ADVERTISEMENT

ಆರು ವಾರ ಸರ್ಕಾರದ ವಕೀಲರ ತಂಡದ ಬದಲಾವಣೆ ಬೇಡ: ಕೋರ್ಟ್ ಸೂಚನೆ

ಆಶಿಶ್ ತ್ರಿಪಾಠಿ
Published 3 ಏಪ್ರಿಲ್ 2024, 19:27 IST
Last Updated 3 ಏಪ್ರಿಲ್ 2024, 19:27 IST
<div class="paragraphs"><p>ಸಸ</p></div>

ಸಸ

   

ನವದೆಹಲಿ: ಸರ್ಕಾರದ ಚುಕ್ಕಾಣಿ ಹಿಡಿದ ರಾಜಕೀಯ ಪಕ್ಷ ಬದಲಾದ ಆರು ವಾರಗಳವರೆಗೆ ಸರ್ಕಾರದ ವಕೀಲರ ತಂಡವನ್ನು ಬದಲಾಯಿಸಬಾರದು ಎಂದು ಸುಪ್ರೀಂ ಕೋರ್ಟ್‌, ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳಿಗೆ ಹೇಳಿದೆ.

‘ಅಧಿಕಾರದ ಚುಕ್ಕಾಣಿಯು ಒಂದು ರಾಜಕೀಯ ಪಕ್ಷದಿಂದ ಇನ್ನೊಂದು ರಾಜಕೀಯ ಪಕ್ಷಕ್ಕೆ ವರ್ಗಾವಣೆ ಆದ ನಂತರದಲ್ಲಿ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ಈ ಕೋರ್ಟ್‌ನಲ್ಲಿ ತಮ್ಮನ್ನು ಪ್ರತಿನಿಧಿಸುವ ವಕೀಲರ ತಂಡವನ್ನು ಬದಲಾಯಿಸಿರುವುದು ಕಳೆದ ಕೆಲವು ತಿಂಗಳಲ್ಲಿ ಗಮನಕ್ಕೆ ಬಂದಿದೆ. ಬದಲಾವಣೆಯ ಕಾರಣದಿಂದಾಗಿ ಪ್ರಕರಣಗಳ ವಿಚಾರಣೆಯನ್ನು ಕಾಲಕಾಲಕ್ಕೆ ಮುಂದೂಡಬೇಕಾಗಿದೆ’ ಎಂದು ನ್ಯಾಯಮೂರ್ತಿಗಳಾದ ಅಭಯ್ ಎಸ್. ಓಕ ಮತ್ತು ಉಜ್ವಲ್ ಭುಇಯಾಂ ಅವರು ಇದ್ದ ವಿಭಾಗೀಯ ಪೀಠವು ಹೇಳಿದೆ.

ADVERTISEMENT

ವಕೀಲರ ತಂಡವು ಬದಲಾಗಿರುವ ಕಾರಣ ಉತ್ತರಾಖಂಡ ಸರ್ಕಾರದ ವಕೀಲರಿಗೆ ಜಾಮೀನು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಯಾವುದೇ ಮಾಹಿತಿ, ಸೂಚನೆ ಇಲ್ಲ ಎಂಬುದನ್ನು ಪೀಠಕ್ಕೆ ತಿಳಿಸಲಾಯಿತು. ಕಳೆದ ಏಳೆಂಟು ವರ್ಷಗಳಿಂದ ವಕೀಲರ ಒಂದೇ ತಂಡವು ಸರ್ಕಾರವನ್ನು ಪ್ರತಿನಿಧಿಸುತ್ತಿದ್ದ ಕಾರಣ, ಅದನ್ನು ಬದಲಾಯಿಸಲಾಗಿದೆ ಎಂದು ಉತ್ತರಾಖಂಡ ಸರ್ಕಾರದ ಕಾನೂನು ಇಲಾಖೆಯ ಕಾರ್ಯದರ್ಶಿ ಪೀಠಕ್ಕೆ ತಿಳಿಸಿದರು.

‘ತಮ್ಮ ವಕೀಲರ ತಂಡವನ್ನು ಬದಲಾಯಿಸುವ ಅಧಿಕಾರವು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದ ಸರ್ಕಾರಗಳಿಗೆ ಇದೆ ಎಂಬುದು ನಿಜ. ಆದರೆ, ಹಾಗೆ ಬದಲಾವಣೆ ಮಾಡುವಾಗ ಕೋರ್ಟ್‌ನ ಕೆಲಸಗಳಿಗೆ ತೊಂದರೆ ಆಗದಂತೆ ಅವು ನೋಡಿಕೊಳ್ಳಬೇಕು. ಹೀಗಾಗಿ, ವಕೀಲರ ತಂಡವನ್ನು ಬದಲಾಯಿಸುವಾಗ ಹಳೆಯ ತಂಡವನ್ನು ಕನಿಷ್ಠ ಆರು ವಾರಗಳವರೆಗೆ ಮುಂದುವರಿಸುವುದು ಸೂಕ್ತವಾಗುತ್ತದೆ. ಆಗ ನ್ಯಾಯಾಲಯಗಳಿಗೆ ವಿಚಾರಣೆ ಮುಂದೂಡಬೇಕಾದ ಅನಿವಾರ್ಯ ಎದುರಾಗುವುದಿಲ್ಲ’ ಎಂದು ಪೀಠ ಹೇಳಿದೆ.

ಈ ಸೂಚನೆಯ ಪ್ರತಿಯನ್ನು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳನ್ನು ಪ್ರತಿನಿಧಿಸುವ ವಕೀಲರಿಗೆ ರವಾನಿಸುವಂತೆ ರಿಜಿಸ್ಟ್ರಿಗೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.