ADVERTISEMENT

ಬುಡಕಟ್ಟು ಸಮುದಾಯದ ಹೋರಾಟಗಾರ ಫಾದರ್‌ ಸ್ಟ್ಯಾನ್‌ ಸ್ವಾಮಿಗೆ ಸ್ಟ್ರಾ, ಸಿಪ್ಪರ್‌

ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಮಾಹಿತಿ ನೀಡಿದ ಸ್ವಾಮಿ ಪರ ವಕೀಲ ಶರೀಫ್‌ ಶೇಖ್‌

ಪಿಟಿಐ
Published 4 ಡಿಸೆಂಬರ್ 2020, 11:00 IST
Last Updated 4 ಡಿಸೆಂಬರ್ 2020, 11:00 IST
ಸ್ಟ್ಯಾನ್‌ ಸ್ವಾಮಿ -ಟ್ವಿಟರ್‌ ಚಿತ್ರ
ಸ್ಟ್ಯಾನ್‌ ಸ್ವಾಮಿ -ಟ್ವಿಟರ್‌ ಚಿತ್ರ   

ಮುಂಬೈ: ‘ಬುಡಕಟ್ಟು ಸಮುದಾಯದ ಹೋರಾಟಗಾರ ಫಾದರ್‌ ಸ್ಟ್ಯಾನ್‌ ಸ್ವಾಮಿ ಅವರಿಗೆ ಇಲ್ಲಿನ ತಲೋಜಾ ಜೈಲಿನ ಅಧಿಕಾರಿಗಳುನೀರು ಕುಡಿಯಲು ಬೇಕಿರುವ ಸ್ಟ್ರಾ ಮತ್ತು ಸಿಪ್ಪರ್‌ ನೀಡಿದ್ದಾರೆ’ ಎಂದು ಸ್ವಾಮಿ ಪರ ವಕೀಲ ಶರೀಫ್‌ ಶೇಖ್‌ ಅವರು ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಶುಕ್ರವಾರ ತಿಳಿಸಿದ್ದಾರೆ.

ಎಲ್ಗಾರ್‌ ಪರಿಷತ್‌ ಪ‍್ರಕರಣಕ್ಕೆ ಸಂಬಂಧಿಸಿದಂತೆ ಸ್ವಾಮಿ ಅವರನ್ನು ಅಕ್ಟೋಬರ್‌ 8ರಂದು ರಾಂಚಿಯ ಅವರ ನಿವಾಸದಲ್ಲಿ ಬಂಧಿಸಲಾಗಿತ್ತು. ಬಳಿಕ ಅವರನ್ನು ತಲೋಜಾ ಜೈಲಿನಲ್ಲಿಡಲಾಗಿತ್ತು.

ಪಾರ್ಕಿನ್‌ಸನ್‌ ಹಾಗೂ ಇತರ ಕಾಯಿಲೆಗಳಿಂದ ಬಳಲುತ್ತಿರುವ ತಮಗೆ ತಟ್ಟೆ ಹಾಗೂ ಲೋಟ ಹಿಡಿಯಲಾಗುತ್ತಿಲ್ಲ. ಹೀಗಾಗಿ ತಮ್ಮಿಂದ ವಶಪಡಿಸಿಕೊಂಡಿರುವ ಸ್ಟ್ರಾ ಮತ್ತು ಸಿಪ್ಪರ್‌ ಮರಳಿಸುವಂತೆ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಅಧಿಕಾರಿಗಳಿಗೆ ನಿರ್ದೇಶಿಸಬೇಕು ಎಂದು 83 ವರ್ಷದ ಸ್ವಾಮಿ, ಕಳೆದ ತಿಂಗಳು ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯಲ್ಲಿ ಮನವಿ ಮಾಡಿದ್ದರು.

ADVERTISEMENT

ಸ್ವಾಮಿ ಅವರು ವಿಶೇಷ ನ್ಯಾಯಾಲಯಕ್ಕೆ ಶುಕ್ರವಾರ ಹೊಸದಾಗಿ ಮೂರು ಅರ್ಜಿಗಳನ್ನು ಸಲ್ಲಿಸಿದ್ದು, ಬಂಧನದ ವೇಳೆ ತಮ್ಮಿಂದ ವಶಪಡಿಸಿಕೊಂಡಿರುವ ಬ್ಯಾಗ್ ಹಾಗೂ ಹಾರ್ಡ್‌ ಡಿಸ್ಕ್‌ನ ಕ್ಲೋನ್‌ ಕಾಪಿಯನ್ನು ಹಿಂತಿರುಗಿಸುವಂತೆ ಹಾಗೂ ತಲೋಜಾ ಜೈಲಿನಿಂದ ಬೇರೆಡೆಗೆ ಸ್ಥಳಾಂತರಿಸದಂತೆ ಎನ್‌ಐಎ ಅಧಿಕಾರಿಗಳಿಗೆ ನಿರ್ದೇಶಿಸಬೇಕೆಂದು ಕೋರಿದ್ದಾರೆ.

‘ಎನ್‌ಐಎ ಅಧಿಕಾರಿಗಳು ತಮ್ಮನ್ನು ತಲೋಜಾ ಜೈಲಿನಿಂದ ಸ್ಥಳಾಂತರಿಸಲು ಸಿದ್ಧತೆ ನಡೆಸಿದ್ದಾರೆ ಎಂಬ ಮಾಹಿತಿ ನನಗೆ ಸಿಕ್ಕಿದೆ’ ಎಂದು ಸ್ವಾಮಿ ಅವರು ನ್ಯಾಯಾಲಯಕ್ಕೆ ಹೇಳಿದ್ದಾರೆ.

‘ತಲೋಜಾ ಜೈಲಿನ ಅಧಿಕಾರಿಗಳು ಸ್ವಾಮಿ ಅವರಿಗೆ ಸ್ಟ್ರಾ, ಸಿಪ್ಪರ್‌ ಜೊತೆಗೆ ಚಳಿಗಾಲದ ಉಡುಪುಗಳನ್ನು ಕೊಟ್ಟಿದ್ದಾರೆ’ ಎಂದು ಶರೀಫ್‌ ಅವರು ನ್ಯಾಯಾಲಯಕ್ಕೆ ತಿಳಿಸಿದರು.

‘ಸ್ವಾಮಿ ಅವರಿಗೆ ಸಂಬಂಧಪಟ್ಟ ಯಾವ ವಸ್ತುಗಳೂ ಎನ್‌ಐಎ ಅಧಿಕಾರಿಗಳ ವಶದಲ್ಲಿಲ್ಲ’ ಎಂದು ಎನ್‌ಐಎ ಪರ ವಕೀಲ ಪ್ರಕಾಶ್‌ ಶೆಟ್ಟಿ ಅವರು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟರು.

‘ತಮ್ಮ ಆರೋಗ್ಯದಲ್ಲಿ ಏರುಪೇರಾಗುತ್ತಿದ್ದು, ಸೂಕ್ತ ಚಿಕಿತ್ಸೆ ಪಡೆಯಬೇಕಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಜಾಮೀನು ಮಂಜೂರು ಮಾಡಿ’ ಎಂದು ಸ್ವಾಮಿ ಅವರು ಮನವಿ ಮಾಡಿದರು.

ಸ್ವಾಮಿ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಸೂಕ್ತ ವರದಿ ಸಲ್ಲಿಸುವಂತೆ ನ್ಯಾಯಾಧೀಶರು ತಲೋಜಾ ಜೈಲು ಅಧಿಕಾರಿಗಳಿಗೆ ಸೂಚಿಸಿದರು. ಇದಕ್ಕೆ ಇನ್ನಷ್ಟು ಕಾಲಾವಕಾಶ ನೀಡುವಂತೆ ಜೈಲು ಅಧಿಕಾರಿಗಳು ಕೇಳಿಕೊಂಡರು.

ವಿಚಾರಣೆಯನ್ನು ಡಿಸೆಂಬರ್‌ 10ಕ್ಕೆ ಮುಂದೂಡಿದ ನ್ಯಾಯಾಲಯ, ಜಾಮೀನು ಕೋರಿ ಸ್ವಾಮಿ ಸಲ್ಲಿಸಿರುವ ಅರ್ಜಿಯ ಜೊತೆಗೆ ಇತರ ಮೂರು ಅರ್ಜಿಗಳ ವಿಚಾರಣೆಯನ್ನು ಅಂದೇ ನಡೆಸುವುದಾಗಿ ಹೇಳಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.