ಸುಪ್ರೀಂ ಕೋರ್ಟ್
ನವದೆಹಲಿ: ಹಾವು ಕಚ್ಚಿ ಜನರಿಗೆ ತೊಂದರೆ ಎದುರಾಗುವ ಸಮಸ್ಯೆಯು ದೇಶದ ಎಲ್ಲೆಡೆ ಇದೆ, ವೈದ್ಯಕೀಯ ಕೇಂದ್ರಗಳಲ್ಲಿ ಇದಕ್ಕೆ ಅಗತ್ಯ ಔಷಧಗಳು ಲಭ್ಯವಿರುವಂತೆ ಮಾಡಲು ಕೇಂದ್ರ ಸರ್ಕಾರವು ಎಲ್ಲ ರಾಜ್ಯಗಳ ಅಭಿಪ್ರಾಯ ಆಲಿಸಬೇಕು ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.
ಹಾವು ಕಚ್ಚಿದವರಿಗೆ ಚಿಕಿತ್ಸೆ ನೀಡಲು ಅಗತ್ಯವಿರುವ ಔಷಧದ ಕೊರತೆಯ ಕಾರಣದಿಂದಾಗಿ ದೇಶದಲ್ಲಿ ಸಾರ್ವಜನಿಕ ಆರೋಗ್ಯದ ಬಿಕ್ಕಟ್ಟು ಸೃಷ್ಟಿಯಾಗಿದೆ ಎಂಬ ದೂರು ಇರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಎಸ್.ವಿ.ಎನ್. ಭಟ್ಟಿ ಅವರು ಇರುವ ವಿಭಾಗೀಯ ಪೀಠವು ನಡೆಸಿತು.
‘ಎಲ್ಲ ರಾಜ್ಯಗಳ ಪ್ರತಿನಿಧಿಗಳ ನೀವು (ಕೇಂದ್ರ ಸರ್ಕಾರ) ಸಭೆ ನಡೆಸಬಹುದು’ ಎಂದು ಪೀಠವು ಹೇಳಿತು.
ಅರ್ಜಿಯಲ್ಲಿ ಪ್ರಸ್ತಾಪಿಸಿರುವ ವಿಷಯಕ್ಕೆ ಸಂಬಂಧಿಸಿದಂತೆ ಪ್ರಮಾಣಪತ್ರವನ್ನು ಸಲ್ಲಿಸುವುದಾಗಿ ಕೆಲವು ರಾಜ್ಯಗಳು ತಿಳಿಸಿದವು. ಅವುಗಳಿಗೆ ಆರು ವಾರಗಳ ಸಮಯ ನೀಡಿದ ಪೀಠವು, ವಿಚಾರಣೆ ಮುಂದೂಡಿತು.
ಹಾವು ಕಚ್ಚಿದವರಿಗೆ ಚಿಕಿತ್ಸೆ ನೀಡಲು ಅಗತ್ಯವಿರುವ ಔಷಧಗಳು ಎಲ್ಲ ಆರೋಗ್ಯ ಕೇಂದ್ರಗಳಲ್ಲಿ, ಸರ್ಕಾರಿ ಆಸ್ಪತ್ರೆಗಳಲ್ಲಿ, ವೈದ್ಯಕೀಯ ಕಾಲೇಜುಗಳಲ್ಲಿ ಲಭ್ಯವಿರುವಂತೆ ಮಾಡಬೇಕು ಎಂಬ ಕೋರಿಕೆ ಇರುವ ಅರ್ಜಿಯನ್ನು ವಕೀಲ ಶೈಲೇಂದ್ರ ಮಣಿ ತ್ರಿಪಾಠಿ ಅವರು ಸಲ್ಲಿಸಿದ್ದಾರೆ.
ಭಾರತದಲ್ಲಿ ಪ್ರತಿ ವರ್ಷ ಹಾವು ಕಚ್ಚಿ ಮೃತಪಡುವವರ ಸಂಖ್ಯೆಯು 58 ಸಾವಿರದಷ್ಟಿದೆ. ಹೀಗಿದ್ದರೂ ಇದಕ್ಕೆ ಚಿಕಿತ್ಸೆ ನೀಡಲು ಅಗತ್ಯವಿರುವ ಔಷಧಗಳ ಕೊರತೆ ಇದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.