ADVERTISEMENT

ಎಸ್‌ಪಿ–ಬಿಎಸ್‌ಪಿಗೆ 7 ಕ್ಷೇತ್ರ ಬಿಟ್ಟ ಕಾಂಗ್ರೆಸ್

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2019, 20:15 IST
Last Updated 17 ಮಾರ್ಚ್ 2019, 20:15 IST
   

ಲಖನೌ:ಸಮಾಜವಾದಿ ಪಕ್ಷದ (ಎಸ್‌ಪಿ) ಮುಖಂಡ ಮುಲಾಯಂ ಸಿಂಗ್ ಯಾದವ್ ಅವರ ಕುಟುಂಬದ ಸದಸ್ಯರು ಮತ್ತು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರು ಸ್ಪರ್ಧಿಸುವ ಲೋಕಸಭಾ ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವುದಿಲ್ಲ ಎಂದು ಉತ್ತರ ಪ್ರದೇಶ ಕಾಂಗ್ರೆಸ್ ಹೇಳಿದೆ.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರು ಸ್ಪರ್ಧಿಸುವ ಅಮೇಠಿ ಮತ್ತು ರಾಯಬರೇಲಿಯಲ್ಲಿ ಎಸ್‌ಪಿ ಮತ್ತು ಬಿಎಸ್‌ಪಿ ಮೈತ್ರಿಕೂಟವು ತಮ್ಮ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವುದಿಲ್ಲ ಎಂದು ಈಗಾಗಲೇ ಘೋಷಿಸಿದೆ.

‘ಸ್ಪರ್ಧಿಸುವ ಏಳು ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವುದಿಲ್ಲ’ ಎಂದು ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ರಾಜ್ ಬಬ್ಬರ್ ಹೇಳಿದ್ದಾರೆ.

ADVERTISEMENT
ಒಮರ್ ಅಬ್ದುಲ್ಲಾ

ಮೈತ್ರಿಗೆ ಒಮರ್ ಅಬ್ದುಲ್ಲಾ ಷರತ್ತು

ಶ್ರೀನಗರ: ಕಾಶ್ಮೀರ ಕಣಿವೆಯ ಮೂರೂ ಸ್ಥಾನಗಳಲ್ಲಿ ಸ್ಪರ್ಧಿಸುವ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಬೇಡಿಕೆಗೆ ಒಪ್ಪುವುದಾದರೆ ಕಾಂಗ್ರೆಸ್ ಜತೆ ಚುನಾವಣಾ ಪೂರ್ವ ಮೈತ್ರಿ ಮಾತುಕತೆ ಆರಂಭಿಸುತ್ತೇವೆ ಎಂದು ಎನ್‌ಸಿ ನಾಯಕ ಒಮರ್ ಅಬ್ದುಲ್ಲಾ ಸ್ಪಷ್ಟಪಡಿಸಿದ್ದಾರೆ.

‘ಮೈತ್ರಿ ಕುರಿತು ಕಾಂಗ್ರೆಸ್‌ನಿಂದ ಆಹ್ವಾನ ಬಂದಿದೆ. ನಮ್ಮ ಅಭ್ಯರ್ಥಿಗಳು ಕಣಿವೆಯಲ್ಲಿ ಸ್ಪರ್ಧಿಸಲು ಸಾಧ್ಯವಾದರೆ ಮಾತ್ರ ಮಾತುಕತೆ ಎಂಬುದನ್ನು ಸ್ಪಷ್ಟಪಡಿಸುತ್ತೇನೆ. ಕಾಂಗ್ರೆಸ್ ಇದಕ್ಕೆ ಒಪ್ಪುವುದಾದರೆ ಉಳಿದ ಸ್ಥಾನಗಳ ಕುರಿತು ಅದರ ನಾಯಕರ ಜೊತೆ ಪಕ್ಷ ಚರ್ಚಿಸಲಿದೆ. ಅವರ ಪ್ರತಿಕ್ರಿಯೆ ಏನಿರುತ್ತದೆಯೋ ಕಾದು ನೋಡೋಣ’ ಎಂದು ಒಮರ್ ಹೇಳಿದ್ದಾರೆ.

ಜಮ್ಮು–ಕಾಶ್ಮೀರ ರಾಜ್ಯದಲ್ಲಿ ಆರು ಲೋಕಸಭಾ ಕ್ಷೇತ್ರಗಳಿವೆ. ಕಾಶ್ಮೀರ ಕಣಿವೆಯಲ್ಲಿ ಮೂರು, ಜಮ್ಮುವಿನಲ್ಲಿ ಎರಡು ಹಾಗೂ ಲಡಾಕ್‌ ವಿಭಾಗದಲ್ಲಿ ಒಂದು ಕ್ಷೇತ್ರವಿದೆ. ಶ್ರೀನಗರದಿಂದ ಎನ್‌ಸಿ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ, ಬಾರಾಮುಲ್ಲಾದಿಂದ ಕಾಶ್ಮೀರ ವಿಧಾನಸಭೆಯ ಮಾಜಿ ಸ್ಪೀಕರ್ ಅಕ್ಬರ್ ಲೋನ್ ಹಾಗೂ ಜಮ್ಮು–ಪೂಂಛ್ ಕ್ಷೇತ್ರದಿಂದ ಮಾಜಿ ಮುಖ್ಯಕಾರ್ಯದರ್ಶಿ ಬಿ.ಆರ್.ಕುಂದಲ್ ಅವರು ಸ್ಪರ್ಧಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.