ADVERTISEMENT

ಔಷಧಗಳ ಕಾಳಸಂತೆ ಮಾರಾಟಕ್ಕೆ ಕಡಿವಾಣ: ‘ಸುಪ್ರಿಂ’ಗೆ ಕೇಂದ್ರ ಪ್ರಮಾಣಪತ್ರ

ವಿವಿಧ ಹಂತಗಳಲ್ಲಿ ಸಮಿತಿ ರಚಿಸಲು ರಾಜ್ಯಗಳಿಗೆ ಸೂಚನೆ

ಪಿಟಿಐ
Published 10 ಮೇ 2021, 10:49 IST
Last Updated 10 ಮೇ 2021, 10:49 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ಕೋವಿಡ್‌ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಅಗತ್ಯ ಔಷಧಗಳು ಕಾಳಸಂತೆಯಲ್ಲಿ ಮಾರಾಟವಾಗುವುದನ್ನು ಮುಲಾಜಿಗೆ ಒಳಗಾಗದೇ ಕಟ್ಟುನಿಟ್ಟಾಗಿ ತಡೆಯಲು ಎಲ್ಲ ರಾಜ್ಯಗಳು ವಿವಿಧ ಹಂತಗಳಲ್ಲಿ ವಿಶೇಷ ತಂಡಗಳನ್ನು ರಚಿಸಬೇಕಾಗಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿತು.

‘ಮನುಷ್ಯನ ನೋವುಗಳ ವ್ಯಾಪಾರೀಕರಣ, ಶೋಷಣೆಯನ್ನು ಸಹಿಸುವುದಿಲ್ಲ‘ ಎಂಬ ಸಂದೇಶವನ್ನುವಿಶೇಷ ತಂಡಗಳ ರಚನೆಯ ಮೂಲಕ ನೀಡಬೇಕಾಗಿದೆ. ಈ ಕುರಿತಂತೆ ಭಾರತದ ಪ್ರಧಾನ ಔಷಧ ನಿಯಂತ್ರಕರು (ಡಿಸಿಜಿಐ) ಎಲ್ಲ ರಾಜ್ಯಗಳಿಗೆ ಪತ್ರ ಬರೆದಿದ್ದಾರೆ’ ಎಂದು ಕೋರ್ಟ್‌ಗೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ತಿಳಿಸಿದೆ.

ಕಾಳಸಂತೆಯಲ್ಲಿ ಔಷಧಗಳ ಮಾರಾಟವನ್ನು ಕಟ್ಟುನಿಟ್ಟಾಗಿ ತಡೆಯಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಗಳನ್ನು ಜರುಗಿಸಬೇಕು ಎಂದು ರಾಜ್ಯಗಳಿಗೆ ಸೂಚಿಸಲಾಗಿದೆ ಎಂದು ಕೇಂದ್ರ ತಿಳಿಸಿದೆ.

ADVERTISEMENT

ಔಷಧ ನಿಯಂತ್ರಣ ಕಾಯ್ದೆ, ಅಗತ್ಯ ವಸ್ತುಗಳ ಸೇವಾ ಕಾಯ್ದೆ ಹಾಗೂ ಸಂಬಂಧಿತ ಇತರೆ ಕಾಯ್ದೆಗಳ ಅನುಸಾರ ಔಷದಗಳ ಕಾಳಸಂತೆ ಮಾರಾಟಕ್ಕೆ ಕಡಿವಾಣ ಹೇರಬೇಕು. ಸ್ಥಳೀಯ ಆಡಳಿತ ಮತ್ತು ಪೊಲೀಸ್‌ ಇಲಾಖೆಯನ್ನು ಬಳಸಬೇಕು ಎಂದೂ ಕೇಂದ್ರ ಆರೋಗ್ಯ ಸಚಿವಾಲಯವು ಎಲ್ಲ ರಾಜ್ಯ ಸರ್ಕಾರಗಳಿಗೆ ತಿಳಿಸಿದೆ.

157 ಪ್ರಕರಣ: ದೇಶದಾದ್ಯಂತ ಈವರೆಗೆ 157 ಪ್ರಕರಣ ಪತ್ತೆಯಾಗಿದೆ. ಎಫ್‌ಐಆರ್‌ ದಾಖಲಿಸಲಾಗಿದೆ. ಕೃತ್ಯಗಳಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಕೇಂದ್ರವು ಕೋರ್ಟ್‌ಗೆ ಮಾಹಿತಿ ನೀಡಿದೆ.

ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠವು ಸ್ವಯಂಪ್ರೇರಿತವಾಗಿ ಈ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡಿದೆ. ಔಷಧಗಳ ಮಾರಾಟ ಮತ್ತು ವಿತರಣೆಯನ್ನು ಔಷದ ನಿಯಂತ್ರಣ ಕಾಯ್ದೆ 1940 ಮತ್ತು 1945ರ ಔಷಧ ನಿಯಮಗಳು ಅನ್ವಯ ನಿಯಂತ್ರಿಸಲಾಗುತ್ತಿದೆ ಎಂದು ತಿಳಿಸಿದೆ.

ರೆಮ್‌ಡಿಸಿವಿರ್ ಮತ್ತು ಟಾಸಿಲ್‌ಜುಮಬ್‌ ಅಂತಹ ಔಷಧಗಳನ್ನು ಅಡ್ಡದಾರಿಯ ಮೂಲಕ ಮಾರಾಟ ಮಾಡಲಾಗುತ್ತಿದೆ ಎಂದು ಅಭಿಪ್ರಾಯಪಟ್ಟ ಪೀಠವು, ಜನರ ಅಸಹಾಯಕತೆಗಳಿಂದ ಲಾಭ ಪಡೆಯುವ ಮತ್ತು ನೋವುಗಳನ್ನು ಶೋಷಿಸುವ ಮನೋಭಾವ ಖಂಡನೀಯ ಎಂದು ಅಭಿಪ್ರಾಯಪಟ್ಟಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.