ADVERTISEMENT

ಕಲ್ಕಿಯ 900 ಎಕರೆ ಆಸ್ತಿ ಜಪ್ತಿ

ಕರ್ನಾಟಕ, ತಮಿಳುನಾಡು, ಆಂಧ್ರದಲ್ಲಿ ಜಮೀನು

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2019, 19:12 IST
Last Updated 20 ಡಿಸೆಂಬರ್ 2019, 19:12 IST
ಕಲ್ಕಿ ಭಗವಾನ್‌
ಕಲ್ಕಿ ಭಗವಾನ್‌   

ಚೆನ್ನೈ: ಸ್ವಯಂ ಘೋಷಿತ ದೇವಮಾನವ ಕಲ್ಕಿ ಭಗವಾನ್‌ ಅವರ 900 ಎಕರೆ ಜಮೀನನ್ನು ಆದಾಯ ತೆರಿಗೆ ಇಲಾಖೆ ಜಪ್ತಿ ಮಾಡಿದೆ.

ತಮಿಳುನಾಡು ಗಡಿಯಲ್ಲಿರುವ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಸತ್ಯವೇದುವಿನಲ್ಲಿ 400ಕ್ಕೂ ಹೆಚ್ಚು ಎಕರೆ ಪ್ರದೇಶ ಹಾಗೂ ಉಳಿದ ಜಮೀನನ್ನು ಬೆಳಗಾವಿ, ಅರಣಿ, ಊಟಿ, ಮದುರೈ ಮತ್ತು ಕೊಯಮತ್ತೂರಿನಲ್ಲಿ ಜಪ್ತಿ ಮಾಡಲಾಗಿದೆ.

ಕಲ್ಕಿ ಭಗವಾನ್‌ ₹500 ಕೋಟಿ ಆದಾಯ ತೆರಿಗೆ ವಂಚಿಸಿರುವುದನ್ನು ಎರಡು ತಿಂಗಳ ಹಿಂದೆ ಇಲಾಖೆ ಪತ್ತೆ ಮಾಡಿತ್ತು. ಐದು ದಿನಗಳ ಕಾಲ ಆಶ್ರಮಗಳಲ್ಲಿ ನಡೆದಿದ್ದ ಶೋಧ ಕಾರ್ಯದಲ್ಲಿ ₹43.9 ಕೋಟಿ ನಗದು ಮತ್ತು 18 ಕೋಟಿ ಡಾಲರ್‌ ಹಾಗೂ ₹26 ಕೋಟಿ ಮೌಲ್ಯದ 88 ಕೆ.ಜಿ. ಚಿನ್ನವನ್ನು ವಶಪಡಿಸಿಕೊಳ್ಳಲಾಗಿತ್ತು. ಅಕ್ಟೋಬರ್‌ 16ರಂದು ನಡೆದಿದ್ದ ಈ ಕಾರ್ಯಾಚರಣೆಯನ್ನು ತಮಿಳುನಾಡು ಮತ್ತು ಆಂಧ್ರಪ್ರದೇಶದ 40ಕ್ಕೂ ಹೆಚ್ಚು ಸ್ಥಳಗಳಲ್ಲಿ ಕೈಗೊಳ್ಳಲಾಗಿತ್ತು. ಇವುಗಳಲ್ಲಿ ಆಶ್ರಮಗಳು ಸಹ ಸೇರಿದ್ದವು.

ADVERTISEMENT

ಈ ಸಂದರ್ಭದಲ್ಲಿ ಕಲ್ಕಿ ಭಗವಾನ್‌ ಮತ್ತು ಅವರ ಮಗ ಕೃಷ್ಣ ಹೊಂದಿದ್ದ ಆಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ಇದೇ ದಾಖಲೆಗಳ ಆಧಾರದ ಮೇಲೆ ಈಗ ಆಸ್ತಿಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.

ಆಶ್ರಮದ ಹಣವನ್ನು ಕೃಷ್ಣ ತನ್ನ ಕಂಪನಿಗಳಿಗೆ ವರ್ಗಾಯಿಸಿಕೊಂಡಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.

ಭಾರತೀಯ ಜೀವ ವಿಮಾದಲ್ಲಿ ಕ್ಲರ್ಕ್‌ ಆಗಿದ್ದ ಕಲ್ಕಿ ಭಗವಾನ್‌, 1990ರ ವೇಳೆಗೆ ಪ್ರಸಿದ್ಧಿ ಪಡೆದರು. ತಮಿಳುನಾಡು, ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ ಕಲ್ಕಿ ಭಗವಾನ್‌ಗೆ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳಿದ್ದಾರೆ. ದಕ್ಷಿಣ ಭಾರತದಾದ್ಯಂತ ಆಶ್ರಮಗಳನ್ನು ಸಹ ಸ್ಥಾಪಿಸಲಾಗಿದೆ.

ಕರ್ನಾಟಕದಲ್ಲೂ ಕಲ್ಕಿ ಭಗವಾನ್‌ ಮತ್ತು ಅಮ್ಮಾ ಭಗವಾನ್‌ ಆಶ್ರಮಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.