ADVERTISEMENT

ದಕ್ಷಿಣ ರಾಜ್ಯಗಳ ಜಲಾಶಯಗಳಲ್ಲಿ ನೀರಿನ ಸಂಗ್ರಹ ಮಟ್ಟ ಕೇವಲ ಶೇ 17: CWC

ಜಲಾಶಯಗಳಲ್ಲಿ ನೀರು ಸಂಗ್ರಹ ಕುಸಿತ * 10 ವರ್ಷಗಳ ಸರಾಸರಿಗಿಂತ ಕಡಿಮೆ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2024, 15:29 IST
Last Updated 26 ಏಪ್ರಿಲ್ 2024, 15:29 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದಕ್ಷಿಣ ರಾಜ್ಯಗಳಾದ ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ಕೇರಳದ ಜಲಾಶಯಗಳಲ್ಲಿ ನೀರಿನ ಸಂಗ್ರಹ ಮಟ್ಟ ಐತಿಹಾಸಿಕ ಸರಾಸರಿಗಿಂತ ಗಣನೀಯವಾಗಿ ಕುಸಿದಿದೆ.

ಒಟ್ಟು ಸಾಮರ್ಥ್ಯದಲ್ಲಿನ ಶೇ 17ರಷ್ಟು ಮಾತ್ರ ನೀರಿನ ಸಂಗ್ರಹವನ್ನು ಹೊಂದಿವೆ ಎಂದು ಕೇಂದ್ರ ಜಲ ಆಯೋಗದ (ಸಿಡಬ್ಲ್ಯುಸಿ) ಇತ್ತೀಚಿನ ವರದಿ ತಿಳಿಸಿದೆ.

ದೇಶದ ವಿವಿಧ ಪ್ರದೇಶಗಳಲ್ಲಿನ ಜಲಾಶಯಗಳ ಸಂಗ್ರಹ ಮಟ್ಟದ ಕುರಿತು ಆಯೋಗವು ಬುಲೆಟಿನ್‌ ಬಿಡುಗಡೆ ಮಾಡಿದೆ. ದಕ್ಷಿಣ ರಾಜ್ಯಗಳಲ್ಲಿ ಸಿಡಬ್ಲ್ಯುಸಿ ಮೇಲ್ವಿಚಾರಣೆಯಲ್ಲಿ ಇರುವ 42 ಜಲಾಶಯಗಳಲ್ಲಿ ಒಟ್ಟು 53.334 ಬಿಸಿಎಂ (ಶತಕೋಟಿ ಘನ ಮೀಟರ್‌ಗಳು) ಸಂಗ್ರಹಣಾ ಸಾಮರ್ಥ್ಯ ಇದೆ. ಆದರೆ, ಪ್ರಸ್ತುತ ಅವುಗಳಲ್ಲಿ ಕೇವಲ 8.865 ಬಿಸಿಎಂನಷ್ಟು (ಶೇ 17) ನೀರು ಸಂಗ್ರಹವಿದೆ ಎಂದು ಅದು ಮಾಹಿತಿ ನೀಡಿದೆ.

ADVERTISEMENT

ಕಳೆದ ವರ್ಷ ಇದೇ ಅವಧಿಯಲ್ಲಿ ಶೇ 29ರಷ್ಟು ನೀರು ಸಂಗ್ರಹವಿತ್ತು. ಅಲ್ಲದೆ ಹಿಂದಿನ 10 ವರ್ಷಗಳ ಸರಾಸರಿ ಸಂಗ್ರಹ ಮಟ್ಟ ಶೇ 23ರಷ್ಟು ಆಗಿದ್ದು, ಅದಕ್ಕಿಂತ ಕಡಿಮೆ ಸಂಗ್ರಹ ಈ ವರ್ಷ ದಾಖಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಜಲಾಶಯಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಕುಸಿದಿರುವುದರಿಂದ ದಕ್ಷಿಣದ ರಾಜ್ಯಗಳಲ್ಲಿ ನೀರಿನ ಕೊರತೆ ಎದುರಾಗಿದ್ದು, ನೀರಾವರಿ, ಕುಡಿಯುವ ನೀರು ಪೂರೈಕೆ ಮತ್ತು ಜಲ ವಿದ್ಯುತ್‌ಗೆ ಸಮಸ್ಯೆ ಎದುರಾಗಿದೆ ಎಂದೂ ಅದು ಹೇಳಿದೆ.

ಆದರೆ, ಇದಕ್ಕೆ ವ್ಯತಿರಿಕ್ತ ಎಂಬಂತೆ ಅಸ್ಸಾಂ, ಒಡಿಶಾ, ಪಶ್ಚಿಮ ಬಂಗಾಳದಂತಹ ರಾಜ್ಯಗಳನ್ನು ಒಳಗೊಂಡಿರುವ ಪೂರ್ವ ಪ್ರದೇಶದಲ್ಲಿ ಕಳೆದ ವರ್ಷ ಮತ್ತು ಹಿಂದಿನ 10 ವರ್ಷಗಳ ಸರಾಸರಿಗಿಂತ ಈ ವರ್ಷ ನೀರಿನ ಸಂಗ್ರಹ ಹೆಚ್ಚಿದೆ. ಈ ಪ್ರದೇಶಗಳಲ್ಲಿನ 23 ಜಲಾಶಯಗಳ ಒಟ್ಟು ಸಂಗ್ರಹಣಾ ಸಾಮರ್ಥ್ಯ 20.430 ಬಿಸಿಎಂ ಆಗಿದ್ದು, ಪ್ರಸ್ತುತ 7.889 (ಶೇ 39) ಬಿಸಿಎಂನಷ್ಟು ಸಂಗ್ರಹ ಇದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಶೇ 34 ಹಾಗೂ ಹತ್ತು ವರ್ಷಗಳ ಸರಾಸರಿ ಸಂಗ್ರಹ ಮಟ್ಟ ಶೇ 34 ಆಗಿತ್ತು ಎಂದು ಅಂಕಿ ಅಂಶಗಳು ತಿಳಿಸುತ್ತವೆ.

ದೇಶದ ಇತರ ಭಾಗಗಳಲ್ಲಿ ಪರಿಸ್ಥಿತಿ ಅಷ್ಟೇನು ಆಶಾದಾಯಕವಾಗಿಲ್ಲ. ಗುಜರಾತ್‌, ಮಹಾರಾಷ್ಟ್ರ ಒಳಗೊಂಡಿರುವ ಪಶ್ಚಿಮ ಭಾಗದಲ್ಲಿನ 49 ಜಲಾಶಯಗಳಲ್ಲಿ ಪ್ರಸ್ತುತ 11.771 ಬಿಸಿಎಂನಷ್ಟು ನೀರಿನ ಸಂಗ್ರಹ ಇದ್ದು, ಅದು ಒಟ್ಟು ಸಾಮರ್ಥ್ಯದ ಶೇ 31.7ರಷ್ಟಾಗುತ್ತದೆ. ಕಳೆದ ವರ್ಷ ಈ ಜಲಾಶಯಗಳಲ್ಲಿ ಶೇ 38ರಷ್ಟು ಹಾಗೂ 10 ವರ್ಷಗಳ ಸರಾಸರಿ ಸಂಗ್ರಹ ಶೇ 32.1ರಷ್ಟಿದ್ದು, ಈ ವರ್ಷ ಸಂಗ್ರಹ ಕಡಿಮೆಯಾಗಿದೆ.

ಅದೇ ರೀತಿ ಉತ್ತರ ಮತ್ತು ಮಧ್ಯ ಪ್ರದೇಶಗಳ ಜಲಾಶಯಗಳಲ್ಲೂ ಐತಿಹಾಸಿಕ ಸರಾಸರಿಗಿಂತ ನೀರಿನ ಸಂಗ್ರಹಣಾ ಮಟ್ಟ ಕುಸಿದಿದೆ. ಬ್ರಹ್ಮಪುತ್ರ, ನರ್ಮದಾ ಮತ್ತು ತಾಪಿಯಂತಹ ನದಿ ಜಲಾನಯನ ಪ್ರದೇಶಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಟ್ಟದಲ್ಲಿ ನೀರಿನ ಶೇಖರಣೆ ಇದ್ದರೆ, ಕಾವೇರಿ, ಮಹಾನದಿ, ಪೆನ್ನಾರ್‌ ಸೇರಿದಂತೆ ಹಲವು ನದಿಗಳ ಜಲಾನಯನ ಪ್ರದೇಶದಲ್ಲಿ ನೀರಿನ ಕೊರತೆ ತೀವ್ರವಾಗಿದೆ ಎಂದು ವರದಿ ತಿಳಿಸಿದೆ.

ಅಂಕಿ ಅಂಶ

42 ದಕ್ಷಿಣ ರಾಜ್ಯಗಳಲ್ಲಿ ಸಿಡಬ್ಲ್ಯುಸಿ ಮೇಲ್ವಿಚಾರಣೆಯಲ್ಲಿರುವ ಜಲಾಶಯಗಳು

––

ಜಲಾಶಯಗಳ ಒಟ್ಟು ಸಂಗ್ರಹಣಾ ಸಾಮರ್ಥ್ಯ

53.334 ಬಿಸಿಎಂ (ಶತಕೋಟಿ ಘನ ಮೀಟರ್‌ಗಳು)

––

ಪ್ರಸ್ತುತ ಲಭ್ಯವಿರುವ ನೀರು

8.865 ಬಿಸಿಎಂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.