ADVERTISEMENT

ಸುಳ್ಳುಸುದ್ದಿ: ವಾಟ್ಸ್ಆ್ಯಪ್‌ಗೂ ಆತಂಕ

ಕೇಂದ್ರ ಸರ್ಕಾರದ ಎಚ್ಚರಿಕೆಗೆ ಇ–ಮೇಲ್‌ನಲ್ಲಿ ಪ್ರತಿಕ್ರಿಯೆ

ಪಿಟಿಐ
Published 4 ಜುಲೈ 2018, 19:25 IST
Last Updated 4 ಜುಲೈ 2018, 19:25 IST
   

ನವದೆಹಲಿ: ‘ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುವ ವದಂತಿಗಳು ಮತ್ತು ಪ್ರಚೋದನಕಾರಿ ಸಂದೇಶಗಳಿಂದ ಉಂಟಾಗುತ್ತಿರುವ ಹಿಂಸಾ ಘಟನೆಗಳು ನಮಗೂ ಗಾಬರಿ ಮೂಡಿಸಿವೆ. ಈ ಸಮಸ್ಯೆ ನಿಭಾಯಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ವಾ‌ಟ್ಸ್‌ಆ್ಯಪ್‌ ಕಂಪನಿ ತಿಳಿಸಿದೆ.

ಅಮಾಯಕರ ಹತ್ಯೆಗಳಿಗೆ ಪ್ರಚೋದನೆ ನೀಡುವಂತಹ ಸುಳ್ಳು ಮತ್ತು ಬೇಜವಾಬ್ದಾರಿಯ ಸಂದೇಶ ಹರಡುವುದನ್ನು ತಡೆಯಲು ತುರ್ತು ಕಡಿವಾಣ ಹಾಕುವಂತೆ ಕೇಂದ್ರದ ಮಾಹಿತಿ ತಂತ್ರಜ್ಞಾನ ಸಚಿವಾಲಯವು ವಾಟ್ಸ್‌ಆ್ಯಪ್‌ ಸಂಸ್ಥೆಗೆ ಎಚ್ಚರಿಕೆ ನೀಡಿ ಮಂಗಳವಾರ ಪತ್ರ ಬರೆದಿತ್ತು.

‘ತಪ್ಪು ಮಾಹಿತಿಗಳ ಪ್ರಸಾರಕ್ಕೆ ವಾಟ್ಸ್ಆ್ಯಪ್‌ ವೇದಿಕೆಯಾಗುವುದನ್ನು ನಾವು ಬಯಸುವುದಿಲ್ಲ. ಸುಳ್ಳು ಸಂದೇಶಗಳ ಪ್ರಸಾರ ತಡೆಗಟ್ಟುವುದು ಕಂಪನಿಗಳು ಮತ್ತು ಸಮಾಜಕ್ಕೆ ಸವಾಲಾಗಿದೆ’ ಎಂದು ಅದು ಹೇಳಿದೆ.

ADVERTISEMENT

‘ಜನರ ಸುರಕ್ಷತೆಗೆ ವಾಟ್ಸ್‌ಆ್ಯಪ್‌ ಅಪಾರ ಕಾಳಜಿ ಹೊಂದಿದೆ. ಸುರಕ್ಷತೆ ದೃಷ್ಟಿಯಲ್ಲಿಟ್ಟುಕೊಂಡೇ ಆ್ಯಪ್‌ ಸಿದ್ಧಪಡಿಸಿದ್ದೇವೆ. ಅನಗತ್ಯ ಮಾಹಿತಿಗಳನ್ನು ಹರಡದಂತೆ ತಡೆಯಲು ಈಗಾಗಲೇ ಕೆಲವೊಂದು ಬದಲಾವಣೆಗಳನ್ನು ತಂದಿದ್ದೇವೆ’ ಎಂದು ತಿಳಿಸಿದೆ.

ಕರ್ನಾಟಕ, ಮಹಾರಾಷ್ಟ್ರ, ತ್ರಿಪುರಾ ಸೇರಿದಂತೆ ಹಲವು ರಾಜ್ಯಗಳಲ್ಲಿ ಇತ್ತೀಚೆಗೆ ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡಿದ ಮಕ್ಕಳ ಕಳ್ಳತನದ ಸುಳ್ಳು ಸಂದೇಶಗಳು ಅನೇಕ ಮುಗ್ಧ ಜೀವಗಳನ್ನು ಬಲಿ ಪಡೆದಿವೆ. ಇಂತಹ ದುಷ್ಕೃತ್ಯಗಳಿಗೆ ಅವಕಾಶ ಕೊಡಬಾರದೆಂದು ಸರ್ಕಾರ ಎಚ್ಚರಿಕೆ ನೀಡಿತ್ತು.

**

‘ಹೊಣೆಗಾರಿಕೆ ಇರಲಿ’

ವಾಟ್ಸ್‌ಆ್ಯಪ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಸಂದೇಶಗಳನ್ನು ಹರಿಯಬಿಟ್ಟರೆ ಅದಕ್ಕೆ ಆ ಕಂಪನಿಗಳೇ ಉತ್ತರದಾಯಿಯಾಗಿರಬೇಕು ಎಂದು ಕೇಂದ್ರದ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್‌ ಪ್ರಸಾದ್‌ ಒತ್ತಾಯಿಸಿದ್ದಾರೆ.

‘ಯಾವುದೇ ರಾಜ್ಯದ, ಯಾವುದೇ ಭಾಗದಲ್ಲಿ ನಿರ್ದಿಷ್ಟ ವಿಚಾರದ ಮೇಲೆ ದೊಡ್ಡಮಟ್ಟದಲ್ಲಿ ಸಂದೇಶ ಹರಿಯಬಿಟ್ಟರೆ ಅದನ್ನು ಪತ್ತೆಹಚ್ಚಲು ವಾಟ್ಸ್‌
ಆ್ಯಪ್‌ ಕಂಪನಿಯು ಮಾಹಿತಿ ತಂತ್ರಜ್ಞಾನ ಇಲಾಖೆ, ಗೃಹ ಸಚಿವಾಲಯ ಹಾಗೂ ಪೊಲೀಸರಿಗೆ ಸಹಕಾರ ನೀಡುವ ರೀತಿ ಕೆಲಸ ಮಾಡಬೇಕು’ ಎಂದು ಸೂಚಿಸಿದ್ದಾರೆ.

**

ವಾಟ್ಸ್‌ಆ್ಯಪ್‌ ಕ್ರಮಗಳೇನು

* ದೀರ್ಘಾವಧಿಯ ಜಾಗೃತಿ ಅಭಿಯಾನ

* ತಪ್ಪು ಸಂದೇಶ ರವಾನಿಸುವುದನ್ನು ತಡೆಯಲು ಭಾರತೀಯ ಶಿಕ್ಷಣ ತಜ್ಞರ ಜತೆ ಕೆಲಸ

* ಗ್ರೂ‍ಪ್‌ ಚಾಟ್‌ಗಳಿಗೆ ಬದಲಾವಣೆ. ಇದರಿಂದ ವಾಟ್ಸ್‌‌ಆ್ಯಪ್‌ನಲ್ಲಿ ಯಾರನ್ನೂ ಬೇಕಾದರೂ ಒಂದೇ ಟ್ಯಾಪ್‌ ಮೂಲಕ ಬ್ಲಾಕ್‌ ಮಾಡಬಹುದು

* ಗ್ರೂಪ್‌ನಲ್ಲಿ ಯಾರೆಲ್ಲ ಸಂದೇಶ ಕಳುಹಿಸಬಹುದು ಎಂಬುದನ್ನು ನಿಯಂತ್ರಿಸುವ ಅವಕಾಶ ಗ್ರೂಪ್‌ ಅಡ್ಮಿನ್‌ಗಳಿಗೆ ಮಾತ್ರ

* ವಾಟ್ಸ್‌ಆ್ಯಪ್‌ ದುರ್ಬಳಕೆ ತಡೆಯಲು ಬಳಕೆದಾರರ ಕೈಗೆ ನಿಯಂತ್ರಣ ವ್ಯವಸ್ಥೆ. ಮಾಹಿತಿ ಸುರಕ್ಷತೆಗೂ ಕ್ರಮ

* ಅಪರಾಧ ತನಿಖೆ ನಡೆಸುವ ಅಧಿಕಾರಿಗಳಿಗೆ ನೆರವು. ಈ ನಿಟ್ಟಿನಲ್ಲಿ ಶೀಘ್ರವೇ ದೇಶದಾದ್ಯಂತ ಕಾರ್ಯಕ್ರಮ ಆಯೋಜನೆ

**

ಸರ್ಕಾರ, ನಾಗರಿಕ ಸಮಾಜ ಹಾಗೂ ತಂತ್ರಜ್ಞಾನ ಸಂಸ್ಥೆಗಳು ಒಟ್ಟಾಗಿ ಈ ಸಮಸ್ಯೆ ನಿಭಾಯಿಸಬೇಕೆಂದು ನಾವು ನಂಬಿದ್ದೇವೆ.

–ವಾಟ್ಸ್‌ ಆ್ಯಪ್‌ ಕಂಪನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.