ADVERTISEMENT

ಕೋವಿಡ್‌ 19- ಕೇಂದ್ರ ಮಾರ್ಗಸೂಚಿ ಅನುಷ್ಠಾನ ಕಡ್ಡಾಯ: ಸುಪ್ರೀಂಕೋರ್ಟ್

ರಾಜ್ಯ ಸರ್ಕಾರಗಳು ಆಂಬ್ಯಲೆನ್ಸ್‌ಗಳಿಗೆ ಯೋಗ್ಯ ಬಾಡಿಗೆ ದರ ನಿಗದಿಪಡಿಸಲಿ

ಪಿಟಿಐ
Published 11 ಸೆಪ್ಟೆಂಬರ್ 2020, 11:39 IST
Last Updated 11 ಸೆಪ್ಟೆಂಬರ್ 2020, 11:39 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕೊರೊನಾ ಸೋಂಕಿತರು ಮತ್ತು ಶಂಕಿತರ ಸಾಗಾಟ ಸೇರಿದಂತೆ ಕೋವಿಡ್‌ 19 ಕುರಿತು ಕೇಂದ್ರ ಹೊರಡಿಸಿರುವ ಮಾರ್ಗಸೂಚಿಗಳನ್ನು ಎಲ್ಲ ರಾಜ್ಯ ಸರ್ಕಾರಗಳು ಕಡ್ಡಾಯವಾಗಿ ಅನುಸರಿಸಬೇಕು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಆದೇಶಿಸಿದೆ.

ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಕೋವಿಡ್ 19 ಮಾರ್ಗಸೂಚಿಯಲ್ಲಿ ರೋಗಿಗಳನ್ನು ಕರೆದೊಯ್ಯುವ ಆಂಬುಲೆನ್ಸ್‌ಗೆ ಎಷ್ಟು ಬಾಡಿಗೆ ನೀಡಬೇಕೆಂಬ ಅಂಶ ಸೂಚಿಸಿಲ್ಲ. ಹಾಗಾಗಿ, ಆಸ್ಪತ್ರೆಗಳು ರೋಗಿಗಳಿಗೆ ಸಿಕ್ಕಾಪಟ್ಟೆ ಬಾಡಿಗೆ ವಿಧಿಸುತ್ತಿವೆ. ಇದನ್ನು ಸರಿಪಡಿಸಬೇಕು ಎಂದು ಕೋರಿ ‘ಅರ್ಥ್‘ ಸಂಸ್ಥೆಯವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ವಿಚಾರಣೆ ನಡೆಸಿದ ನ್ಯಾಯಾಲಯ, ರಾಜ್ಯ ಸರ್ಕಾರಗಳೇ ಆಂಬ್ಯುಲೆನ್ಸ್‌ಗಳಿಗೆ ಯೋಗ್ಯ ಬಾಡಿಗೆಯನ್ನು ನಿಗದಿಪಡಿಸಬೇಕು ಎಂದು ಸೂಚಿಸಿದೆ.

ಕೇಂದ್ರ ಸರ್ಕಾರದ ಪರ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಕೇಂದ್ರ ಆರೊಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವಾಲಯ ಈಗಾಗಲೇ ‘ಮಾರ್ಗಸೂಚಿ‘ಗಳನ್ನು ಬಿಡುಗಡೆ ಮಾಡಿದ್ದು, ಎಲ್ಲ ರಾಜ್ಯಗಳು ಅದನ್ನು ಅನುಷ್ಠಾನಗೊಳಿಸಬೇಕು ಎಂದುನ್ಯಾಯಮೂರ್ತಿ ಅಶೋಕ್ ಭೂಷಣ್ ಅವರ ನೇತೃತ್ವದ ಪೀಠಕ್ಕೆ ತಿಳಿಸಿದರು.

ADVERTISEMENT

ವಿಡಿಯೊ ಕಾನ್ಫರೆನ್ಸ್‌ ಮೂಲಕ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್. ಸುಭಾಷ್ ರೆಡ್ಡಿ ಮತ್ತು ಎಂ. ಆರ್. ಶಾ ಅವರನ್ನೊಳಗೊಂಡ ಪೀಠ‘ ಕೇಂದ್ರ ಸರ್ಕಾರ ನೀಡಿರುವ ಕೋವಿಡ್‌ 19 ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸುವ ಜತೆಗೆ, ಆಂಬ್ಯುಲೆನ್ಸ್‌ಗಳ ಸಾಮರ್ಥವ್ಯನ್ನು ಹೆಚ್ಚಿಸಲು ಕ್ರಮಕೈಗೊಳ್ಳಬೇಕು‘ ಎಂದು ರಾಜ್ಯ ಸರ್ಕಾರಗಳಿಗೆ ಸೂಚಿಸಿತು.

ಅರ್ಜಿ ವಿಚಾರಣೆ ವೇಳೆ, ಕೆಲವು ರಾಜ್ಯಗಳು ಕೇಂದ್ರದ ಮಾರ್ಗಸೂಚಿಯನ್ನು ಪಾಲಿಸುತ್ತಿಲ್ಲ ಮತ್ತು ರೋಗಿಗಳಿಂದ ಆಂಬ್ಯುಲೆನ್ಸ್‌ ಸೇವೆಗಾಗಿ ₹7ಸಾವಿರ ಕೆಲವೊಮ್ಮೆ ₹50 ಸಾವಿರದವರೆಗೆ ಬಾಡಿಗೆ ಕೇಳುತ್ತಿದ್ದಾರೆ ಎಂಬ ಅಂಶವನ್ನು ಪೀಠ ಆಲಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.