ADVERTISEMENT

ಎಸ್ಸೆಸ್ಸೆಲ್ಸಿ: ಈ ವರ್ಷದಿಂದ ‘ಆನ್‌ಲೈನ್‌ ಮಾರ್ಕ್ಸ್‌ ಪೋರ್ಟಿಂಗ್‌’

ಪರೀಕ್ಷಾ ಪ್ರಕ್ರಿಯೆ ಡಿಜಿಟಲೀಕರಣ

ಎಸ್.ರವಿಪ್ರಕಾಶ್
Published 20 ಫೆಬ್ರುವರಿ 2019, 20:05 IST
Last Updated 20 ಫೆಬ್ರುವರಿ 2019, 20:05 IST
   

ಬೆಂಗಳೂರು: ಇದೇ ಮೊದಲ ಬಾರಿಗೆ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ‘ಆನ್‌ಲೈನ್‌ ಮಾರ್ಕ್ಸ್‌ ಪೋರ್ಟಿಂಗ್‌’ ವ್ಯವಸ್ಥೆ ಜಾರಿಗೆ ತರಲಿದೆ.

ಕಳೆದ ಆಗಸ್ಟ್‌ನಲ್ಲಿ ನಡೆದ ಪೂರಕ ಪರೀಕ್ಷೆಯಲ್ಲಿ ಆನ್‌ಲೈನ್‌ ಮೂಲಕವೇ ವಿದ್ಯಾರ್ಥಿಗಳಿಗೆ ಅಂಕ ನಮೂದಿಸುವ ‘ಆನ್‌ಲೈನ್‌ ಮಾರ್ಕ್ಸ್‌ ಪೋರ್ಟಿಂಗ್’ ಅನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗಿತ್ತು. ಅದು ಯಶಸ್ವಿ ಆಗಿದ್ದರಿಂದ ಈ ಬಾರಿ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಮಂಡಳಿ ನಿರ್ದೇಶಕಿ ವಿ.ಸುಮಂಗಲಾ ‘ಪ್ರಜಾವಾಣಿ’ಗೆ ತಿಳಿಸಿದರು.

ವಿದ್ಯಾರ್ಥಿಗಳು ಪಡೆದ ಅಂಕವನ್ನು ಮೌಲ್ಯಮಾಪಕರು ಆನ್‌ಲೈನ್‌ ಮೂಲಕವೇ ವಿದ್ಯಾರ್ಥಿಯ ದತ್ತಾಂಶಕ್ಕೆ ಸೇರಿಸುತ್ತಾರೆ. ಇದರಿಂದ ಮೌಲ್ಯಮಾಪನ ನಂತರದ ಪ್ರಕ್ರಿಯೆ ಸರಳವಾಗಲಿದೆ ಎಂದರು.

ADVERTISEMENT

ಪ್ರವೇಶ ಪತ್ರ ಅಥವಾ ಅಂಕಪಟ್ಟಿಯಲ್ಲಿ ವಿದ್ಯಾರ್ಥಿಯ ಇನಿಷಿಯಲ್‌, ತಂದೆ, ತಾಯಿಯ ಹೆಸರಿನಲ್ಲಿ ವ್ಯತ್ಯಾಸವಾಗಿದ್ದರೆ, ಅವುಗಳನ್ನು ಆನ್‌ಲೈನ್‌ ಮೂಲಕವೇ ಬದಲಾವಣೆ ಮಾಡಬಹುದು. ಇದರಿಂದ ವಿದ್ಯಾರ್ಥಿಗಳು ಮತ್ತು ಪೋಷಕರು ಮಂಡಳಿಗೆ ಅಲೆದಾಡುವುದು ತಪ್ಪಲಿದೆ.

ಪ್ರವೇಶ ಪತ್ರಗಳನ್ನು ಆನ್‌ಲೈನ್‌ ಮೂಲಕವೇ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ತಪ್ಪುಗಳು ನುಸುಳಿದ್ದರೆ ಶಾಲೆಯ ಹಂತದಲ್ಲಿಯೇ ಸರಿಪಡಿಸಿಕೊಳ್ಳಲು ಅವಕಾಶವಿದೆ. ಬಳಿಕ ಪ್ರಿಂಟ್‌ ಔಟ್ ತೆಗೆದುಕೊಳ್ಳಬಹುದು ಎಂದು ಅವರು ಹೇಳಿದರು.

ವಿದ್ಯಾರ್ಥಿಗಳ ದತ್ತಾಂಶ: ವಿದ್ಯಾರ್ಥಿ ಪರೀಕ್ಷೆಗೆ ಕುಳಿತುಕೊಳ್ಳುವ ಹಂತದಲ್ಲೇ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಈ ಮೂಲಕ ಮಂಡಳಿ ಪ್ರತಿಯೊಬ್ಬ ವಿದ್ಯಾರ್ಥಿಯ ದತ್ತಾಂಶವನ್ನು ಸೃಷ್ಟಿಸುತ್ತದೆ. ಆ ಬಳಿಕ ಯಾವುದೇ ಒಬ್ಬ ವಿದ್ಯಾರ್ಥಿಯ ಪರೀಕ್ಷಾ ನೋಂದಣಿ ಸಂಖ್ಯೆಯನ್ನು ನಮೂದಿಸಿದರೆ ಸಾಕು, ಆತನ ಎಲ್ಲ ಮಾಹಿತಿಯೂ ಎಸ್ಸೆಸ್ಸೆಲ್ಸಿ ವೆಬ್‌ಸೈಟ್‌ನಲ್ಲಿ ಸಿಗುತ್ತದೆ ಎಂದರು.

ಪ್ರತಿ ವಿದ್ಯಾರ್ಥಿಗೂ ಸಂಬಂಧಿಸಿದಂತೆ 40 ಮಾಹಿತಿಗಳ ಸ್ಥಳಗಳನ್ನು ಮುಖ್ಯ ಶಿಕ್ಷಕರು ಎಚ್ಚರಿಕೆಯಿಂದ ಭರ್ತಿ ಮಾಡಬೇಕು. ಗಣಿತ ಮತ್ತು ವಿಜ್ಞಾನ ವಿಷಯದಲ್ಲಿ ತಲಾ 20 ಆಂತರಿಕ ಅಂಕಗಳಿರುತ್ತವೆ. ಶಾಲೆಯ ಮುಖ್ಯ ಶಿಕ್ಷಕರೇ ಭರ್ತಿ ಮಾಡಬೇಕು.

ಆನ್‌ಲೈನ್‌ ಮೂಲಕ ಉತ್ತರ ಪತ್ರಿಕೆ: ಮರು ಮೌಲ್ಯಮಾಪನ ಅಥವಾ ಮರು ಎಣಿಕೆಗಾಗಿ ಉತ್ತರ ಪತ್ರಿಕೆಗಳನ್ನು ಆನ್‌ಲೈನ್‌ ಮೂಲಕವೇ ಪಡೆಯಬಹುದು. ಶುಲ್ಕವನ್ನು ಆನ್‌ಲೈನ್ ಮೂಲಕವೇ ಪಾವತಿ ಮಾಡಬೇಕು ಎಂದು ಅವರು ವಿವರಿಸಿದರು.

ಖಾತೆಗೆ ಪಾವತಿ
ಎಸ್ಸೆಸ್ಸೆಲ್ಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡಿದ ಶಿಕ್ಷಕರ ಬ್ಯಾಂಕ್‌ ಖಾತೆಗೆ ನೇರವಾಗಿ ಸಂಭಾವನೆ ಮೊತ್ತ ಪಾವತಿಯಾಗುತ್ತದೆ. ಎಲ್ಲ ಮೌಲ್ಯಮಾಪಕರ ಮಾಹಿತಿ ಒಳಗೊಂಡ ತಂತ್ರಾಂಶ ಇರುವುದರಿಂದ ಮೌಲ್ಯ ಮಾಪನದ ಸಂಭಾವನೆ, ಟಿಎ,ಡಿಎ ಮೊತ್ತವನ್ನು ನೇರವಾಗಿ ವರ್ಗಾವಣೆ ಮಾಡಲಾಗುವುದು. ತಮ್ಮ ಕೆಲಸ ಪೂರ್ಣಗೊಳಿಸಿ ಮನೆಗೆ ಹಿಂತಿರುಗುವುದರ ಒಳಗೆ ಖಾತೆಗೆ ಹಣ ಜಮೆಯಾಗಿರುತ್ತದೆ ಎಂದು ಸುಮಂಗಲಾ ತಿಳಿಸಿದರು.

**

ಮಂಡಳಿ ಬಳಸುತ್ತಿರುವ ತಂತ್ರಾಂಶಗಳು ಅತ್ಯಂತ ಸುರಕ್ಷಿತವಾಗಿದ್ದು, ಅಕ್ರಮ ಸಾಧ್ಯ ಇಲ್ಲ.

-ವಿ.ಸುಮಂಗಲಾ, ನಿರ್ದೇಶಕಿ, ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.