ಗುವಾಹಟಿ: ‘ಕಾಂಗ್ರೆಸ್ ಸಂಸದ ಗೌರವ್ ಗೊಗೊಯಿ ಅವರ ಪತ್ನಿ ಪಾಕಿಸ್ತಾನ ಸರ್ಕಾರದಿಂದ ವೇತನ ಪಡೆಯುತ್ತಿದ್ದರು ಎಂದು ಕಾಂಗ್ರೆಸ್ ಹಿರಿಯ ಮುಖಂಡರ ತಪ್ಪೊಪ್ಪಿಗೆ ಹೇಳಿಕೆಯು ಆಶ್ಚರ್ಯ ತರಿಸಿದೆ’ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ತಿಳಿಸಿದ್ದಾರೆ.
‘ಈ ವಿಷಯದ ಬಗ್ಗೆ ನನಗೆ ಮೊದಲು ತಿಳಿದಿರಲಿಲ್ಲ. ಕಾಂಗ್ರೆಸ್ ನಾಯಕ ರಿಪುನ್ ಬೋರಾ ಅವರ ಹೇಳಿಕೆಯನ್ನು ದಾಖಲಿಸಿಕೊಂಡು, ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಶರ್ಮಾ ತಿಳಿಸಿದ್ದಾರೆ.
‘ಗೌರವ್ ಗೊಗೊಯಿ ಅವರ ಬ್ರಿಟನ್ ಮೂಲದ ಪತ್ನಿ ಎಲಿಜಬೆತ್ ಕೊಲ್‌ಬರ್ನ್ ಅವರಿಗೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಜೊತೆ ನಿಕಟ ಸಂಪರ್ಕ ಹೊಂದಿದ್ದು, ಅಲ್ಲಿಗೆ 19 ಬಾರಿ ಭೇಟಿ ನೀಡಿದ್ದಾರೆ’ ಎಂದು ಬಿಜೆಪಿ ಆರೋಪಿಸಿದೆ.
‘ಎಲಿಜಬೆತ್ ಕೊಲ್‌ಬರ್ನ್ ಅವರು ಅಂತರರಾಷ್ಟ್ರೀಯ ಸ್ವಯಂಸೇವಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಪಾಕಿಸ್ತಾನ ಸೇರಿದಂತೆ ಹಲವು ದೇಶಗಳಲ್ಲಿ ಇದರ ಜಾಲ ಹೊಂದಿದೆ’ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ರಿಪುನ್ ಬೋರಾ ಭಾನುವಾರ ಹೇಳಿಕೆ ನೀಡಿದ್ದರು.
‘ಈ ಸಂಪರ್ಕದಿಂದಾಗಿ ಪಾಕಿಸ್ತಾನದಿಂದ ವೇತನ ಪಡೆಯುತ್ತಿದ್ದ ಅವರು, ಹಲವು ಬಾರಿ ಅಲ್ಲಿಗೆ ಭೇಟಿ ನೀಡಿದ್ದರು. ಈ ಕಾರಣದಿಂದಲೇ ಒಬ್ಬರ ದೇಶಭಕ್ತಿ ಅಳೆಯಲು ಸಾಧ್ಯವೇ? ಬಹಳಷ್ಟು ಭಾರತೀಯರು– ಪಾಕಿಸ್ತಾನಿಗಳು ಕಾನೂನಾತ್ಮಕವಾಗಿ ಎರಡು ದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ’ ಎಂದು ಬೋರಾ ಹೇಳಿದ್ದರು.
‘ಎಲಿಜಬೆತ್ ಕುರಿತು ಬೋರಾ ಅವರ ಹೇಳಿಕೆ ದೇಶದ ಭದ್ರತೆ ಕುರಿತಂತೆ ತೀವ್ರ ಕಳವಳ ತರುವ ವಿಚಾರವಾಗಿದೆ’ ಎಂದು ಹಿಮಂತ ಬಿಸ್ವ ಶರ್ಮ ‘ಎಕ್ಸ್’ನಲ್ಲಿ ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.