ADVERTISEMENT

ಐಟಿ ದಾಳಿ ಮಾಡಿ ಹೋದ ಅಧಿಕಾರಿಗಳಿಗೆ ನಟ ಸೋನು ಸೂದ್ ಹೇಳಿದ್ದೇನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಸೆಪ್ಟೆಂಬರ್ 2021, 16:02 IST
Last Updated 25 ಸೆಪ್ಟೆಂಬರ್ 2021, 16:02 IST
ಸೋನು ಸೂದ್
ಸೋನು ಸೂದ್   

ಮುಂಬೈ: ಬಾಲಿವುಡ್ ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಸೋನು ಸೂದ್ ಅವರ ಮನೆ ಹಾಗೂ ಅವರಿಗೆ ಸಂಬಂಧಿಸಿದ ಕಚೇರಿಗಳ ಮೇಲೆ ಕೇಂದ್ರ ಆದಾಯ ತೆರಿಗೆ ಇಲಾಖೆ ಇತ್ತೀಚೆಗೆ ದಾಳಿ ನಡೆಸಿತ್ತು.

ಈ ಬಗ್ಗೆ ಟೈಮ್ಸ್‌ ಆಫ್ ಇಂಡಿಯಾ ಸಂದರ್ಶನದಲ್ಲಿ ಮಾತನಾಡಿರುವ ಸೋನು ಸೂದ್, ‘ನಾಲ್ಕು ದಿನ ಐಟಿ ಅಧಿಕಾರಿಗಳು ನನ್ನ ಮನೆಯಲ್ಲಿದ್ದರು. ಅವರು ಇದ್ದ ಅಷ್ಟೂ ದಿನ ಅವರನ್ನು ನಾನು ಚೆನ್ನಾಗಿ ನೋಡಿಕೊಂಡೆ. ಅವರು ನನ್ನ ಆತಿಥ್ಯವನ್ನು ಖಂಡಿತವಾಗಿಯೂ ಇಷ್ಟಪಟ್ಟರು. ಹೋಗುವಾಗ ಅವರಿಗೆ ನಾನು, ‘ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ‘ ಎಂದು ಹೇಳಿದ್ದೇನೆ ಎಂದು ಸೂದ್ ಹೇಳಿದ್ದಾರೆ.

ವಿದೇಶ ದೇಣಿಗೆ ಸ್ವೀಕರಿಸಿರುವ ಸೋನು ಅವರು ಸುಮಾರು 20 ಕೋಟಿ ರೂಪಾಯಿ ತೆರಿಗೆ ವಂಚಿಸಿದ್ದಾರೆ ಎಂದು ಆರೋಪಿಸಿತ್ತು. ಐಟಿ ದಾಳಿ ಬಗ್ಗೆ ಟ್ವೀಟ್ ಮಾಡಿದ್ದ ಅವರು, ಈ ಬಗ್ಗೆ ಸಮಯವೇ ಎಲ್ಲ ಉತ್ತರ ಕೊಡುತ್ತದೆ ಎಂದು ಹೇಳಿದ್ದರು.

ADVERTISEMENT

ಲಾಕ್‌ಡೌನ್‌ ಸಂದರ್ಭದಲ್ಲಿ ತಮ್ಮ ಊರಿಗೆ ತೆರಳಲಾಗದೇ ಸಂಕಷ್ಟದಲ್ಲಿದ್ದ ವಲಸೆ ಕಾರ್ಮಿಕರಿಗೆ ಉಚಿತವಾಗಿ ರೈಲು, ವಿಮಾನ ಹಾಗೂ ವಾಹನ ಸೌಲಭ್ಯ ಕಲ್ಪಿಸಿದ್ದ ನಟ ಸೂದ್‌ ಕಾರ್ಯಕ್ಕೆ ದೇಶದಾದ್ಯಂತ ಮೆಚ್ಚುಗೆ ವ್ಯಕ್ತವಾಗಿತ್ತು.

ಸೋನು ಸೂದ್‌ ಅವರು ತಮ್ಮ ಸರ್ಕಾರದ ‘ದೇಶ್‌ ಕಾ ಮೆಂಟರ್ಸ್‌’ ಕಾರ್ಯಕ್ರಮದ ರಾಯಭಾರಿಯಾಗಲಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಇತ್ತೀಚೆಗಷ್ಟೇ ಪ್ರಕಟಿಸಿದ್ದರು.

ಕೋವಿಡ್ ನಂತರದ ಕಾಲಘಟ್ಟದಲ್ಲಿ ನಾನು ಎರಡು ಬಾರಿ ರಾಜ್ಯಸಭಾ ಸ್ಥಾನವನ್ನು ನಿರಾಕರಿಸಿದ್ದೇನೆ ಎಂದು ಬಾಲಿವುಡ್ ನಟ ಸೋನು ಸೂದ್‌ ಅವರು ಹೇಳಿಕೊಂಡಿದ್ದರು.

‘ನನಗೆ ಕಳೆದ 10 ವರ್ಷಗಳಲ್ಲಿ ಬೇರೆ ಬೇರೆ ರಾಜಕೀಯ ಪಕ್ಷಗಳಿಂದ ವಿವಿಧ ರಾಜಕೀಯ ಹುದ್ದೆಗಳ ಅವಕಾಶ ಬಂದಿದೆ. ಕೋವಿಡ್ -19 ನಂತರದ ಕಾಲಘಟ್ಟದಲ್ಲಿ ಎರಡು ಬಾರಿ ರಾಜ್ಯಸಭಾ ಸ್ಥಾನವನ್ನು ನಾನು ತಿರಸ್ಕರಿಸಿದ್ದೇನೆ,‘ ಎಂದು ಅವರು ಹೇಳಿದ್ದರು.

‘ಮಾನಸಿಕವಾಗಿ ನಾನು ಸಿದ್ಧವಾಗಿಲ್ಲ. ನಾನು ರಾಜಕೀಯ ಪ್ರವೇಶಿಸಲು ಯೋಚಿಸಿದರೆ, ಬಹಿರಂಗವಾಗಿಯೇ ಹೇಳುತ್ತೇನೆ,‘ ಎಂದು ಅವರು ತಿಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.