ADVERTISEMENT

ಮಹಿಳಾ ಪ್ರಯಾಣಿಕರ ಸುರಕ್ಷತೆಗೆ ‘ಆಪರೇಷನ್ ಮೈ ಸಹೇಲಿ‘

ಆಗ್ನೇಯ ರೈಲ್ವೆ ವಿಭಾಗದಿಂದ ಪ್ರಾಯೋಗಿಕ ಯೋಜನೆ

ಪಿಟಿಐ
Published 30 ಸೆಪ್ಟೆಂಬರ್ 2020, 8:06 IST
Last Updated 30 ಸೆಪ್ಟೆಂಬರ್ 2020, 8:06 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೋಲ್ಕತ್ತ: ಮಹಿಳಾ ಪ್ರಯಾಣಿಕರಿಗೆ ಹೆಚ್ಚಿನ ಭದ್ರತೆ ಒದಗಿಸುವ ದೃಷ್ಟಿಯಿಂದ ಆಗ್ನೇಯ ರೈಲ್ವೆ ವಿಭಾಗ ‘ಆಪರೇಷನ್ ಮೈ ಸಹೇಲಿ‘ ಎಂಬ ಹೊಸ ಯೋಜನೆಯೊಂದನ್ನು ಆರಂಭಿಸಿದೆ.

ಇದೊಂದು ಪ್ರಾಯೋಗಿಕ ಯೋಜನೆ. ಆರಂಭಿಕವಾಗಿ ಸೆಪ್ಟೆಂಬರ್‌ 18ರಿಂದ ಹೌರಾ–ಯಶವಂತಪುರ ತುರಂತೊ ವಿಶೇಷ ರೈಲು, ಹೌರಾ–ಅಹ್ಮದಾಬಾದ್ ವಿಶೇಷ ರೈಲು ಮತ್ತು ಹೌರಾ–ಮುಂಬೈ ವಿಶೇಷ ರೈಲುಗಳಲ್ಲಿ ಅನುಷ್ಠಾನಗೊಳಿಸಲಾಗಿದೆ.

ಪ್ರಯಾಣ ಆರಂಭಿಸುವ ಸ್ಥಳದಿಂದ, ತಲುಪುವ ಸ್ಥಳದವರೆಗೆ ಮಹಿಳಾ ಪ್ರಯಾಣಿಕರಿಗೆ ರಕ್ಷಣೆ ನೀಡುವುದು ಈ ಯೋಜನೆ ಉದ್ದೇಶ.

ADVERTISEMENT

ಯೋಜನೆಯ ವಿವರ ನೀಡಿದಆಗ್ನೇಯ ರೈಲ್ವೆ ವಿಭಾಗದ ಇನ್‌ಸ್ಪೆಕ್ಟರ್ ಜನರಲ್ ಹಾಗೂ ಪ್ರಧಾನ ಮುಖ್ಯ ಭದ್ರತಾ ಆಯುಕ್ತ ಡಿ.ಬಿ.ಕಸಾರ್, ‘ಮಹಿಳಾ ಸಬ್‌ ಇನ್‌ಸ್ಪೆಕ್ಟರ್‌ಗಳನ್ನೊಳಗೊಂಡ ತಂಡ, ಪ್ರಯಾಣ ಆರಂಭಿಸುವ ಸ್ಥಳದಲ್ಲಿ ಮಹಿಳಾ ಪ್ರಯಾಣಿಕರಿಗೆ ಕೆಲವೊಂದು ಮುನ್ನೆಚ್ಚರಿಕೆ ಕ್ರಮಗಳು ಮತ್ತು ತುರ್ತು ಸಂದರ್ಭಗಳಲ್ಲಿ ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆಗಳನ್ನು ನೀಡುತ್ತದೆ. ತಂಡದ ಸದಸ್ಯರು ಪ್ರಯಾಣಿಕರ ಆಸನದ ಸಂಖ್ಯೆಗಳನ್ನು ದಾಖಲಿಸಿಕೊಳ್ಳುತ್ತಾರೆ. ಜತೆಗೆ ಅವರ ಸಂಪರ್ಕ ಸಂಖ್ಯೆಗಳನ್ನು ಸಂಗ್ರಹಿಸಿಕೊಂಡು, ಪ್ರಯಾಣದುದ್ದಕ್ಕೂ ಅವರೊಂದಿಗೆ ಸಂಪರ್ಕದಲ್ಲಿರುತ್ತಾರೆ. ಎಲ್ಲ ನಿಗದಿತ ನಿಲುಗಡೆ ತಾಣಗಳು ಮತ್ತು ಪ್ರಯಾಣಿಕರು ತಲುಪುವ ಕೊನೆಯ ನಿಲ್ದಾಣಕ್ಕೂ, ಮಹಿಳಾ ಪ್ರಯಾಣಿಕರ ಮಾಹಿತಿಯನ್ನು ರವಾನಿಸಲಾಗಿರುತ್ತದೆ‘ ಎಂದು ವಿವರಿಸಿದರು.

‘ಈ ಯೋಜನೆ ಮಹಿಳಾ ಪ್ರಯಾಣಿಕರಿಗೆ ಪ್ರಯಾಣದ ಸಮಯದಲ್ಲಿ ಸುರಕ್ಷಿತ ಹಾಗೂ ಆರಾಮದಾಯಕ ವಾತಾವರಣ ಕಲ್ಪಿಸುವ ಪ್ರಯತ್ನವಾಗಿದೆ‘ ಎಂದು ಕಸರ್ ತಿಳಿಸಿದ್ದಾರೆ.

‘ನಿರ್ಭಯಾ ನಿಧಿ‘ಯಡಿ ಈ ಯೋಜನೆಯನ್ನು ಕಾರ್ಯಗತಗೊಳಿಸಲಾಗುತ್ತಿದೆ. ರೈಲ್ವೆ ಇಲಾಖೆಯ ಯಾವುದೇ ಅನುದಾನವನ್ನು ಇದಕ್ಕೆ ಬಳಸಲಾಗುತ್ತಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.