ADVERTISEMENT

‘ಕೈ’ ಅಧಿಕಾರಕ್ಕೆ ಮತ್ತೆ ಮತ್ತೆ ಕುತ್ತು

ಕೈಬಿಟ್ಟ ಪುದುಚೇರಿ; ಮೋದಿ ಅಧಿಕಾರ ವಹಿಸಿಕೊಂಡ ಮೇಲೆ ಆರು ರಾಜ್ಯಗಳು ಬಿಜೆಪಿ ತೆಕ್ಕೆಗೆ

ಶೆಮಿಜ್‌ ಜಾಯ್‌
Published 23 ಫೆಬ್ರುವರಿ 2021, 18:56 IST
Last Updated 23 ಫೆಬ್ರುವರಿ 2021, 18:56 IST
ಪುದುಚೇರಿ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ನಾರಾಯಣಸ್ವಾಮಿ ಅವರು ಸೋಮವಾರ ವಿಶ್ವಾಸಮತ ಯಾಚಿಸಿದರು –ಪಿಟಿಐ ಚಿತ್ರ
ಪುದುಚೇರಿ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ನಾರಾಯಣಸ್ವಾಮಿ ಅವರು ಸೋಮವಾರ ವಿಶ್ವಾಸಮತ ಯಾಚಿಸಿದರು –ಪಿಟಿಐ ಚಿತ್ರ   

ನವದೆಹಲಿ: ಬಿಜೆಪಿಯ ಕಾರ್ಯತಂತ್ರದ ಭಾಗವಾಗಿ, ಕಾಂಗ್ರೆಸ್ ಪಕ್ಷವು ಮತ್ತೊಂದು ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡಿದೆ. ಪುದುಚೇರಿ ಈಗ ಕಾಂಗ್ರೆಸ್‌ನ ಕೈ ತಪ್ಪಿ ಹೋಗಿದೆ.ಪ್ರಧಾನಿ ನರೇಂದ್ರ ಮೋದಿ ಅವರು 2014ರಲ್ಲಿ ಕೇಂದ್ರದಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ ತನ್ನ ನಿಯಂತ್ರಣದಲ್ಲಿದ್ದ ಆರು ರಾಜ್ಯಗಳನ್ನು ಕಾಂಗ್ರೆಸ್ ಕಳೆದುಕೊಂಡಿದೆ.

ಅರುಣಾಚಲ ಪ್ರದೇಶ, ಮಧ್ಯಪ್ರದೇಶ, ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಆದರೆ ಬಿಜೆಪಿಯು ಶಾಸಕರನ್ನು ಸೆಳೆದು ಈ ಮೂರೂ ರಾಜ್ಯಗಳಲ್ಲಿ ಚುಕ್ಕಾಣಿ ಹಿಡಿಯಿತು. ಕಾಂಗ್ರೆಸ್‌ನ ಐವರು ಹಾಗೂ ಮಿತ್ರಪಕ್ಷ ಡಿಎಂಕೆಯ ಒಬ್ಬ ಶಾಸಕನ ರಾಜೀನಾಮೆಯ ಮೂಲಕ ವಿಧಾನಸಭಾ ಚುನಾವಣೆಗೆ ಎರಡು ತಿಂಗಳು ಬಾಕಿಯಿರುವಾಗ ಪುದುಚೇರಿಯಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗಿದೆ. ಶಾಸಕರ ರಾಜೀನಾಮೆಯ ಹಿಂದೆ ಬಿಜೆಪಿ ಇದೆ ಎಂದು ಕಾಂಗ್ರೆಸ್ ಆಪಾದಿಸಿದೆ.

ಮಣಿಪುರ ಹಾಗೂ ಗೋವಾದ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾದಾಗ ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ ಈ ಎರಡೂ ರಾಜ್ಯಗಳಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷವನ್ನು ಒಡೆಯುವ ಮೂಲಕ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಏರಿತು. ಮಣಿಪುರದಲ್ಲಿ 2017ರ ಚುನಾವಣೆಯಲ್ಲಿ ಕಾಂಗ್ರೆಸ್ 27 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ, 21 ಕ್ಷೇತ್ರಗಳಲ್ಲಿ ಗೆದ್ದಿದ್ದ ಬಿಜೆಪಿಗೆ ಸರ್ಕಾರ ರಚಿಸಲು ಆಹ್ವಾನ ನೀಡಲಾಗಿತ್ತು. ಕಾಂಗ್ರೆಸ್‌ನ 9 ಶಾಸಕರನ್ನು ತನ್ನತ್ತ ಸೆಳೆದು ಬಿಜೆಪಿ ಅಧಿಕಾರ ಹಿಡಿದಿತ್ತು. ಗೋವಾದಲ್ಲೂ ಸಹ ಕಾಂಗ್ರೆಸ್‌ಗಿಂತ ಕಡಿಮೆ ಸ್ಥಾನ ಪಡೆದಿದ್ದ ಬಿಜೆಪಿ ಅಧಿಕಾರ ಹಿಡಿಯಿತು.

ADVERTISEMENT

ಅತ್ತ ಸಿಕ್ಕಿಂನದ್ದು ಅಚ್ಚರಿದಾಯಕ ವಿದ್ಯಮಾನ. 2019ರ ವಿಧಾನಸಭಾ ಚುನಾವಣೆಯಲ್ಲಿ ಒಂದೇ ಒಂದು ಸ್ಥಾನವನ್ನು ಗೆಲ್ಲದ ಮತ್ತು ಠೇವಣಿ ಕಳೆದುಕೊಂಡಿದ್ದ ಬಿಜೆಪಿ ಈಗ ಅಲ್ಲಿ ಅಧಿಕಾರ ಅನುಭವಿಸುತ್ತಿದೆ. ಮಾಜಿ ಮುಖ್ಯಮಂತ್ರಿ ಪವನ್ ಚಾಮ್ಲಿಂಗ್ ಅವರನ್ನು ಹೊರತುಪಡಿಸಿ
ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್‌ನ 12 ಶಾಸಕರನ್ನು ಸೆಳೆಯುವ ಮೂಲಕ ವಿಧಾನಸಭೆಯಲ್ಲಿ
ಬಿಜೆಪಿ ಗದ್ದುಗೆ ಹಿಡಿಯಿತು.

ಮಧ್ಯಪ್ರದೇಶದಲ್ಲಿ ಕಮಲನಾಥ್ ನೇತೃತ್ವದ ಸರ್ಕಾರವನ್ನು ಉರುಳಿಸಲು ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ದಾಳವಾಗಿ ಬಳಸಿಕೊಳ್ಳಲಾಗಿತ್ತು. 2018ರಲ್ಲಿ 121 ಸದಸ್ಯ ಬಲದೊಂದಿಗೆ ಕಾಂಗ್ರೆಸ್ ಅಧಿಕಾರ ಹಿಡಿದಿತ್ತು. ಆದರೆ ಸಿಂಧಿಯಾ ಮತ್ತು 26 ಶಾಸಕರನ್ನು ಪಕ್ಷ ಬಿಡುವಂತೆ ಮಾಡಿ ತನ್ನತ್ತ ಸೆಳೆದ ಬಿಜೆಪಿ, ಉಪಚುನಾವಣೆಯಲ್ಲಿ 26ರ ಪೈಕಿ 19ರಲ್ಲಿ ಜಯ ಸಾಧಿಸಿತು.

ಕರ್ನಾಟಕದಲ್ಲಿ 2018ರಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಬಿಜೆಪಿಗೆ ಆರಂಭದಲ್ಲಿ ಸರ್ಕಾರ ರಚಿಸಲು ಆಹ್ವಾನ ನೀಡಲಾಗಿತ್ತಾದರೂ ಬಹುಮತ ಸಾಬೀತುಪಡಿಸಲು ಪಕ್ಷ ವಿಫಲವಾಗಿತ್ತು. ಆ ಬಳಿಕ 80 ಸದಸ್ಯರಿದ್ದ ಕಾಂಗ್ರೆಸ್ ಹಾಗೂ 37 ಸದಸ್ಯರಿದ್ದ ಜೆಡಿಎಸ್ ಸೇರಿಕೊಂಡು ಸರ್ಕಾರ ರಚಿಸಿದ್ದವು. 16 ಶಾಸಕರನ್ನು ಸೆಳೆಯುವ ಮೂಲಕ ಮೈತ್ರಿ ಸರ್ಕಾರವನ್ನು ಕೆಡವಿ ಬಿ.ಎಸ್. ಯಡಿಯೂರಪ್ಪ ಅವರು ಅಧಿಕಾರಕ್ಕೆ ಏರಿದ್ದರು.

ರುಚಿ ಹತ್ತಿಸಿದ್ದ ಅರುಣಾಚಲ

2016ರಲ್ಲಿ ಅರುಣಾಚಲ ಪ್ರದೇಶದಲ್ಲಿ ಮೊದಲ ಬಾರಿಗೆ ಸರ್ಕಾರ ಬೀಳಿಸುವ ಮೂಲಕ ಬಿಜೆಪಿಗೆ ಅದರ ರುಚಿ ಹತ್ತಿತು.2014ರ ಚುನಾವಣೆಯಲ್ಲಿ, 60 ಸದಸ್ಯಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್ 42ರಲ್ಲಿ ಗೆದ್ದಿತ್ತು. ಬಿಜೆಪಿ 11 ಕ್ಷೇತ್ರಗಳಲ್ಲಿ ಆರಿಸಿ ಬಂದಿತ್ತು. ನಬಾಮ್ ತುಕಿ ಅವರು ಮುಖ್ಯಮಂತ್ರಿಯಾದರು. ಅವರ ಬಳಿಕ ಪೆಮಾ ಖಂಡು ಅಧಿಕಾರ ವಹಿಸಿಕೊಂಡರು. ಖಂಡು ಅವರು 40 ಕಾಂಗ್ರೆಸ್ ಶಾಸಕರ ಜೊತೆ ಪಕ್ಷ ತೊರೆದು ‘ಅರುಣಾಚಲ ಪೀಪಲ್ಸ್ ಪಕ್ಷ’ಕ್ಕೆ ವಲಸೆ ಹೋದರು. ಮರುವರ್ಷ ಆ ಪಕ್ಷವು ಬಿಜೆಪಿ ಜೊತೆ ವಿಲೀನವಾಯಿತು. 2019ರವರೆಗೆ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿದರು. 2019ರಲ್ಲೂ ಅವರು ಅಧಿಕಾರಕ್ಕೆ ಮರಳಿ ಬಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.