ADVERTISEMENT

BSP ಮಾಜಿ ಶಾಸಕ ರಾಜು ಪಾಲ್ ಹತ್ಯೆ | 7 ಆರೋಪಿಗಳು ದೋಷಿ: ಸಿಬಿಐ ಕೋರ್ಟ್ ತೀರ್ಪು

ಪಿಟಿಐ
Published 29 ಮಾರ್ಚ್ 2024, 10:43 IST
Last Updated 29 ಮಾರ್ಚ್ 2024, 10:43 IST
<div class="paragraphs"><p>(ಪ್ರಾತಿನಿಧಿಕ ಚಿತ್ರ)</p></div>

(ಪ್ರಾತಿನಿಧಿಕ ಚಿತ್ರ)

   

ನವದೆಹಲಿ: ಬಿಎಸ್‌ಪಿ ಮಾಜಿ ಶಾಸಕ ರಾಜು ಪಾಲ್‌ ಹತ್ಯೆ ಪ್ರಕರಣದಲ್ಲಿ ಏಳು ಮಂದಿ ಆರೋಪಿಗಳನ್ನು ದೋಷಿ ಎಂದು ಲಖನೌದ ವಿಶೇಷ ಸಿಬಿಐ ನ್ಯಾಯಾಲಯ ಶುಕ್ರವಾರ ತೀರ್ಪು ನೀಡಿದೆ.

2005ರಲ್ಲಿ ನಡೆದ ಈ ಪ್ರಕರಣದಲ್ಲಿ ಗ್ಯಾಂಗ್‌ಸ್ಟರ್ ಅತೀಕ್ ಅಹ್ಮದ್ ಮತ್ತು ಆತನ ಸಹೋದರ ಅಶ್ರಫ್ ಕೂಡ ಆರೋಪಿಗಳಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅತೀಕ್ ಹಾಗೂ ಅಶ್ರಫ್ ಸಾವಿನ ನಂತರ ಅವರ ವಿರುದ್ಧದ ವಿಚಾರಣೆಯನ್ನು ರದ್ದುಗೊಳಿಸಲಾಗಿತ್ತು.

ADVERTISEMENT

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ನಾಯಕ ರಾಜು ಪಾಲ್ ಅವರನ್ನು 2005ರ ಜನವರಿ 25 ರಂದು ಧುಮನ್‌ಗಂಜ್‌ನಲ್ಲಿ ಗುಂಡಿಕ್ಕಿ ಕೊಲ್ಲಲಾಗಿತ್ತು. 2004ರ ಉಪಚುನಾವಣೆಯಲ್ಲಿ ಗ್ಯಾಂಗ್‌ಸ್ಟರ್ ಅತೀಕ್ ಅಹ್ಮದ್ ಸಹೋದರ ಅಶ್ರಫ್‌ನನ್ನು ಸೋಲಿಸಿದ ಬಳಿಕ ರಾಜಕೀಯ ವೈಷಮ್ಯದಿಂದ ರಾಜು ಪಾಲ್ ಅವರನ್ನು ಹತ್ಯೆ ಮಾಡಲಾಗಿತ್ತು.

2016ರಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ಪ್ರಕರಣದ ತನಿಖೆ ಕೈಗೆತ್ತಿಕೊಂಡಿತ್ತು. ಕೊಲೆ ಪ್ರಕರಣದಲ್ಲಿ ರಂಜೀತ್ ಪಾಲ್, ಅಬಿದ್, ಫರ್ಹಾನ್ ಅಹ್ಮದ್, ಇಸ್ರಾರ್ ಅಹ್ಮದ್, ಜಾವೇದ್, ಗುಲ್ಹಾಸನ್ ಮತ್ತು ಅಬ್ದುಲ್ ಕವಿ ಅವರನ್ನು ಅಪರಾಧಿಗಳೆಂದು ಲಖನೌದ ವಿಶೇಷ ಸಿಬಿಐ ನ್ಯಾಯಾಲಯ ತೀರ್ಪು ನೀಡಿದೆ.

ನ್ಯಾಯಾಲಯದ ತೀರ್ಪನ್ನು ರಾಜು ಪಾಲ್ ಅವರ ಪತ್ನಿ ಪೂಜಾ ಪಾಲ್ ಸ್ವಾಗತಿಸಿದ್ದಾರೆ. 'ನ್ಯಾಯಾಲಯದ ತೀರ್ಪಿನಿಂದ ನಾನು ತೃಪ್ತಳಾಗಿದ್ದೇನೆ. ಆದರೆ ಅಪರಾಧಿಗಳಿಗೆ ಮರಣದಂಡನೆ ವಿಧಿಸಬೇಕು' ಎಂದು ಅವರು ಆಗ್ರಹಿಸಿದ್ದಾರೆ.

ಹತ್ಯೆಗೀಡಾಗಿದ್ದ ಅತೀಕ್–ಅಶ್ರಫ್ :

ಕಳೆದ ವರ್ಷ ಏಪ್ರಿಲ್ 15ರಂದು ಪ್ರಯಾಗ್‌ರಾಜ್‌ನಲ್ಲಿರುವ ವೈದ್ಯಕೀಯ ಕಾಲೇಜಿಗೆ ಆರೋಗ್ಯ ತಪಾಸಣೆಗಾಗಿ ಅತೀಕ್ ಹಾಗೂ ಆತನ ಸಹೋದರನನ್ನು ಪೊಲೀಸ್ ಸಿಬ್ಬಂದಿ ಬೆಂಗಾವಲಿನಲ್ಲಿ ಕರೆದೊಯ್ಯುತ್ತಿದ್ದರು. ಈ ವೇಳೆ ಎದುರಾದ ಪತ್ರಕರ್ತರ ಪ್ರಶ್ನೆಗಳಿಗೆ ಅತೀಕ್ ಉತ್ತರಿಸುತ್ತಿದ್ದನು. ಆಗ ಪತ್ರಕರ್ತರ ಸೋಗಿನಲ್ಲಿದ್ದ ಮೂವರು ವ್ಯಕ್ತಿಗಳು ಏಕಾಏಕಿ ಕೈಕೋಳದ ಬಿಗಿದಿದ್ದ ಅತೀಕ್ ಮತ್ತು ಅಶ್ರಫ್‌ನನ್ನು ಗುಂಡಿಕ್ಕಿ ಕೊಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.