮಂಗಳವಾರ ಅಂತರರಾಷ್ಟ್ರೀಯ ಪ್ರಯಾಣಿಕರ ಮಾರ್ಗಸೂಚಿಗಳನ್ನು ಪರಿಷ್ಕರಿಸಿದೆ, ಓಮೈಕ್ರಾನ್ ಅಪಾಯದ ಪಟ್ಟಿಯಲ್ಲಿಲ್ಲದ ದೇಶಗಳಿಂದ ಬರುವ ಒಟ್ಟು ಪ್ರಯಾಣಿಕರಲ್ಲಿ ಶೇಕಡಾ ಎರಡರಷ್ಟು ಪ್ರಯಾಣಿಕರನ್ನು ಸಹ ಕೋವಿಡ್ -19 ರ‍್ಯಾಂಡಮ್ ಪರೀಕ್ಷೆಗೆ ಒಳಪಡಿಸಬೇಕು. ಪ್ರತಿ ವಿಮಾನದಲ್ಲಿನ ಪ್ರಯಾಣಿಕರನ್ನು ಸಂಬಂಧಪಟ್ಟ ವಿಮಾನಯಾನ ಸಂಸ್ಥೆಗಳು ಗುರುತಿಸಬೇಕು ಎಂದು ಮಂಗಳವಾರ ಕೇಂದ್ರವು ಬಿಡುಗಡೆ ಮಾಡಿದ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಓಮೈಕ್ರಾನ್ ಅಪಾಯದಲ್ಲಿರುವ ದೇಶಗಳಿಂದ ಆಗಮಿಸಿದವರು ನಂತರ 14 ದಿನಗಳವರೆಗೆ ತಮ್ಮ ಆರೋಗ್ಯದ ಬಗ್ಗೆ ಸ್ವಯಂ-ಮೇಲ್ವಿಚಾರಣೆ ಮಾಡುವಂತೆ ನಿರ್ದೇಶಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.