ADVERTISEMENT

ಸಮಾಜ ಸೇವೆ ವೇಳೆ ಖ್ಯಾತಿಗೆ ಹಂಬಲಿಸದಿರಿ: ಮೋಹನ್ ಭಾಗವತ್‌

ಪಿಟಿಐ
Published 8 ಏಪ್ರಿಲ್ 2023, 18:08 IST
Last Updated 8 ಏಪ್ರಿಲ್ 2023, 18:08 IST
ಮೋಹನ್‌ ಭಾಗವತ್‌
ಮೋಹನ್‌ ಭಾಗವತ್‌   

ಜೈಪುರ: ‘ಜನಪ್ರಿಯತೆಯ ಹಂಬಲವನ್ನು ಬದಿಗೊತ್ತಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಿ. ಸದಾ ವಿನಮ್ರರಾಗಿರಿ. ಸಂಘಟಿತರಾಗುವತ್ತ ಚಿತ್ತ ಹರಿಸಿ’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸರಸಂಘಚಾಲಕ ಮೋಹನ್‌ ಭಾಗವತ್‌ ಸ್ವಯಂಸೇವಕರಿಗೆ ಸಲಹೆ ನೀಡಿದರು.

ಆರ್‌ಎಸ್‌ಎಸ್‌ ಅಂಗಸಂಸ್ಥೆ ಕೇಶವ ವಿದ್ಯಾಪೀಠವು ಇಲ್ಲಿನ ಜಾಮಡೋಲಿಯಲ್ಲಿ ಹಮ್ಮಿಕೊಂಡಿರುವ ‘ರಾಷ್ಟ್ರೀಯ ಸೇವಾ ಸಂಗಂ’ ಸಮಾವೇಶದ ಎರಡನೇ ದಿನವಾದ ಶನಿವಾರ ಮಾತನಾಡಿದ ಅವರು, ‘ಸಂಘಟಿತ ಪಡೆಯು ಸದಾಕಾಲ ಗೆಲುವಿನ ಸಿಹಿ ಸವಿಯುತ್ತದೆ. ನಾವು ಈ ಜಗತ್ತಿನ ಒಳಿತಿಗಾಗಿ ಸದ್ದಿಲ್ಲದೇ ಕೆಲಸ ಮಾಡುವವರು. ಹೀಗಾಗಿ ‘ಸಂಘ ಶಕ್ತಿ’ ಬಲಪಡಿಸುವತ್ತ ಗಮನ ಹರಿಸಬೇಕು’ ಎಂದರು.

‘ನಾವೇನು ಮಹತ್ವದ ಕಾರ್ಯ ಮಾಡುತ್ತಿಲ್ಲ. ನಮ್ಮ ಜವಾಬ್ದಾರಿಗಳನ್ನಷ್ಟೇ ನಿಭಾಯಿಸುತ್ತಿದ್ದೇವೆ ಎಂಬ ಭಾವನೆಯು ನಮ್ಮಲ್ಲಿರಬೇಕು’ ಎಂದು ಕಿವಿಮಾತು ಹೇಳಿದರು.

ADVERTISEMENT

‘ನಾವು ಉತ್ತಮ ಜಗತ್ತಿನ ನಿರ್ಮಾಣಕ್ಕಾಗಿ ಕೆಲಸ ಮಾಡಬೇಕು. ಈ ಕಾರ್ಯಕ್ಕಾಗಿ ನಮಗೆ ಕಾರ್ಯಕರ್ತರ ದೊಡ್ಡ ಪಡೆಯ ಅಗತ್ಯವಿದೆ. ಸಂಘದ ಕಾರ್ಯಕರ್ತರು ನಿಸ್ವಾರ್ಥ ಸೇವೆ ಮಾಡುವುದನ್ನು ರೂಢಿಸಿಕೊಳ್ಳಬೇಕು’ ಎಂದು ಹೇಳಿದರು.

ಹಿಂದೂ ಸಂತರ ಸೇವೆ ದೊಡ್ಡದು: ದಕ್ಷಿಣದ ರಾಜ್ಯಗಳಲ್ಲಿ ಮಿಷನರಿಗಳಿಗಿಂತ ಹಿಂದೂ ಆಧ್ಯಾತ್ಮಿಕ ಗುರುಗಳು ಹೆಚ್ಚು ಸಮಾಜ ಸೇವೆ ಮಾಡಿದ್ದಾರೆ ಎಂದು ಭಾಗವತ್‌ ಶುಕ್ರವಾರ ಹೇಳಿದ್ದರು.

‘ಸಮಾಜ ಸೇವೆಯ ವಿಷಯ ಬಂದಾಗ ದೇಶದ ವಿಚಾರವಂತರು ಕ್ರೈಸ್ತ ಮಿಷನರಿಗಳ ಹೆಸರು ಉಲ್ಲೇಖಿಸುತ್ತಾರೆ. ಮಿಷನರಿಗಳು ಜಗತ್ತಿನಾದ್ಯಂತ ಹಲವಾರು ಶಾಲೆಗಳು, ಆಸ್ಪತ್ರೆಗಳು, ಸಂಘ–ಸಂಸ್ಥೆಗಳನ್ನು ನಡೆಸುತ್ತಿವೆ. ಇದು ಎಲ್ಲರಿಗೂ ಗೊತ್ತಿದೆ. ಆದರೆ ಹಿಂದೂ ಸಂತರು ಏನು ಮಾಡುತ್ತಾರೆ? ಇದನ್ನು ಅರಿಯಲು ಚೆನ್ನೈನಲ್ಲಿ ಹಿಂದೂ ಸೇವಾ ಜಾತ್ರೆ ಆಯೋಜಿಸಲಾಗಿತ್ತು. ಕನ್ನಡ, ತೆಲುಗು, ಮಲಯಾಳ, ತಮಿಳು ಭಾಷಾ ಪ್ರಾಂತ್ಯಗಳಲ್ಲಿ ಆಚಾರ್ಯರು, ಮುನಿಗಳು, ಸನ್ಯಾಸಿಗಳು ಮಾಡಿದ ಸಮಾಜ ಸೇವೆಯು ಮಿಷನರಿಗಳ ಸಮಾಜಸೇವೆಗಿಂತ ಬಹುದೊಡ್ಡದು ಎಂಬುದು ಅದರಿಂದ ತಿಳಿಯಿತು’ ಎಂದಿದ್ದರು.

‘ಆದರೆ ಯಾರು ಹೆಚ್ಚು, ಯಾರು ಕಡಿಮೆ ಎಂಬ ಸ್ಪರ್ಧೆಯ ಬಗ್ಗೆ ನಾನು ಮಾತನಾಡುತ್ತಿಲ್ಲ. ಇದು ಸೇವೆಯನ್ನು ಅಳೆಯುವ ಮಾನದಂಡವೂ ಅಲ್ಲ. ಸೇವೆ ಎಂಬುದು ಸ್ಪರ್ಧೆಯ ವಿಷಯವಲ್ಲ. ಅದು ಮಾನವೀಯತೆಯ ಸ್ವಾಭಾವಿಕ ಅಭಿವ್ಯಕ್ತಿ’ ಎಂದು ಹೇಳಿದ್ದರು.

‘ಪ್ರತಿಯೊಬ್ಬರೂ ಸಮಾನರು. ನಾವೆಲ್ಲರೂ ಈ ಸಮಾಜದ ಭಾಗ. ಎಲ್ಲರೂ ಒಂದಾಗಬೇಕು. ಒಂದಾಗದಿದ್ದರೆ ನಾವು ಅಪೂರ್ಣರಾಗುತ್ತೇವೆ’ ಎಂದು ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.