ADVERTISEMENT

ಸೇನೆಯ ನಿರ್ಧಾರಕ್ಕೆ ಒಮ್ಮತದ ಬೆಂಬಲ

ದೆಹಲಿಯಲ್ಲಿ ನಡೆದ ಸರ್ವಪಕ್ಷಗಳ ಸಭೆಯಲ್ಲಿ ನಿರ್ಣಯ

ಪಿಟಿಐ
Published 16 ಫೆಬ್ರುವರಿ 2019, 19:33 IST
Last Updated 16 ಫೆಬ್ರುವರಿ 2019, 19:33 IST
ಆಗ್ರಾದ ಯೋಧ ಕೌಶಲ್ ಕುಮಾರ್ ರಾವತ್ ಅವರ ಅಂತಿಮ ಸಂಸ್ಕಾರದ ವೇಳೆ ಸೇರಿದ್ದ ಜನಸ್ತೋಮ
ಆಗ್ರಾದ ಯೋಧ ಕೌಶಲ್ ಕುಮಾರ್ ರಾವತ್ ಅವರ ಅಂತಿಮ ಸಂಸ್ಕಾರದ ವೇಳೆ ಸೇರಿದ್ದ ಜನಸ್ತೋಮ   

ನವದೆಹಲಿ:‘ಭಯೋತ್ಪಾದನೆ ವಿರುದ್ಧದ ಹೋರಾಟ ಮತ್ತು ಪುಲ್ವಾಮಾ ದಾಳಿಗೆ ಪ್ರತೀಕಾರಕ್ಕೆ ಸೇನೆ ಕೈಗೊಳ್ಳುವ ನಿರ್ಧಾರಕ್ಕೆ ನಮ್ಮೆಲ್ಲರ ಸಹಮತವಿದೆ’ ಎಂದು ದೇಶದ ಎಲ್ಲ ರಾಜಕೀಯ ಪಕ್ಷಗಳು ಒಗ್ಗಟ್ಟು ಪ್ರದರ್ಶಿಸಿವೆ.

‘ದೇಶದ ರಕ್ಷಣೆ ಮತ್ತು ಭಯೋ ತ್ಪಾದನೆ ವಿರುದ್ಧದ ಹೋರಾಟದಲ್ಲಿ ನಾವೆಲ್ಲರೂ ಸೇನಾಪಡೆಗಳ ಬೆಂಬಲಕ್ಕೆ ಇರುತ್ತೇವೆ’ ಎಂದು ಶನಿವಾರ ಇಲ್ಲಿ ನಡೆದ ಸರ್ವಪಕ್ಷಗಳ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ಕೇಂದ್ರ ಸರ್ಕಾರವು ಈ ಸಭೆಯನ್ನು ಆಯೋಜಿಸಿತ್ತು. ಎನ್‌ಡಿಎ ಮೈತ್ರಿಕೂಟದ ಮಿತ್ರಪಕ್ಷಗಳು ಮತ್ತು ಬಹುತೇಕ ಎಲ್ಲಾ ವಿರೋಧ ಪಕ್ಷಗಳ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು. ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಸಭೆಯ ನೇತೃತ್ವ ವಹಿಸಿದ್ದರು.

ADVERTISEMENT

ಭಯೋತ್ಪಾದನೆ ನಿಗ್ರಹಕ್ಕೆ ಆಂತರಿಕವಾಗಿ ಮತ್ತು ಜಾಗತಿಕವಾಗಿ ಏನೆಲ್ಲಾ ಕ್ರಮ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆಯೂ ಸುಮಾರು ಎರಡು ತಾಸು ನಡೆದ ಸಭೆಯಲ್ಲಿ ಚರ್ಚಿಸಲಾಯಿತು.

ಮಾದರಿಯಾಗಲಿ: ‘ಉಗ್ರರ ಮೇಲಿನ ನಿರ್ದಿಷ್ಟ ದಾಳಿ ನಿಜವಾ ಗಿಯೂ ಪರಿಣಾಮ ಬೀರಿದ್ದರೆ, ಪುಲ್ವಾಮಾ ದಂತಹ ದಾಳಿ ನಡೆಯುತ್ತಿರಲಿಲ್ಲ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಂದ ಸರ್ಕಾರವು ಪ್ರೇರಣೆ ಪಡೆಯಬೇಕು. ಅವರು ಪಾಕಿಸ್ತಾನದ ಮೇಲೆ ನೇರ ದಾಳಿ ನಡೆಸಿದ್ದಂತೆಯೇ, ಈಗಲೂ ಸರ್ಕಾರ ನೇರ ದಾಳಿ ನಡೆಸಬೇಕು’ ಎಂದು ಶಿವಸೇನಾದ ಸಂಜಯ್ ರಾವತ್ ಹೇಳಿದರು.

‘ಜಮ್ಮು ಮತ್ತು ಕಾಶ್ಮೀರದ ಜನರು ಶಾಂತಿಯನ್ನು ಬಯಸುತ್ತಾರೆ ಮತ್ತು ನಮ್ಮೊಂದಿಗೇ ಇರಲು ಬಯಸುತ್ತಾರೆ. ಆದರೆ ಅಲ್ಲಿನ ಕೆಲವು ಘಾತುಕ ಶಕ್ತಿಗಳು ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರಿಗೆ ನೆರವು ನೀಡುತ್ತಿವೆ. ನಮ್ಮ ಯೋಧರ ತ್ಯಾಗ ವ್ಯರ್ಥವಾಗುವುದಿಲ್ಲ.ಭಯೋತ್ಪಾದನೆಗೆ ತಾರ್ಕಿಕ ಅಂತ್ಯವಾಡಲು ಸರ್ಕಾರ ದೃಢ ನಿರ್ಣಯ ಕೈಗೊಂಡಿದೆ. ಎಂಥದ್ದೇ ಕಾರ್ಯಾಚರಣೆ ನಡೆಸಲು ನಮ್ಮ ಸೇನಾಪಡೆಗಳು ಸಮರ್ಥವಾಗಿವೆ’ ಎಂದು ರಾಜನಾಥ್ ಸಿಂಗ್ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿದರು.

ಗಡಿ ಮತ್ತು ಗಡಿಯಾಚೆಗಿನ ಭಯೋತ್ಪಾದನೆಯನ್ನು ಭಾರತ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಕಠಿಣ ಎಚ್ಚರಿಕೆ ನೀಡಿದರು.

2ನೇ ದಿನವೂ ಕರ್ಫ್ಯೂ

ಪುಲ್ವಾಮಾ ದಾಳಿಯ ನಂತರ ಕಣಿವೆ ರಾಜ್ಯದಲ್ಲಿ ಸ್ಮಶಾನ ಮೌನ ಆವರಿಸಿದ್ದು, ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಪರಿಸ್ಥಿತಿ ಶಾಂತಿಯುತವಾಗಿದ್ದು, ಸೇನೆ ಮತ್ತೆ ಒಂಬತ್ತು ತುಕುಡಿಗಳನ್ನು ನಿಯೋಜಿಸಿದೆ.

ಜಮ್ಮುವಿನಲ್ಲಿ ಎರಡನೇ ದಿನವೂ ಕರ್ಫ್ಯೂ ಮುಂದುವರಿದಿದ್ದು, ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಯೋಧರು ಪಥಸಂಚಲನ ನಡೆಸಿದ್ದಾರೆ.

ಜಮ್ಮು ವಿಶ್ವವಿದ್ಯಾಲಯದ ಪರೀಕ್ಷೆಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಮೊಬೈಲ್‌ಗಳಿಗೆ ಅಂತರ್ಜಾಲ ಮತ್ತು ಮೊಬೈಲ್‌ ಡೇಟಾ ಸಂಪರ್ಕ ಕಡಿತಗೊಳಿಸಲಾಗಿದೆ. ಸಿಆರ್‌ಪಿಎಫ್‌ ಯೋಧರ ಗೌರವಾರ್ಥ ಜನರು ಮೊಂಬತ್ತಿ ಹಿಡಿದು ಮೆರವಣಿಗೆ ನಡೆಸಿದ್ದಾರೆ.

ನಿರ್ದಿಷ್ಟ ದಾಳಿ: ಗೊಂದಲದಲ್ಲಿ ಭಾರತ

ಪಾಕಿಸ್ತಾನ ನೆಲದಲ್ಲಿರುವ ಉಗ್ರರ ಶಿಬಿರಗಳ ಮೇಲೆ ಭಾರತ ಮತ್ತೊಂದು ‘ನಿರ್ದಿಷ್ಟ ದಾಳಿ’ ನಡೆಸುವ ಸಾಧಕ–ಬಾಧಕಗಳ ಕುರಿತು ಭಾರತ ಸಮಾಲೋಚನೆ ನಡೆಸುತ್ತಿದೆ.

ಲೋಕಸಭಾ ಚುನಾವಣೆ ಕೆಲವೇ ದಿನಗಳು ಬಾಕಿ ಇರುವಾಗ ಪ್ರಧಾನಿ ನರೇಂದ್ರ ಮೋದಿ ತೀವ್ರ ಒತ್ತಡಕ್ಕೆ ಸಿಲುಕಿದ್ದಾರೆ ಎಂದು ಹೇಳಲಾಗಿದೆ. ಹೀಗಾಗಿ ಪಾಕಿಸ್ತಾನದಲ್ಲಿರುವ ಉಗ್ರರ ಶಿಬಿರಗಳ ಮೇಲೆ ಮತ್ತೊಂದು ನಿರ್ದಿಷ್ಟ ದಾಳಿ ಬಗ್ಗೆ ಯೋಚಿಸುತ್ತಿದ್ದಾರೆ ಎಂಬ ಸುದ್ದಿ ದಟ್ಟವಾಗಿ ಹರಡಿದೆ.

ದಾಳಿ ನಡೆಸಿದರೆ ಉಳಿದ ಮಿತ್ರರಾಷ್ಟ್ರಗಳ ಜತೆಗಿನ ಸಂಬಂಧದ ಮೇಲೆ ಆಗುವ ಪರಿಣಾಮಗಳ ಕುರಿತು ಜಾಗತಿಕ ಸಮುದಾಯದ ಸಮಾಲೋಚನೆ ನಡೆಸಿದೆ.

ನಿರ್ದಿಷ್ಟ ದಾಳಿಯಂತಹ ಸೇನಾ ಕಾರ್ಯಾಚರಣೆ ಬಗ್ಗೆ ಮುಂದಾಗದಂತೆ ಅಮೆರಿಕ, ಭಾರತಕ್ಕೆ ಸಲಹೆ ಮಾಡಿದೆ ಎಂದು ಮೂಲಗಳು ತಿಳಿಸಿವೆ.

ಪ್ರಧಾನಿ ಭದ್ರತಾ ಸಲಹೆಗಾರ ಅಜಿತ್‌ ಡೊಭಾಲ್‌ ಅವರಿಗೆ ಕರೆ ಮಾಡಿದ್ದ ಅಮೆರಿಕ ಅಧ್ಯಕ್ಷರ ಭದ್ರತಾ ಸಲಹೆಗಾರ ಜಾನ್‌ ಬಾಲ್ಟನ್‌ ನಿರ್ದಿಷ್ಟ ದಾಳಿ ಬಗ್ಗೆ ದುಡುಕಿ ನಿರ್ಧಾರ ಕೈಗೊಳ್ಳದಂತೆ ಸಲಹೆ ಮಾಡಿದ್ದಾರೆ ಎಂದು ಹೇಳಲಾಗಿದೆ.

ರಾಜತಾಂತ್ರಿಕ ಸಮರ: ಪುಲ್ವಾಮಾ ದಾಳಿಯ ಬೆನ್ನಲ್ಲೇ ಭಾರತ ಶನಿವಾರ ಪಾಕಿಸ್ತಾನ ವಿರುದ್ಧ ರಾಜತಾಂತ್ರಿಕ ಸಮರವನ್ನು ಮುಂದುವರಿಸಿದೆ.

ಅಮೆರಿಕ, ಐರೋಪ್ಯ ಒಕ್ಕೂಟ ಸೇರಿದಂತೆ ಇತರ ರಾಷ್ಟ್ರಗಳ ಜತೆ ನಿರಂತರ ಸಂಪರ್ಕದಲ್ಲಿದ್ದು ಪಾಕಿಸ್ತಾನದ ಮೇಲೆ ರಾಜತಾಂತ್ರಿಕ ಒತ್ತಡ ಹೇರುತ್ತಿದೆ.

ಜಾಗತಿಕ ಸಮುದಾಯದಲ್ಲಿ ಪಾಕಿಸ್ತಾನವನ್ನು ಏಕಾಂಗಿಯಾಗಿಸಲು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳು ಅನ್ಯ ರಾಷ್ಟ್ರಗಳ ಅಧಿಕಾರಿಗಳ ಜತೆ ಸಭೆಗಳ ಮೇಲೆ ಸಭೆ ನಡೆಸುತ್ತಿದ್ದಾರೆ.

ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನಲ್ಲಿ ಮುಂದಿನ ವಾರ ನಡೆಯಲಿರುವ ಹಣಕಾಸು ಕಾರ್ಯಪಡೆ ಸಭೆಯಲ್ಲಿ ಭಾರತವು ವಿಷಯವನ್ನು ಪ್ರಸ್ತಾಪಿಸಲು ಸಿದ್ಧತೆ ನಡೆಸಿದೆ. ನೆರೆಯ ಪಾಕಿಸ್ತಾನ ಭಯೋತ್ಪಾದಕ ಸಂಘಟನೆಗಳಿಗೆ ಹಣಕಾಸು ನೆರವು ನೀಡಿ ಪೋಷಿಸುತ್ತಿರುವ ಬಗ್ಗೆ ಭಾರತ ಗಮನ ಸೆಳೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಪುರಾವೆ ಇದೆ: ಆತ್ಮಾಹುತಿ ದಾಳಿ ನಡೆಸಿದ ಉಗ್ರ ಅದಿಲ್ ಅಹ್ಮದ್ ದಾರ್ ಜೈಷ್‌–ಎ–ಮೊಹಮ್ಮದ್‌ ಸಂಘಟನೆ ಸದಸ್ಯ ಎಂದು ಸಾಬೀತುಪಡಿಸುವ ಸಾಕ್ಷ್ಯಾಧಾರ ತನ್ನ ಬಳಿ ಇವೆ ಎಂದು ಭಾರತ ಹೇಳಿಕೊಂಡಿದೆ.

ಪಾಕಿಸ್ತಾನ ಮೂಲದ ಜೈಷ್‌–ಎ–ಮೊಹಮ್ಮದ್‌ ಉಗ್ರ ಸಂಘಟನೆ ಮತ್ತು ಅದರ ಮುಖ್ಯಸ್ಥ ಮಸೂದ್‌ ಅಜರ್‌ ಬಗ್ಗೆ ಆಡಿಯೊ, ವಿಡಿಯೊ ಮತ್ತು ಮುದ್ರಿತ ಪುರಾವೆ ಭಾರತದ ಬಳಿ ಇರುವುದಾಗಿ ವಿದೇಶಾಂಗ ವ್ಯವಹಾರಗಳ ವಕ್ತಾರ ರವೀಶ್ ಕುಮಾರ್‌ ತಿಳಿಸಿದ್ದಾರೆ.

ಯೋಧರ ಕುಟುಂಬಕ್ಕೆ ಹರಿದು ಬಂದ ನೆರವಿನ ಮಹಾಪೂರ

ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಸಿಆರ್‌ಪಿಎಫ್‌ ಯೋಧರ ಕುಟುಂಬಗಳಿಗೆ ನೆರವಿನ ಮಹಾಪೂರ ಹರಿದುಬಂದಿದೆ.

ಹುತಾತ್ಮ ಯೋಧರ ಮಕ್ಕಳ ಶಿಕ್ಷಣ, ಉದ್ಯೋಗ ಮತ್ತು ಕುಟುಂಬ ನಿರ್ವಹಣಾ ವೆಚ್ಚ ಭರಿಸುವುದಾಗಿ ರಿಲಯನ್ಸ್ ಪ್ರತಿಷ್ಠಾನ ಘೋಷಿಸಿದೆ. ಗಾಯಾಳು ಯೋಧರಿಗೆ ಉಚಿತ ಚಿಕಿತ್ಸೆ ನೀಡುವುದಾಗಿ ಹೇಳಿದೆ.

ಎಲ್ಲ 49 ಹುತಾತ್ಮ ಯೋಧರ ಕುಟುಂಬಗಳಿಗೆ ತಲಾ ₹5ಲಕ್ಷ ನೀಡುವುದಾಗಿ ಬಾಲಿವುಡ್‌ ನಟ ಅಮಿತಾಭ್ ಬಚ್ಚನ್‌ ಮತ್ತು ಆಂಧ್ರ ಪ್ರದೇಶ ಸರ್ಕಾರ ಘೋಷಿಸಿದೆ.

ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್‌ ಕೂಡ ಹುತಾತ್ಮ ಸಿಆರ್‌ಪಿಎಫ್‌ ಯೋಧರ ಮಕ್ಕಳ ಶೈಕ್ಷಣಿಕ ವೆಚ್ಚ ಭರಿಸಲು ಮುಂದೆ ಬಂದಿದ್ದಾರೆ. ಝಾಜ್ಜರ್‌ನಲ್ಲಿರುವ ಸೆಹ್ವಾಗ್‌ ಅಂತರರಾಷ್ಟ್ರೀಯ ಶಾಲೆಯಲ್ಲಿ ಹುತಾತ್ಮ ಯೋಧರ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡುವುದಾಗಿ ಹೇಳಿದ್ದಾರೆ.

ಹರಿಯಾಣ ಪೊಲೀಸ್ ಇಲಾಖೆ ಉದ್ಯೋಗಿಯಾಗಿರುವ ಬಾಕ್ಸರ್‌ ವಿಜೇಂದರ್‌ ಸಿಂಗ್‌ ತಮ್ಮ ಒಂದು ತಿಂಗಳ ವೇತನವನ್ನು ನೀಡಿದ್ದಾರೆ. ಇರಾನಿ ಕಪ್‌ ಗೆದ್ದ ವಿದರ್ಭ ಕ್ರಿಕೆಟ್‌ ತಂಡ ಬಹುಮಾನದ ಮೊತ್ತವನ್ನು ನೀಡುವುದಾಗಿ ಹೇಳಿದ್ದಾರೆ.

ರಾಜ್ಯದ ಹುತಾತ್ಮ ಯೋಧರ ಕುಟುಂಬ ಸದಸ್ಯರಿಗೆ ರಾಜಸ್ಥಾನ ಸರ್ಕಾರ ₹25 ಲಕ್ಷ ಪರಿಹಾರ ಮತ್ತು ಉದ್ಯೋಗ ನೀಡುವುದಾಗಿ ಹೇಳಿದೆ.

ಗಣ್ಯರ ಹೇಳಿಕೆಗಳು..

ಮನಸಿನಲ್ಲಿ ಆಕ್ರೋಶ ತುಂಬಿರುವ, ತೇವಭರಿತ ಕಣ್ಣುಗಳ ಹಿಂದಿನ ಸಂಕಟವನ್ನು ನಾವು ಊಹಿಸಬಲ್ಲೆವು. ಹುತಾತ್ಮ ಯೋಧರ ಕುಟುಂಬದ ಆಕ್ರೋಶ ನಮಗೆ ಅರ್ಥವಾಗಿದೆ

ನರೇಂದ್ರ ಮೋದಿ,ಪ್ರಧಾನಿ

***
ಕಾಶ್ಮೀರದ ಭದ್ರತಾ ಪಡೆಗಳಿಂದ ಥಳಿತಕ್ಕೊಳಗಾದ ಕಾರಣ ಅದಿಲ್ ದಾರ್‌ ಭಯೋತ್ಪಾದನಾ ಸಂಘಟನೆ ಸೇರುವಂತಾಯಿತು. ಕಣಿವೆಯಲ್ಲಿ ಸಾಕಷ್ಟು ಪ್ರಮಾಣದ ಯುವಜನರು ಭಯೋತ್ಪಾದಕರಾಗಲು ಏಕೆ ಮುಂದಾಗುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಅತಿಮುಖ್ಯ. ದೊಡ್ಡ ಪ್ರಮಾಣದ ಆತ್ಮಾಹುತಿ ದಾಳಿಗಳು ನಡೆದ ಕಾರಣ ಅಫ್ಗಾನಿಸ್ತಾನ ಹಾಗೂ ಇರಾಕ್‌ ಮೇಲೆ ನಿಯಂತ್ರಣ ಸಾಧಿಸಲು ಅಮೆರಿಕಕ್ಕೇ ಸಾಧ್ಯವಾಗಿಲ್ಲ

ಪ್ರಶಾಂತ್ ಭೂಷಣ್,ಸುಪ್ರೀಂ ಕೋರ್ಟ್ ಹಿರಿಯ ವಕೀಲ

***
ರಾಜ್ಯದ ಮುಗ್ಧ ಜನರಿಗೆ ಕಿರುಕುಳ ನೀಡಲು ಪುಲ್ವಾಮಾ ಘಟನೆ ಬಳಕೆಯಾಗಬಾರದು. ಧರ್ಮ, ಜಾತಿ, ಪ್ರಾದೇಶೀಕವಾಗಿ ಜನರನ್ನು ಒಡೆಯುವ ಷಡ್ಯಂತ್ರಗಳಿಗೆ ಅವಕಾಶ ನೀಡಬಾರದು. ತಾನು ನೀಡಿದ ಪೆಟ್ಟನ್ನು ಕೊಡಲಿ ಮರೆಯುತ್ತದೆ. ಗಿಡ ಅದನ್ನು ಸದಾ ನೆನಪಿನಲ್ಲಿ ಇಟ್ಟುಕೊಳ್ಳುತ್ತದೆ.

ಮೆಹಬೂಬಾ ಮುಫ್ತಿ,ಪಿಡಿಪಿ ಮುಖ್ಯಸ್ಥೆ

***
ಇದು ಅನಿರೀಕ್ಷಿತ ಘಟನೆ. ದಾಳಿಗೆ ಪ್ರತೀಕಾರ ಅನಿವಾರ್ಯ. ದಿಟ್ಟ ಪ್ರತಿಕ್ರಿಯೆ ನೀಡಲೇಬೇಕು ಎಂಬ ಒತ್ತಡ ಇಡೀ ದೇಶದಲ್ಲಿ ನಿರ್ಮಾಣವಾಗಿದೆ. ಭಯೋತ್ಪಾದಕ ಸಂಘಟನೆಗಳನ್ನು ಪಾಕಿಸ್ತಾನ ಪೋಷಿಸುತ್ತಿರುವುದು ಇಡೀ ಜಗತ್ತಿಗೇ ತಿಳಿದಿರುವ ಸಂಗತಿ. ಇದು ಸಹಿಸಲು ಅಸಾಧ್ಯ.

ನಿತೀಶ್ ಕುಮಾರ್,ಬಿಹಾರ ಮುಖ್ಯಮಂತ್ರಿ

***
ನಮ್ಮ ರಕ್ಷಣೆಗೆ ತಮ್ಮ ಪ್ರಾಣವನ್ನು ಬಲಿದಾನ ಮಾಡಿದ ಯೋಧರನ್ನು ಸ್ಮರಿಸಿಕೊಂಡು ನವಿ ಮುಂಬೈನಲ್ಲಿ ಭಾನುವಾರ ಹಾಫ್ ಮ್ಯಾರಥಾನ್ ನಡೆಯಲಿದೆ. ದೇಶಕ್ಕೆ ಸೇವೆ ಸಲ್ಲಿಸುತ್ತಿರುವ ನಿಜವಾದ ಹೀರೋಗಳು ಅವರೇ. ಅವರ ಕುಟುಂಬಗಳನ್ನು ಪೋಷಿಸುವುದು ನಮ್ಮೆಲ್ಲರ ಜವಾಬ್ದಾರಿ.

ಕಪಿಲ್ ದೇವ್,ಮಾಜಿ ಕ್ರಿಕೆಟಿಗ

***
ಭಯೋತ್ಪಾದಕರಿಗೆ ಯಾವುದೇ ಧರ್ಮ, ಜಾತಿ ಇಲ್ಲ. ಇಡೀ ದೇಶವೇ ಒಗ್ಗಟ್ಟಾಗಿದೆ. ನಾವೆಲ್ಲರೂ ಒಂದು. ನಮ್ಮ ಯೋಧರ ಜೊತೆ ನಾವೆಲ್ಲರೂ ಇದ್ದೇವೆ. ಭಯೋತ್ಪಾದಕರು ಎಂದಿದ್ದರೂ ಭಯೋತ್ಪಾದಕರೇ.

ಮಮತಾ ಬ್ಯಾನರ್ಜಿ.ಪಶ್ಚಿಮ ಬಂಗಾಳ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.