ADVERTISEMENT

ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ: ಲಖಿಂಪುರದಲ್ಲಿ ಮೃತಪಟ್ಟ ರೈತನ ಮಗನ ನಿರ್ಧಾರ

ಪಿಟಿಐ
Published 5 ಫೆಬ್ರುವರಿ 2022, 11:19 IST
Last Updated 5 ಫೆಬ್ರುವರಿ 2022, 11:19 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಖಿಂಪುರ-ಖೇರಿ (ಉತ್ತರ ಪ್ರದೇಶ): ಲಖಿಂಪುರ-ಖೇರಿ ಹಿಂಸಾಚಾರದಲ್ಲಿ ಮೃತಪಟ್ಟ ರೈತ ನಚ್ಚತ್ತರ್ ಸಿಂಗ್ ಅವರ ಮಗ ಜಗದೀಪ್ ಸಿಂಗ್, ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ನಿರಾಕರಿಸಿದ್ದು, 2024ರ ಲೋಕಸಭೆ ಚುನಾವಣೆಯಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾ ವಿರುದ್ಧವೇ ಕಣಕ್ಕಿಳಿಯುವುದಾಗಿ ಘೋಷಿಸಿದ್ದಾರೆ.

ವಿಧಾನಸಭೆ ಚುನಾವಣೆಯಲ್ಲಿ ನಾನು ಧೌರ್‌ಹಾರ ಕ್ಷೇತ್ರದಿಂದಲೇ ಸ್ಪರ್ಧಿಸಬೇಕು ಎಂದು ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್ ನಾಯಕರು ಬಯಸಿದ್ದರು. ಆದರೆ ನಾನು ಸಣ್ಣ ಯುದ್ಧ ಮಾಡಲು ಬಯಸುವುದಿಲ್ಲ ಎಂದು ಅವರಿಗೆ ಹೇಳಿದ್ದೇನೆ. 2024ರ ಲೋಕಸಭೆ ಚುನಾವಣೆಯಲ್ಲಿ ನನಗೆ ಟಿಕೆಟ್ ಕೊಡಿ, ನಾನು ನೇರವಾಗಿ ಅಜಯ್ ಮಿಶ್ರಾ ವಿರುದ್ಧ ಹೋರಾಟ ಮಾಡುತ್ತೇನೆ. ಹೋರಾಟ ಮಾಡುವುದಾದರೆ ಸರಿಯಾದ ಹೋರಾಟವನ್ನೇ ಮಾಡಬೇಕು ಎಂದು ಹೇಳಿದ್ದಾರೆ.

2021 ಅಕ್ಟೋಬರ್ 3ರಂದು ಲಖಿಂಪುರ ಖೇರಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಎಸ್‌ಯುವಿ ಹರಿಸಿ ನಾಲ್ವರು ರೈತರನ್ನು ಹತ್ಯೆ ಮಾಡಲಾಗಿತ್ತು. ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಮಗ ಆಶಿಶ್ ಮಿಶ್ರಾ ಪ್ರಕರಣದ ಪ್ರಮುಖ ಆರೋಪಿ.

'ನಮ್ಮ ಕುಟುಂಬದಲ್ಲಿ ಯಾರೂ ರಾಜಕೀಯ ಹಿನ್ನೆಲೆಯನ್ನು ಹೊಂದಿಲ್ಲ. ನಾನು ಎಸ್‌ಪಿ, ಬಿಎಸ್‌ಪಿ, ಕಾಂಗ್ರೆಸ್ ಸೇರಿದಂತೆ ಯಾರ ಬೆಂಬಲಿಗನೂ ಅಲ್ಲ. ಸದ್ಯ ಚುನಾವಣೆಯಲ್ಲಿ ರೈತ ನಾಯಕ ತೇಜಿಂದರ್ ಸಿಂಗ್ ಅವರನ್ನು ಬೆಂಬಲಿಸುತ್ತೇನೆ. ಅವರು ನಮಗಾಗಿ ಹೋರಾಡುತ್ತಿದ್ದಾರೆ. ಅವರು ಎಲ್ಲಿಂದ ಸ್ಪರ್ಧಿಸಿದರೂ ಅವರೊಂದಿಗೆ ಇರುತ್ತೇವೆ' ಎಂದು ಹೇಳಿದರು.

ಹಿಂಸಾಚಾರದಲ್ಲಿ ಗಾಯಗೊಂಡವರಲ್ಲಿ ತೇಜಿಂದರ್ ಕೂಡ ಸೇರಿದ್ದಾರೆ. ಅಲ್ಲದೆ ಇತ್ತೀಚೆಗೆ ಅಖಿಲೇಶ್ ಯಾದವ್ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.