ADVERTISEMENT

‘ಸ್ವನಿಧಿ’ ಸಾಲ ತ್ವರಿತಕ್ಕೆ ಕ್ರಮ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2020, 18:30 IST
Last Updated 30 ಅಕ್ಟೋಬರ್ 2020, 18:30 IST

ನವದೆಹಲಿ: ‘ಪ್ರಧಾನಮಂತ್ರಿ ಸ್ವನಿಧಿ’ ಯೋಜನೆಯಡಿ ಬೀಬಿಬದಿ ವ್ಯಾಪಾರಿಗಳಿಗೆ ಸಾಲ ವಿತರಿಸುವ ಪ್ರಕ್ರಿಯೆಯನ್ನು ಚುರುಕುಗೊಳಿಸಲು ಕೇಂದ್ರದ ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯವು ಮುಂದಾಗಿದೆ.

ಸ್ವನಿಧಿ ಯೋಜನೆಯ ಪೋರ್ಟಲ್‌ ಅನ್ನು ವಿವಿಧ ಬ್ಯಾಂಕ್‌ಗಳ ಜತೆಗೆ ಸಂಲಗ್ನಗೊಳಿಸಲು ಸಾಧ್ಯವಾಗುವಂಥ ಅಪ್ಲಿಕೇಶನ್‌ ಪ್ರೊಗ್ರಾಮಿಂಗ್‌ ಇಂಟರ್‌ಫೇಸ್‌ (ಎಪಿಐ) ಅನ್ನು ಸಚಿವಾಲಯವು ಅಭಿವೃದ್ಧಿಪಡಿಸಿದೆ. ಪೋರ್ಟಲ್‌ ಅನ್ನು ಎಸ್‌ಬಿಐನ ಇ–ಮುದ್ರಾ ಪೋರ್ಟಲ್‌ ಜತೆಗೆ ಸಂಲಗ್ನಗೊಳಿಸುವ ಮೂಲಕ ಯೋಜನೆಗೆ ಚಾಲನೆಯನ್ನೂ ನೀಡಲಾಗಿದೆ. ಎಪಿಐ ಒಂದು ಸಂದೇಶವಾಹಕ ತಂತ್ರಾಂಶವಾಗಿದ್ದು, ಎರಡು ಅಥವಾ ಅದಕ್ಕೂ ಹೆಚ್ಚಿನ ಅಪ್ಲಿಕೇಶನ್‌ಗಳ ಮಧ್ಯೆ ದತ್ತಾಂಶ ವಿನಿಮಯ ಮಾಡಲು ಮತ್ತು ಸಂಪರ್ಕ ಸಾಧಿಸಲು ನೆರವಾಗುತ್ತದೆ.

‘ಸ್ವನಿಧಿ ಯೋಜನೆಯಡಿ ಸಾಲ ಮಂಜೂರು ಮಾಡುವಲ್ಲಿ ವಿಳಂಬವಾಗುತ್ತಿದೆ ಎಂಬ ದೂರುಗಳು ಬಂದಿರುವ ಕಾರಣಕ್ಕೆ ಸರ್ಕಾರವು ವಿವಿಧ ಬ್ಯಾಂಕ್‌ಗಳ ನಡುವೆ ಸಂಪರ್ಕಸೇತುವಾಗಿ ಎಪಿಐಯನ್ನು ಬಳಸಲು. ಇದರಿಂದ ಶೀಘ್ರವಾಗಿ ಸಾಲ ಮಂಜೂರು ಮಾಡಲು ಸಾಧ್ಯವಾಗಲಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ಸ್ವನಿಧಿ ಯೋಜನೆಯಡಿ ಸಾಲಕ್ಕಾಗಿ 25 ಲಕ್ಷ ಅರ್ಜಿಗಳು ಬಂದಿವೆ. ಅವುಗಳಲ್ಲಿ 12 ಲಕ್ಷ ಮಂದಿಗೆ ಸಾಲ ಮಂಜೂರು ಮಾಡಲಾಗಿದೆ. 2020ರ ಮಾರ್ಚ್‌ 24ಕ್ಕೂ ಹಿಂದೆ ಬೀದಿಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಸುಮಾರು 50 ಲಕ್ಷ ಮಂದಿಗೆ ತಲಾ ₹10,000 ಸಾಲ ನೀಡುವ ಗುರಿಯನ್ನು ಹಾಕಿಕೊಳ್ಳಲಾಗಿದೆ.

ಈ ಸಾಲವನ್ನು 10 ಸಮಾನ ಕಂತುಗಳಲ್ಲಿ ವ್ಯಾಪಾರಿಗಳು ಮರುಪಾವತಿ ಮಾಡಬೇಕಾಗುತ್ತದೆ. ಸಕಾಲದಲ್ಲಿ ಮರುಪಾವತಿ ಮಾಡಿದವರಿಗೆ ಬಡ್ಡಿಯಲ್ಲಿ ಶೇ 7ರಷ್ಟು ಸಬ್ಸಿಡಿ ನೀಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.