ADVERTISEMENT

ಜೀವನ ಕೌಶಲಕ್ಕೆ ಯುಜಿಸಿ ಪಾಠ!

ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸಲು ಅನುಕೂಲವಾಗುವ ವಿಷಯಗಳ ಸೇರ್ಪಡೆ

ಪಿಟಿಐ
Published 13 ಅಕ್ಟೋಬರ್ 2019, 20:00 IST
Last Updated 13 ಅಕ್ಟೋಬರ್ 2019, 20:00 IST
   

ನವದೆಹಲಿ: ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸಲು ಪೂರಕವಾಗುವ ನಿಟ್ಟಿನಲ್ಲಿ ವಿಶ್ವವಿದ್ಯಾಲಯ ಅನುದಾನ ಆಯೋಗವು (ಯುಜಿಸಿ) ಜೀವನ ಕೌಶಲಕ್ಕೆ ಸಂಬಂಧಿಸಿದಂತೆ ಪಠ್ಯ ರೂಪಿಸಿದೆ.

ಸಾಮಾಜಿಕ ಮಾಧ್ಯಮಗಳಿಗೆ ಸಂಬಂಧಿಸಿದಂತೆ ನೀತಿ ಸಂಹಿತೆ, ಗೂಗಲ್‌ ಸರ್ಚ್‌ ಬಳಕೆ, ವೈಯಕ್ತಿಕ ವಿವರ ಯಾವ ರೀತಿ ಬರೆಯಬೇಕು, ಯೋಗ ಮತ್ತು ಪ್ರಾಣಯಾಮ ವಿಷಯಗಳು ಸೇರಿದಂತೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಅಂಶಗಳು ಈ ಪಠ್ಯದಲ್ಲಿವೆ ಎಂದು ಯುಜಿಸಿ ತಿಳಿಸಿದೆ. ಈ ಪಠ್ಯವನ್ನು ತಜ್ಞರ ಸಮಿತಿ ರಚಿಸಿದೆ.

ದೇಶದಾದ್ಯಂತ ಪದವಿ ವಿದ್ಯಾರ್ಥಿಗಳಿಗಾಗಿ ಆಯೋಗವು ಇತ್ತೀಚೆಗೆ ’ಜೀವನ ಕೌಶಲ‘ ಹೆಸರಿನಲ್ಲಿ ಈ ಪಠ್ಯ ಆರಂಭಿಸಿದೆ. ಪದವಿ ಹಂತದಲ್ಲಿ ಯಾವುದಾದರೂ ಸೆಮಿಸ್ಟರ್‌ನಲ್ಲಿ ಈ ಪಠ್ಯವನ್ನು ಅಳವಡಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಈ ಪಠ್ಯವು ಎಂಟು ಅಂಕಗಳನ್ನು ಹೊಂದಿದೆ.

ADVERTISEMENT

ವಿದ್ಯಾರ್ಥಿಗಳಲ್ಲಿ ಸಂವಹನ ಕೌಶಲ ವೃದ್ಧಿಸುವುದು‌‌ ಹಾಗೂ ಭಾವನಾತ್ಮಕ ಮತ್ತು ಬೌದ್ಧಿಕ ಸಾಮರ್ಥ್ಯವನ್ನು ಹೆಚ್ಚಿಸುವುದು ಸಹ ಈ ಪಠ್ಯದ ಉದ್ದೇಶವಾಗಿದೆ.

’ಬರೆಯುವ ಮತ್ತು ಸಂವಹನ ಕೌಶಲಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮಗಳನ್ನು ಕಡೆಗಣಿಸಲು ಸಾಧ್ಯವಿಲ್ಲ. ಸಾಮಾಜಿಕ ಮಾಧ್ಯಮಗಳ ವೆಬ್‌ಸೈಟ್‌ಗಳು ಸಂಪರ್ಕ ಮತ್ತು ಸಂವಹನ ಸಾಧಿಸಲು ಅತ್ಯುತ್ತಮ ವೇದಿಕೆಗಳಾಗಿವೆ. ಆದರೆ, ವಿದ್ಯಾರ್ಥಿಗಳು ವಿವೇಚನೆ ಬಳಸಬೇಕು. ಯಾವ ಮಾಧ್ಯಮ ಪ್ರಯೋಜನಕಾರಿ ಮತ್ತು ಯಾವುದು ಹಾನಿ ಎನ್ನುವುದನ್ನು ಅರಿತುಕೊಳ್ಳಬೇಕು‘ ಎಂದು ಯುಜಿಸಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಉದ್ಯೋಗಕ್ಕೆ ಅರ್ಜಿ ಸಲ್ಲಿಸುವಾಗ ವೈಯಕ್ತಿಕ ವಿವರಗಳನ್ನು ಅತ್ಯುತ್ತಮವಾಗಿ ಬರೆಯುವುದು ಸಹ ಕೌಶಲ. ಯಾವುದೇ ವೃತ್ತಿಗೆ ತೆರಳುವ ಮುನ್ನ ಈ ಕೌಶಲ ಅತಿ ಮುಖ್ಯ. ಇಂತಹ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ತರಬೇತಿ ನೀಡುವುದು ಅಗತ್ಯವಾಗಿದೆ‘ ಎಂದು ಮಾಹಿತಿ ನೀಡಿದ್ದಾರೆ.

.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.