ADVERTISEMENT

ಡಿಎಂಕೆ ನೇತೃತ್ವದ ಸರ್ಕಾರ ಉರುಳಿಸಲು ಯತ್ನ: ಸ್ಟಾಲಿನ್

ಬಿಜೆಪಿ ವಿರುದ್ಧ ಪರೋಕ್ಷ ವಾಗ್ದಾಳಿ * ಭಿನ್ನಾಭಿಪ್ರಾಯ ತೊರೆದು ಒಂದಾಗಲು ಪ್ರತಿಪಕ್ಷಗಳಿಗೆ ಕರೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2023, 15:48 IST
Last Updated 7 ಮಾರ್ಚ್ 2023, 15:48 IST
ಎಂ.ಕೆ.ಸ್ಟಾಲಿನ್
ಎಂ.ಕೆ.ಸ್ಟಾಲಿನ್   

ಚೆನ್ನೈ: ‘ಜಾತಿ ರಾಜಕಾರಣ ಹಾಗೂ ಕೋಮು ಗಲಭೆಗಳ ಮೂಲಕ ಕೆಲ ಶಕ್ತಿಗಳು ಡಿಎಂಕೆ ನೇತೃತ್ವದ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಲು ಹವಣಿಸುತ್ತಿವೆ’ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಮಂಗಳವಾರ ಆರೋಪಿಸಿದ್ದಾರೆ.

ಬಿಜೆಪಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿರುವ ಅವರು, ಡಿಎಂಕೆ ನೇತೃತ್ವದ ಸರ್ಕಾರದ ‘ದ್ರಾವಿಡ ಮಾದರಿ’ ಆಡಳಿತ ಜನಪ್ರಿಯವಾಗಿರುವುದನ್ನು ಅರಗಿಸಿಕೊಳ್ಳಲು ಅವರಿಗೆ ಆಗುತ್ತಿಲ್ಲ. ಈ ಕಾರಣಕ್ಕೆ ಇಂಥ ಪಿತೂರಿ ನಡೆಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ನಾಗರಕೋಯಿಲ್ ನಗರದಲ್ಲಿ ಎಂ.ಕರುಣಾನಿಧಿ ಅವರ ಪ್ರತಿಮೆಯನ್ನು ಅನಾವರಣಗೊಳಿಸಿ ಅವರು ಮಾತನಾಡಿದರು.

ADVERTISEMENT

‘ಬಿಜೆಪಿ ವಿರುದ್ಧ ರಾಷ್ಟ್ರ ಮಟ್ಟದಲ್ಲಿ ಹೋರಾಟವನ್ನು ಬಲಪಡಿಸಬೇಕು. ಇದಕ್ಕಾಗಿ, ಜಾತ್ಯತೀತ ತತ್ವಗಳಿಗೆ ಬದ್ಧವಾಗಿರುವ ಎಲ್ಲ ಪಕ್ಷಗಳು ತಮ್ಮ ನಡುವಿನ ಭಿನ್ನಾಭಿಪ್ರಾಯ ತೊರೆದು ಒಂದೇ ವೇದಿಕೆಯಡಿ ಹೋರಾಟ ನಡೆಸಬೇಕು. ರಾಜ್ಯದಲ್ಲಿ ಡಿಎಂಕೆ ನೇತೃತ್ವದ ಮೈತ್ರಿಕೂಟ ಕಳೆದ ಐದು ವರ್ಷಗಳಿಂದ ಇಂಥ ಕಾರ್ಯದಲ್ಲಿ ತೊಡಗಿದ್ದು, ಚುನಾವಣೆಗಳಲ್ಲಿ ಸತತ ಗೆಲುವು ದಾಖಲಿಸುತ್ತಿದೆ’ ಎಂದು ಹೇಳಿದ್ದಾರೆ.

‘ಡಿಎಂಕೆ ನೇತೃತ್ವದ ಸರ್ಕಾರಕ್ಕೆ ಹೇಗೆ ಕೆಟ್ಟ ಹೆಸರು ತರಬೇಕು? ಸರ್ಕಾರವನ್ನು ಹೇಗೆ ಉರುಳಿಸಬೇಕು? ಹಾಗೂ ರಾಜ್ಯದಲ್ಲಿ ಹೇಗೆ ಹಿಂಸಾಚಾರ ಭುಗಿಲೇಳುವಂತೆ ಮಾಡಬೇಕು ಎಂಬ ಬಗ್ಗೆ ಈ ಶಕ್ತಿಗಳು ಯೋಚಿಸುತ್ತಿವೆ’ ಎಂದು ಸ್ಟಾಲಿನ್‌ ಆರೋಪಿಸಿದರು.

‘ಇಂಥ ಶಕ್ತಿಗಳಿಗೆ ನಾನು ಸಾಮಾನ್ಯವಾಗಿ ಪ್ರತಿಕ್ರಿಯೆ ನೀಡಲು ಹೋಗುವುದಿಲ್ಲ. ನಾವು ನೀಡುವ ಪ್ರತಿಕ್ರಿಯೆಯಿಂದಲೇ ಅವರಿಗೆ ಹೆಚ್ಚು ಪ್ರಚಾರ ಸಿಗುತ್ತದೆ’ ಎಂದ ಅವರು, ಮುಂಬರುವ ಲೋಕಸಭಾ ಚುನಾವಣೆ ಮೇಲೆ ಗಮನ ಕೇಂದ್ರೀಕರಿಸಿ, ಯುಪಿಎ ಮೈತ್ರಿಕೂಟದ ಗೆಲುವಿಗೆ ಶ್ರಮಿಸುವಂತೆ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.