ADVERTISEMENT

ಬದರಿನಾಥ, ಕೇದಾರನಾಥದಲ್ಲಿ ಮುಂದುವರಿದ ಮಳೆ, ಹಿಮಪಾತ: ಯಾತ್ರಾರ್ಥಿಗಳಿಗೆ ಎಚ್ಚರಿಕೆ

ಪಿಟಿಐ
Published 1 ಮೇ 2023, 12:58 IST
Last Updated 1 ಮೇ 2023, 12:58 IST
ಬದರಿನಾಥದಲ್ಲಿ ಹಿಮಪಾತ
ಬದರಿನಾಥದಲ್ಲಿ ಹಿಮಪಾತ   ಪಿಟಿಐ ಚಿತ್ರ

ಡೆಹ್ರಾಡೂನ್: ಉತ್ತರಾಖಂಡದ ಬದರಿನಾಥ ಮತ್ತು ಕೇದಾರನಾಥ ಕ್ಷೇತ್ರಗಳಲ್ಲಿ ನಿರಂತರ ಮಳೆ, ಹಿಮಪಾತ ಮುಂದುವರಿದಿದ್ದು, ಚಾರ್‌ಧಾಮ್ ಯಾತ್ರಾರ್ಥಿಗಳು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿಯೇ ಯಾತ್ರೆ ಮುಂದುವರಿಸಬೇಕು ಎಂದು ಸೂಚಿಸಲಾಗಿದೆ.

ಕೇದಾರನಾಥ ಯಾತ್ರೆಗಾಗಿ ಆಗಮಿಸಿರುವ ಯಾತ್ರಾರ್ಥಿಗಳು ಸದ್ಯ ತಾವು ತಂಗಿರುವ ಸ್ಥಳದಲ್ಲೇ ಇರುವಂತೆ ರುದ್ರ ಪ್ರಯಾಗ್ ಜಿಲ್ಲಾಡಳಿತ ಸೂಚಿಸಿದೆ.

ಚಾರ್‌ಧಾಮ್ ಯಾತ್ರೆಯು ಯಮುನೋತ್ರಿ, ಗಂಗೋತ್ರಿ, ಕೇದಾರನಾಥ ಮತ್ತು ಬದರಿನಾಥ ದೇವಾಲಯಗಳಿಗೆ ನಡೆಸುವ ತೀರ್ಥಯಾತ್ರೆಯಾಗಿದೆ.

ADVERTISEMENT

ಎತ್ತರದ ಪ್ರದೇಶಗಳಲ್ಲಿ ಆಲಿಕಲ್ಲು ಮಳೆ, ಮತ್ತು ಹಿಮಪಾತ ಮುಂದುವರಿಯುವುದಾಗಿ ಹೇಳಿರುವ ಹವಾಮಾನ ಕಚೇರಿ, ಸೋಮವಾರ ರಾಜ್ಯದಲ್ಲಿ ಯೆಲ್ಲೋ ಅಲರ್ಟ್ ಘೋಷಿಸಿದೆ.

ಯಾತ್ರಾರ್ಥಿಗಳು, ವಿಶೇಷವಾಗಿ ಕೇದಾರನಾಥಕ್ಕೆ ಬರುವವರು, ಯಾವುದೇ ಅನಾನುಕೂಲತೆ ಎದುರಿಸುವ ಬದಲು ಹವಾಮಾನ ನೋಡಿಕೊಂಡೇ ಪ್ರಯಾಣ ಮುಂದುವರಿಸಬೇಕು. ಕೇದಾರನಾಥದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದ ನಂತರವೇ ತಮ್ಮ ಪ್ರಯಾಣವನ್ನು ಮುಂದುವರಿಸಲು ಸೂಚಿಸಲಾಗಿದೆ ಎಂದು ಬದರಿನಾಥ್-ಕೇದಾರನಾಥ ದೇವಾಲಯ ಸಮಿತಿ ಅಧ್ಯಕ್ಷ ಅಜೇಂದ್ರ ಅಜಯ್ ತಿಳಿಸಿದ್ದಾರೆ.

ನಿರಂತರ ಮಳೆ ಮತ್ತು ಹಿಮಪಾತದಿಂದಾಗಿ ಬದರಿನಾಥ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಭೂಸಿತ ಉಂಟಾಗಿ 9 ಗಂಟೆಗಳ ಕಾಲ ಸಂಚಾರಕ್ಕೆ ಅಡ್ಡಿಯಾಗಿತ್ತು.

ಹವಾಮಾನ ಇಲಾಖೆಯು ಮುಂದಿನ ಎರಡು ಮೂರು ದಿನಗಳವರೆಗೆ ಪರಿಸ್ಥಿತಿ ಹೀಗೇ ಇರಲಿದ ಎಂದು ಹೇಳಿರುವುದಾಗಿ ರುದ್ರಪ್ರಯಾಗ ಜಿಲ್ಲಾಧಿಕಾರಿ ಮಯೂರ್ ದೀಕ್ಷಿತ್ ಹೇಳಿದ್ದಾರೆ.

ಕೇದಾರನಾಥ ಧಾಮಕ್ಕೆ ಬರುವ ಯಾತ್ರಾರ್ಥಿಗಳು ಹವಾಮಾನ ಸುಧಾರಿಸುವವರೆಗೆ ತಾವು ಇರುವ ಸ್ಥಳದಲ್ಲಿಯೇ ಇರುವಂತೆ ಅವರು ಮನವಿ ಮಾಡಿದ್ದಾರೆ.

ಪ್ರಸ್ತುತ, ಕೇದಾರನಾಥ ಧಾಮದಲ್ಲಿ ನಿರಂತರ ಹಿಮ ಬೀಳುತ್ತಿರುವ ಹಿನ್ನೆಲೆಯಲ್ಲಿ ಯಾತ್ರೆಯನ್ನು ನಿಯಂತ್ರಿಸಲಾಗಿದ್ದು, ಸೋನ್‌ಪ್ರಯಾಗದಿಂದ ಬೆಳಗ್ಗೆ 10.30ರ ನಂತರ ಕೇದಾರನಾಥಕ್ಕೆ ತೆರಳಲು ಅವಕಾಶ ನೀಡುತ್ತಿಲ್ಲ.

ಯಾತ್ರಾರ್ಥಿಗಳು ತಮ್ಮ ಸುರಕ್ಷತೆಯ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಮತ್ತು ಮಾರ್ಗಸೂಚಿಗಳನ್ನು ಅನುಸರಿಸುವ ಮೂಲಕ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎಂದು ದೀಕ್ಷಿತ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.