ADVERTISEMENT

ಕೋವಾಕ್ಸಿನ್‌ ಲಸಿಕೆಯಲ್ಲಿ ನವಜಾತು ಕರುಗಳ ಸೀರಂ ಇಲ್ಲ: ಕೇಂದ್ರದ ಸ್ಪಷ್ಟನೆ

‘ಲಸಿಕೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳು‘

ಪಿಟಿಐ
Published 16 ಜೂನ್ 2021, 11:12 IST
Last Updated 16 ಜೂನ್ 2021, 11:12 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಕೋವಾಕ್ಸಿನ್‌ ಲಸಿಕೆಯಲ್ಲಿ ನವಜಾತು ಕರುಗಳ ಸೀರಂ (ರಕ್ತದ ಅಂಶ) ಸೇರಿಸಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳು. ನೈಜ ಮಾಹಿತಿಯನ್ನು ತಿರುಚಿ ಪ್ರಕಟಿಸಲಾಗಿದೆ‘ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ಸ್ಪಷ್ಟಪಡಿಸಿದೆ.

ವೈರಾಣುಗಳು ನಿಷ್ಕ್ರಿಯ ಅಥವಾ ನಾಶವಾದ ನಂತರ ಅಂತಿಮವಾಗಿ ಲಸಿಕೆ ಸಿದ್ಧವಾಗುತ್ತದೆ. ಅಂತಿಮವಾಗಿ ಸಿದ್ಧವಾದ ಲಸಿಕೆಯಲ್ಲಿ ನವಜಾತ ಕರುವಿನ ಸೀರಂ ಬಳಸುವುದಿಲ್ಲ. ಕೋವಾಕ್ಸಿನ್ ಲಸಿಕೆಯಲ್ಲಿ ನವಜಾತು ಕರುವಿನ ಸೀರಂ ಇಲ್ಲ ಎಂದು ಸ್ಪಷ್ಟಪಡಿಸಿದೆ.

ನವಜಾತ ಕರುಗಳ ಸೀರಂ ಅನ್ನು ವೆರೊ ಕೋಶಗಳ ಅಭಿವೃದ್ಧಿ ಮತ್ತು ಬೆಳವಣಿಗೆಗಾಗಿ ಬಳಸಲಾಗುತ್ತದೆ. ಗೋವು ಮತ್ತು ಇತರ ಪ್ರಾಣಿಗಳ ಸೀರಂ ಅನ್ನು ಜಾಗತಿಕವಾಗಿ ವೆರೊ ಕೋಶಗಳ ಬೆಳವಣಿಗೆಗೆ ಪೌಷ್ಟಿಕಾಂಶಯುಕ್ತ ವಸ್ತುವಾಗಿ (ಇನ್‌ಗ್ರೇಡಿಯಂಟ್‌) ಬಳಸಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ಲಸಿಕೆಗಳ ಉತ್ಪಾದನೆಗೆ ನೆರವಾಗುವ ಜೀವ ಕೋಶಗಳನ್ನು ಅಭಿವೃದ್ಧಿಪಡಿಸಲು ವೆರೊ ಕೋಶಗಳನ್ನು ಬಳಲಾಗುತ್ತದೆ. ಈ ತಾಂತ್ರಿಕತೆಯನ್ನು ದಶಕಗಳಿಂದ ಪೊಲಿಯೊ, ರೇಬಿಸ್‌ ಮತ್ತು ಇನ್‌ಫ್ಲೂಯೆಂಜಾಕ್ಕಾಗಿ ನೀಡುವ ಲಸಿಕೆಗಳ ಅಭಿವೃದ್ಧಿಯಲ್ಲಿ ಬಳಸಲಾಗುತ್ತಿದೆ ಎಂದು ಸಚಿವಾಲಯ ತಿಳಿಸಿದೆ.

ಬೆಳವಣಿಗೆಯ ನಂತರ ವೆರೊ ಕೋಶಗಳನ್ನು ಹಲವು ಬಾರಿ ರಾಸಾಯನಿಕ ಮತ್ತು ನೀರಿನಿಂದ ತೊಳೆಯಲಾಗುತ್ತದೆ. ತಾಂತ್ರಿಕವಾಗಿ ಇದನ್ನು ಬಫರ್‌ ಎಂದು ಕರೆಯಲಾಗುತ್ತದೆ ಎಂದು ವಿವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.