ADVERTISEMENT

ನಿದ್ರೆಯಿಲ್ಲದ ರಾತ್ರಿ ಕಳೆದೆ: ಸಭಾಪತಿ ಎಂ.ವೆಂಕಯ್ಯನಾಯ್ಡು

‘ಪ್ರಜಾಪ್ರಭುತ್ವದ ದೇಗುಲ ಸದನದ ಪಾವಿತ್ರ್ಯತೆಗೆ ಧಕ್ಕೆ’

ಪಿಟಿಐ
Published 11 ಆಗಸ್ಟ್ 2021, 9:39 IST
Last Updated 11 ಆಗಸ್ಟ್ 2021, 9:39 IST
ಎಂ.ವೆಂಕಯ್ಯನಾಯ್ಡು
ಎಂ.ವೆಂಕಯ್ಯನಾಯ್ಡು   

ನವದೆಹಲಿ: ಕೆಲವು ವಿರೋಧ ಪಕ್ಷದ ಸಂಸದರು ಸಭಾಪತಿ ಪೀಠದ ಮುಂಭಾಗದಲ್ಲಿರುವ ಮೇಜಿಗೆ ಹತ್ತಿ, ಗದ್ದಲ ಸೃಷ್ಟಿಸಿದ ಬಗ್ಗೆ ರಾಜ್ಯಸಭಾ ಸಭಾಪತಿ ಎಂ.ವೆಂಕಯ್ಯನಾಯ್ಡು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ರಾಜ್ಯಸಭೆಯಲ್ಲಿ ಮಂಗಳವಾರ ನೂತನ ಕೃಷಿ ಕಾಯ್ದೆ ಬಗ್ಗೆ ಚರ್ಚೆ ಆರಂಭವಾಗುತ್ತಿದ್ದಂತೆ ವಿರೋಧ ಪಕ್ಷದ ಕೆಲ ಸದಸ್ಯರು ತೀವ್ರ ಗದ್ದಲ ಮಾಡಿ ಸಭಾಪತಿ ಪೀಠದ ಮುಂಭಾಗದಲ್ಲಿರುವ ಮೇಜಿಗೆ ಹತ್ತಿ ಕಪ್ಪು ಬಟ್ಟೆ ಪ್ರದರ್ಶಿಸಿದ್ದರು. ಅಲ್ಲದೆ ದಾಖಲೆಗಳನ್ನು ಎಸೆದಿದ್ದರು.

ಬುಧವಾರ ಸದನದಲ್ಲಿ ಮಾತನಾಡಿದ ವೆಂಕಯ್ಯನಾಯ್ಡು, ‘ಪ್ರಜಾಭುತ್ವದ ದೇಗುಲದಲ್ಲಿ(ಸಂಸತ್ತು) ನಡೆದ ಈ ಗದ್ದಲದಿಂದಾಗಿ ನಾನು ನಿದ್ದೆಯಿಲ್ಲದ ರಾತ್ರಿ ಕಳೆದೆ. ರಾಜ್ಯಸಭೆಯಲ್ಲಿ ಅಧಿಕಾರಿಗಳು, ವರದಿಗಾರರು, ಪ್ರಧಾನ ಕಾರ್ಯದರ್ಶಿಗಳು ಕುಳಿತುಕೊಳ್ಳುವ ಮೇಜಿನ ಜಾಗವನ್ನು ದೇಗುಲದ ಗರ್ಭಗುಡಿ ಎಂದು ಪರಿಗಣಿಸಲಾಗುತ್ತದೆ’ ಎಂದು ಅವರು ಭಾವುಕರಾದರು.

ADVERTISEMENT

‘ಈ ಘಟನೆಯಿಂದ ನನಗೆ ಬಹಳ ಬೇಸರವಾಗಿದೆ. ದೇವಸ್ಥಾನದಲ್ಲಿ ಗರ್ಭಗುಡಿ ತನಕ ಮಾತ್ರ ಭಕ್ತರು ಪ್ರವೇಶಿಸಬಹುದು. ಅದರಂತೆ ಸದನಕ್ಕೂ ಒಂದು ಪಾವಿತ್ರ್ಯತೆ ಇದೆ. ಈ ಗದ್ದಲದಿಂದ ಸದನದ ಪಾವಿತ್ರ್ಯತೆ ನಾಶವಾಗಿದೆ’ ಎಂದು ಅವರು ಹೇಳಿದರು.

‘ಮಂಗಳವಾರ ಸದನದಲ್ಲಿ ಚರ್ಚೆಗಾಗಿ ಪಟ್ಟಿ ಮಾಡಲಾದ ವಿಷಯಗಳು ಈ ರೀತಿಯ ಗದ್ದಲ ಸೃಷ್ಟಿಯಾಗಲು ಸಾಧ್ಯವಿಲ್ಲ ಎಂದು ನಾನು ಭಾವಿಸಿದ್ದೆ. ಈ ‍ಪಟ್ಟಿಯಲ್ಲಿ ನೂತನ ಕೃಷಿ ಕಾಯ್ದೆಯೂ ಇತ್ತು. ಈ ವಿಷಯವಾಗಿ ಚರ್ಚಿಸಲು ಬಹುತೇಕ ನಾಯಕ ಕಾಯುತ್ತಿದ್ದರು. ಆದರೂ ಯಾಕೆ ಗದ್ದಲ ಸೃಷ್ಟಿಯಾಯಿತು ಎಂಬುದು ನನಗೆ ತಿಳಿಯುತ್ತಿಲ್ಲ’ ಎಂದರು.

‘ ರೈತರಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಲು ಸುವರ್ಣ ಅವಕಾಶ ಇತ್ತು. ಬಹುಶಃ ಸದನ ಕಾರ್ಯನಿರ್ವಹಿಸದಂತೆ ತಡೆಯುವುದೇ ಗದ್ದಲದ ಹಿಂದಿನ ಉದ್ದೇಶವಾಗಿರಬೇಕು’ ಎಂದು ಅವರು ಹೇಳಿದರು.

‘ಒಬ್ಬ ಸಭಾಪತಿಯಾಗಿ ಪ್ರಜಾಪ್ರಭುತ್ವದ ದೇಗುಲದಲ್ಲಿ ನಡೆದ ಈ ರೀತಿಯ ಘಟನೆಗಳ ಪರಿಣಾಮ ಏನಿರಬಹುದೆಂದು ಊಹಿಸಲು ನನಗೆ ಭಯವಾಗುತ್ತಿದೆ’ ಎಂದೂ ಅವರು ಆತಂಕ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.