ADVERTISEMENT

ಗಂಗೂಲಿ ರಾಜಕಾರಣಕ್ಕೆ ಬಂದರೆ ಒಳ್ಳೆ ಕೆಲಸಗಳನ್ನೇ ಮಾಡುತ್ತಾರೆ: ಪತ್ನಿ ಡೋನಾ

ಐಎಎನ್ಎಸ್
Published 7 ಮೇ 2022, 10:51 IST
Last Updated 7 ಮೇ 2022, 10:51 IST
ಸೌರವ್‌ ಗಂಗೂಲಿ
ಸೌರವ್‌ ಗಂಗೂಲಿ    

ಕೋಲ್ಕತ್ತ: ಬಿಸಿಸಿಐ ಅಧ್ಯಕ್ಷ, ಭಾರತೀಯ ಕ್ರಿಕೆಟ್‌ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರ ನಿವಾಸಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭೇಟಿ ನೀಡಿದ ಮರುದಿನ ಗಂಗೂಲಿ ಪತ್ನಿ ಡೋನಾ ನೀಡಿರುವ ಹೇಳಿಕೆಯು ರಾಜಕೀಯ ರಂಗದಲ್ಲಿ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಗಂಗೂಲಿ ಸಕ್ರಿಯ ರಾಜಕಾರಣ ಪ್ರವೇಶಿಸುವ ವದಂತಿಗಳಿಗೆ ಅವರ ಮಾತುಗಳು ಇಂಬು ನೀಡಿವೆ.

ಗಂಗೂಲಿ ಮತ್ತು ಅವರ ಪತ್ನಿ ಡೋನಾ ಶನಿವಾರ ಬೆಳಿಗ್ಗೆ ಕೋಲ್ಕತ್ತದ ಖಾಸಗಿ ಆಸ್ಪತ್ರೆಯೊಂದರ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು. ಅಲ್ಲಿ ಸೇರಿದ್ದ ಮಾಧ್ಯಮ ಪ್ರತಿನಿಧಿಗಳು, ಗಂಗೂಲಿ ಸಕ್ರಿಯ ರಾಜಕಾರಣ ಪ್ರವೇಶಿಸುವ ಬಗ್ಗೆ ಕೇಳಿದ ಪ್ರಶ್ನೆಗೆ ಡೋನಾ ನೀಡಿದ ಪ್ರತಿಕ್ರಿಯೆ ಸಂಚಲನ ಮೂಡಿಸಿದೆ.

‘ಊಹೆ ಮಾಡಿಕೊಳ್ಳುವುದು ಜನರ ಕೆಲಸ. ಅಂತಹದ್ದೇನಾದರೂ ಆದರೆ ಅದು ಪ್ರತಿಯೊಬ್ಬರಿಗೂ ತಿಳಿಯಲಿದೆ. ಆದರೆ, ಸೌರವ್ ಅವರೇನಾದರೂ ರಾಜಕೀಯಕ್ಕೆ ಬಂದರೆ ಉತ್ತಮ ಕೆಲಸ ಮಾಡುತ್ತಾರೆ. ಜನರ ಕಲ್ಯಾಣ ಕಾರ್ಯ ಮಾಡುತ್ತಾರೆ ಎಂದು ನಾನು ಹೇಳಬಲ್ಲೆ’ ಎಂದು ಹೇಳುವ ಮೂಲಕ ಆಶ್ಚರ್ಯ ಮೂಡಿಸಿದ್ದಾರೆ.

ADVERTISEMENT

ಶುಕ್ರವಾರ ಸಂಜೆ ಅಮಿತ್ ಶಾ ಅವರೊಂದಿಗಿನ ಔತಣಕೂಟದಲ್ಲಿ ರಾಜಕೀಯದ ಬಗ್ಗೆ ಚರ್ಚೆ ನಡೆಯಲಿಲ್ಲ ಎಂದೂ ಡೊನಾ ಸ್ಪಷ್ಟಪಡಿಸಿದರು.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೂ ನಮ್ಮ ಕುಟುಂಬಕ್ಕೆ ತುಂಬಾ ಆತ್ಮೀಯರು ಎಂದು ಅವರು ಇದೇ ವೇಳೆ ತಿಳಿಸಿದರು.

ರಾಜ್ಯ ಸಾರಿಗೆ ಸಚಿವ ಮತ್ತು ಕೋಲ್ಕತ್ತ ಮುನ್ಸಿಪಲ್ ಕಾರ್ಪೊರೇಷನ್ (ಕೆಎಂಸಿ) ಮೇಯರ್ ಫಿರ್ಹಾದ್ ಹಕೀಮ್ ಅವರು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಗಂಗೂಲಿ ದಂಪತಿ ಜತೆಗೆ ಅವರೂ ವೇದಿಕೆಯಲ್ಲಿ ಆಸೀನರಾಗಿದ್ದರು.

ದಕ್ಷಿಣ ಕೋಲ್ಕತ್ತಾದ ಬೆಹಲಾದಲ್ಲಿರುವ ಗಂಗೂಲಿ ಅವರ ನಿವಾಸಕ್ಕೆ ಶುಕ್ರವಾರ ಸಂಜೆ ಭೇಟಿ ನೀಡಿದ್ದ ಅಮಿತ್‌ ಶಾ ಅವರೊಂದಿಗೆ ರಾಜ್ಯ ಬಿಜೆಪಿ ಅಧ್ಯಕ್ಷ ಸುಕಾಂತ ಮಜುಂದಾರ್ ಮತ್ತು ಪಶ್ಚಿಮ ಬಂಗಾಳದ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಅವರೂ ಇದ್ದರು.

ರಾಜಕೀಯ ಸೇರುವ ಮಾತುಗಳನ್ನು ಸೌರವ್‌ ಗಂಗೂಲಿ ಈಗಾಗಲೇ ತಳ್ಳಿ ಹಾಕಿದ್ದಾರೆ. ವದಂತಿಗಳಲ್ಲಿ ಯಾವುದೇ ಸತ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಆದರೆ, ಶನಿವಾರ ಬೆಳಿಗ್ಗೆ ಡೋನಾ ಅವರು ನೀಡಿರುವ ಹೇಳಿಕೆಯು ಆ ವದಂತಿಗಳಿಗೆ ಮರುಜೀವ ನೀಡಿದೆ.

ಪಶ್ಚಿಮ ಬಂಗಾಳದ ರಾಜಕೀಯ ನಾಯಕರಿಗೆ ಗಂಗೂಲಿ ಯಾವಾಗಲೂ ನೆಚ್ಚಿನ ವ್ಯಕ್ತಿ. ಮಾಜಿ ಮುಖ್ಯಮಂತ್ರಿ, ಬುದ್ಧದೇವ್ ಭಟ್ಟಾಚಾರ್ಯ ಅವರಿಗೂ ಗಂಗೂಲಿ ಆಪ್ತರಾಗಿದ್ದರು.

ಗಂಗೂಲಿ ಅವರು ಬಿಜೆಪಿ ಸಿಎಂ ಅಭ್ಯರ್ಥಿಯಾಗುವ ಸಾಧ್ಯತೆಗಳಿವೆ ಎಂದು 2021ರ ವಿಧಾನಸಭೆ ಚುನಾವಣೆಗೂ ಮುನ್ನ ಸುದ್ದಿ ಹರಿದಾಡಿತ್ತು. ಆದರೆ, ಅಂತಿಮವಾಗಿ ಅವುಗಳೆಲ್ಲ ಹುಸಿಯಾಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.