ADVERTISEMENT

ಸಂಬಳ ವಾಪಸ್‌ ಆದೇಶಕ್ಕೆ ತಡೆ

ಮುಳಬಾಗಿಲು ಶಾಸಕ ಸ್ಥಾನ ರದ್ದತಿ ಹಿನ್ನೆಲೆ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2019, 18:32 IST
Last Updated 3 ಏಪ್ರಿಲ್ 2019, 18:32 IST

ನವದೆಹಲಿ: ಕೋಲಾರ ಜಿಲ್ಲೆ ಮುಳಬಾಗಿಲು (ಮೀಸಲು) ಕ್ಷೇತ್ರದಿಂದ 2013ರಲ್ಲಿ ಆಯ್ಕೆಯಾಗಿದ್ದ ಕೊತ್ತೂರು ಜಿ.ಮಂಜುನಾಥ್ ಅವರ ಶಾಸಕ ಸ್ಥಾನ ರದ್ದಾಗಿರುವ ಹಿನ್ನೆಲೆಯಲ್ಲಿ, ಸಂಬಳ ಮತ್ತಿತರ ಭತ್ಯೆ ವಾಪಸ್‌ ನೀಡುವಂತೆ ಸೂಚಿಸಿ ವಿಧಾನಸಭೆಯ ಅಧೀನ ಕಾರ್ಯದರ್ಶಿ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್‌ ತಡೆ ನೀಡಿದೆ.

ಶಾಸಕ ಸ್ಥಾನಕ್ಕೆ ಆಯ್ಕೆಯಾಗಿರುವುದು ಅಕ್ರಮ ಎಂದು ಹೈಕೋರ್ಟ್ 2018ರ ಏಪ್ರಿಲ್‌ 25ರಂದು ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎ.ಎಂ. ಖನ್ವಿಲ್ಕರ್ ಹಾಗೂ ಅಜಯ್ ರಸ್ತೋಗಿ ಅವರಿದ್ದ ಪೀಠ ಈ ತಡೆಯಾಜ್ಞೆ ನೀಡಿದೆ.

ಹೈಕೋರ್ಟ್‌ ಆದೇಶಕ್ಕೂ ತಡೆ ನೀಡಬೇಕು ಎಂದು ಮಂಜುನಾಥ ಪರ ವಕೀಲರಾದ ಶೇಖರ್ ನಾಫಡೆ ಹಾಗೂ ಬಸವಪ್ರಭು ಪಾಟೀಲ ಅವರು ಮನವಿ ಸಲ್ಲಿಸಿದರು. ಆದರೆ, ವಿಚಾರಣೆ ಬಾಕಿ ಇರುವುದರಿಂದ ಸಂಬಳ, ಭತ್ಯೆ ಮತ್ತಿತರ ರೂಪದಲ್ಲಿ ನೀಡಲಾದ ₹ 90 ಲಕ್ಷ ಮರು ಪಾವತಿಗೆ ಕೋರಿರುವ ಸರ್ಕಾರದ ಆದೇಶಕ್ಕೆ ಮಾತ್ರ ತಾತ್ಕಾಲಿಕವಾಗಿ ತಡೆ ನೀಡಲಾಗುವುದು ಎಂದು ಪೀಠ ಹೇಳಿತು.

ADVERTISEMENT

ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಕ್ಷೇತ್ರದಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಮಂಜುನಾಥ್, ಹಿಂದುಳಿದ ಬೈರಾಗಿ ಜಾತಿಗೆ ಸೇರಿದ್ದಾರೆ. ಆದರೂ ಬೇಡ ಜಂಗಮ ಎಂಬುದಾಗಿ ಖೊಟ್ಟಿ ಜಾತಿ ಪ್ರಮಾಣಪತ್ರ ಸಲ್ಲಿಸಿ ಸ್ಪರ್ಧಿಸಿ ಜಯಿಸಿದ್ದರು ಎಂದು ಪರಾಜಿತ ಅಭ್ಯರ್ಥಿ, ಜೆಡಿಎಸ್‌ನ ಮುನಿ ಆಂಜಿನಪ್ಪ ಹೈಕೋರ್ಟ್‌ಗೆ ದೂರು ಸಲ್ಲಿಸಿದ್ದರು.

ಕಳೆದ ಮೇ ತಿಂಗಳಲ್ಲಿ ನಡೆದಿದ್ದ ಚುನಾವಣೆಗೆ ಮುಳಬಾಗಿಲು ಕ್ಷೇತ್ರದಿಂದ ಸ್ಪರ್ಧಿಸಲು ಸಲ್ಲಿಸಲಾದ ನಾಮಪತ್ರವನ್ನು ಖೊಟ್ಟಿ ಜಾತಿ ಪ್ರಮಾಣಪತ್ರ ಸಲ್ಲಿಕೆ ಕಾರಣ ನೀಡಿ ತಿರಸ್ಕರಿಸಲಾಗಿತ್ತು. ಅಲ್ಲದೆ, ಶಾಸಕ ಸ್ಥಾನ ರದ್ದುಪಡಿಸಿ ಹೈಕೋರ್ಟ್‌ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್‌ ತಡೆ ನೀಡಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.