
ಹೈದರಾಬಾದ್: ಭಾರತೀಯ ಬಾಹ್ಯಾಕಾಶ ಕ್ಷೇತ್ರಕ್ಕೆ ಸಂಬಂಧಿಸಿದ ಸ್ಟಾರ್ಟ್‌ಅಪ್ ಸಂಸ್ಥೆ ‘ಸ್ಕೈರೂಟ್’ನ ಇನ್ಫಿನಿಟಿ ಕ್ಯಾಂಪಸ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ಆಗಿ ಗುರುವಾರ ಉದ್ಘಾಟಿಸಿದರು.
ಉಪಗ್ರಹಗಳನ್ನು ಕಕ್ಷೆಗೆ ಉಡಾಯಿಸುವ ಸಾಮರ್ಥ್ಯ ಹೊಂದಿರುವ, ಈ ಸಂಸ್ಥೆಯ ಮೊದಲ ರಾಕೆಟ್ ‘ವಿಕ್ರಮ್–1’ ಅನ್ನೂ ಅವರು ಅನಾವರಣಗೊಳಿಸಿದರು.
ಈ ವೇಳೆ ಮಾತನಾಡಿದ ಮೋದಿ, ‘ಸರ್ಕಾರವು ಬಾಹ್ಯಾಕಾಶ ಕ್ಷೇತ್ರದಲ್ಲಿ ಐತಿಹಾಸಿಕ ಸುಧಾರಣೆಗಳನ್ನು ಮಾಡಿದೆ. ಬಾಹ್ಯಾಕಾಶ ವಲಯವನ್ನು ಖಾಸಗಿ ವಲಯಕ್ಕೆ ಮುಕ್ತಗೊಳಿಸಿದ್ದರಿಂದ ‘ಸ್ಕೈರೂಟ್’ ಹಾಗೂ ಇಂತಹ ಅನೇಕ ಸಂಸ್ಥೆಗಳು ಹೊಸ ಸಾಧನೆ ಮಾಡುತ್ತಿವೆ. 300ಕ್ಕೂ ಅಧಿಕ ಸ್ಟಾರ್ಟ್‌ಅಪ್‌ಗಳು ಈ ವಲಯಕ್ಕೆ ಹೊಸ ಭರವಸೆಯನ್ನು ನೀಡಿವೆ’ ಎಂದರು.
‘ಜೆನ್–ಝಿ ವೃತ್ತಿಪರರು ದೇಶದಲ್ಲಿ ನೂತನ ತಂತ್ರಜ್ಞಾನಗಳನ್ನು ಸೃಷ್ಟಿಸುತ್ತಿದ್ದಾರೆ’ ಎಂದು ಶ್ಲಾಘಿಸಿದರು.
‘ಇನ್ಫಿನಿಟಿ ಕ್ಯಾಂಪಸ್, ಭಾರತದ ಹೊಸ ಚಿಂತನೆ, ಆವಿಷ್ಕಾರ ಮತ್ತು ಯುವಶಕ್ತಿಯ ಪ್ರತಿಬಿಂಬವಾಗಿದೆ. ಯುವಜನರ ಸಂಶೋಧನೆಗಳು, ಸಮಸ್ಯೆಗಳನ್ನು ಎದುರಿಸುವ ಸಾಮರ್ಥ್ಯ ಹಾಗೂ ಉದ್ಯಮಶೀಲತೆಯು ಹೊಸ ಎತ್ತರವನ್ನು ತಲುಪಿವೆ’ ಎಂದರು.
‘ಭಾರತದ ಬಾಹ್ಯಾಕಾಶ ವಲಯವು ಜಾಗತಿಕ ಹೂಡಿಕೆದಾರರನ್ನು ಆಕರ್ಷಿಸುತ್ತಿದೆ. ಇಲ್ಲಿನ ಖಾಸಗಿ ಸಂಸ್ಥೆಗಳು ವಿಶ್ವಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿವೆ’ ಎಂದೂ ಮೋದಿ ಶ್ಲಾಘಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.