
ಶಿಲ್ಪಿ ರಾಮ್ ಸುತಾರ್
ನವದೆಹಲಿ: ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿರುವ ಕೆಂಪೇಗೌಡರ ಪ್ರತಿಮೆ, ಗುಜರಾತಿನ ಕೆವಾಡಿಯಾದಲ್ಲಿ ನಿರ್ಮಿಸಲಾಗಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 182 ಮೀಟರ್ ಎತ್ತರದ ‘ಏಕತಾ ಪ್ರತಿಮೆ’ಯ ಮುಖ್ಯಶಿಲ್ಪಿ ರಾಮ್ ಸುತಾರ್ ಅವರು ಬುಧವಾರ ರಾತ್ರಿ ನಿಧನರಾದರು.
ಅವರಿಗೆ 100 ವರ್ಷ ವಯಸ್ಸಾಗಿತ್ತು, ವಯೋಸಜಹ ಕಾಯಿಲೆಗಳಿಂದ ಬಳಲುತ್ತಿದ್ದರು.
ಸಂಸತ್ತಿನ ಆವರಣದಲ್ಲಿ ಧ್ಯಾನಸ್ಥ ಭಂಗಿಯಲ್ಲಿ ಕುಳಿತಿರುವ ಮಹಾತ್ಮ ಗಾಂಧಿ ಪ್ರತಿಮೆಯು ಅವರ ಪ್ರಮುಖ ಶಿಲ್ಪಕಲಾಕೃತಿಗಳಲ್ಲಿ ಒಂದಾಗಿದೆ. ಅಲ್ಲದೆ ಬಿ.ಆರ್.ಅಂಬೇಡ್ಕರ್, ಛತ್ರಪತಿ ಶಿವಾಜಿ ಸೇರಿದಂತೆ ದೇಶ, ವಿದೇಶಗಳಲ್ಲಿ ಪ್ರತಿಷ್ಠಾಪಿಸಲಾಗಿರುವ ಹಲವು ನಾಯಕರ ಪ್ರತಿಮೆಗಳ ಶಿಲ್ಪಿಯೂ ಅವರಾಗಿದ್ದಾರೆ.
ಮಹಾರಾಷ್ಟ್ರದ ಧುಲೆ ಜಿಲ್ಲೆಯ ಗೊಂಡೂರ್ ಗ್ರಾಮದಲ್ಲಿ 1925ರ ಫೆಬ್ರುವರಿ 19ರಂದು ಜನಿಸಿದ ಸುತಾರ್ ಅವರು ಬಾಲ್ಯದಿಂದಲೂ ಶಿಲ್ಪಕಲೆಯತ್ತ ಆಕರ್ಷಿತರಾಗಿದ್ದರು.
ಸುತಾರ್ ಅವರು ಶಿಲ್ಪಕಲೆಗೆ ನೀಡಿದ ಗಣನೀಯ ಕೊಡುಗೆಗಾಗಿ 1999ರಲ್ಲಿ ಪದ್ಮಶ್ರೀ, 2016ರಲ್ಲಿ ಪದ್ಮಭೂಷಣ ಪ್ರಶಸ್ತಿ ಸೇರಿದಂತೆ ಹಲವು ಪ್ರತಿಷ್ಠಿತ ಗೌರವಗಳು ಸಂದಿವೆ. ಮಹಾರಾಷ್ಟ್ರದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಮಹಾರಾಷ್ಟ್ರ ಭೂಷಣ’ ಪ್ರಶಸ್ತಿಯೂ ಅವರಿಗೆ ಇತ್ತೀಚೆಗೆ ಲಭಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.