ADVERTISEMENT

ಸೋನಿಯಾ, ರಾಹುಲ್‌ ಸ್ಪರ್ಧೆ

ಲೋಕಸಭೆ ಚುನಾವಣೆ: ಕಾಂಗ್ರೆಸ್‌ ಪಕ್ಷದ 15 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 11 ಮೇ 2019, 9:57 IST
Last Updated 11 ಮೇ 2019, 9:57 IST
ಸೋನಿಯಾ ಗಾಂಧಿ
ಸೋನಿಯಾ ಗಾಂಧಿ   

ನವದೆಹಲಿ: ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿರುವ ಕಾಂಗ್ರೆಸ್‌, ರಾಯಬರೇಲಿ ಲೋಕಸಭಾ ಕ್ಷೇತ್ರದಿಂದ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಸ್ಪರ್ಧಿಸಲಿದ್ದಾರೆ ಎಂದು ಘೋಷಿಸಿದೆ.

ಲೋಕಸಭೆ ಚುನಾವಣೆಯ ದಿನಾಂಕ ಪ್ರಕಟವಾಗುವ ಮುನ್ನವೇ 15 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಕಾಂಗ್ರೆಸ್‌ ಗುರುವಾರ ಬಿಡುಗಡೆ ಮಾಡಿದೆ. ಇದರಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಹೆಸರುಗಳಿವೆ. ನಿರೀಕ್ಷೆಯಂತೆ ರಾಹುಲ್‌ ಗಾಂಧಿ ಅಮೇಠಿಯಿಂದ ಸ್ಪರ್ಧಿಸಲಿದ್ದಾರೆ.

‘ಸೋನಿಯಾ ಗಾಂಧಿ ಈ ಬಾರಿ ಸ್ಪರ್ಧಿಸುವುದಿಲ್ಲ. ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿಯಾಗಿ ಇತ್ತೀಚೆಗೆ ನೇಮಕಗೊಂಡಿದ್ದ ಪ್ರಿಯಾಂಕಾ ಗಾಂಧಿ ವಾದ್ರಾಗೆ ರಾಯಬರೇಲಿ ಕ್ಷೇತ್ರವನ್ನು ಬಿಟ್ಟು ಕೊಡಲಿದ್ದಾರೆ’ ಎನ್ನುವ ವದಂತಿಗಳಿದ್ದವು. ಹೀಗಾಗಿ, ಸೋನಿಯಾ ಅವರ ಸ್ಪರ್ಧೆ ಬಗ್ಗೆ ಕುತೂಹಲ ಮೂಡಿಸಿತ್ತು.

ADVERTISEMENT

ಕಾಂಗ್ರೆಸ್‌ ಪಕ್ಷದ ಕೇಂದ್ರೀಯ ಚುನಾವಣಾ ಸಮಿತಿ ಬಿಡುಗಡೆ ಮಾಡಿರುವ ಮೊದಲ ಪಟ್ಟಿಯಲ್ಲಿ ಉತ್ತರ ಪ್ರದೇಶದ 11 ಅಭ್ಯರ್ಥಿಗಳು ಮತ್ತು ಗುಜರಾತ್‌ನ 4 ಅಭ್ಯರ್ಥಿಗಳು ಇದ್ದಾರೆ.

ಗುಜರಾತ್‌ನಲ್ಲಿ ಕೇಂದ್ರದ ಮಾಜಿ ಸಚಿವ ಭರತ್‌ ಸಿನ್ಹಾ ಸೋಲಂಕಿ ಅವರು ಆನಂದ್ ಕ್ಷೇತ್ರದಿಂದ, ರಾಜು ಪರ್ಮಾರ್‌ ಅವರು ಅಹಮದಾಬಾದ್‌ ಪಶ್ಚಿಮದಿಂದ ಹಾಗೂ ಪ್ರಶಾಂತ್‌ ಪಟೇಲ್‌ ಮತ್ತು ರಂಜಿತ್‌ ಮೋಹನ್‌ ಸಿನ್ಹಾ ರಥ್ವಾ ಅವರು ಕ್ರಮವಾಗಿ ವಡೋದರಾ ಮತ್ತು ಛೋಟಾ ಉದಯಪುರದಿಂದ ಸ್ಪರ್ಧಿಸಲಿದ್ದಾರೆ.

ವಿವಾದಿತ ಮುಸ್ಲಿಂ ನಾಯಕ ಇಮ್ರಾನ್‌ ಮಸೂದ್‌ ಈ ಬಾರಿಯೂ ಸಹರಾನ್‌ಪುರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. 2014ರ ಲೋಕಸಭಾ ಚುನಾವಣೆಯಲ್ಲೂ ಸ್ಪರ್ಧಿಸಿದ್ದ ಮಸೂದ್‌, ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದರು.

ಉನ್ನಾವ್‌ ಕ್ಷೇತ್ರದಿಂದ ಅನ್ನು ಟಂಡನ್‌, ಫೈಜಾಬಾದ್‌ನಿಂದ ನಿರ್ಮಲ್‌ ಖತ್ರಿ, ಜಲೌನ್‌ನಿಂದ ಬ್ರಿಜ್‌ ಲಾಲ್‌ ಖಬ್ರಿ , ಬದೌನ್‌ನಿಂದ ಸಲೀಂ ಇಕ್ಬಾಲ್‌ ಶೆರ್ವಾನಿ, ಅಕ್ಬರಪುರದಿಂದ ರಾಜಾರಾಂ ಪಾಲ್‌ ಸ್ಪರ್ಧಿಸಲಿದ್ದಾರೆ.

ಕಾಂಗ್ರೆಸ್‌ಗೆ ಹಾರ್ದಿಕ್‌ ಸೇರ್ಪಡೆ: ಪಾಟೀದಾರ ಸಮುದಾಯದ ನಾಯಕ ಹಾರ್ದಿಕ್‌ ಪಟೇಲ್‌ ಇದೇ 12ರಂದು ಕಾಂಗ್ರೆಸ್‌ಗೆ ಸೇರಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.