ನವದೆಹಲಿ: ‘ದೆಹಲಿ ಮತ್ತು ರಾಷ್ಟ್ರ ರಾಜಧಾನಿ ಪ್ರದೇಶಗಳಿಗೆ (ಎನ್‌ಆರ್‌ಸಿ) ಸಂಬಂಧಿಸಿದ ಬೀದಿ ನಾಯಿಗಳ ಎಲ್ಲ ಸಮಸ್ಯೆಗಳಿಗೂ ಸ್ಥಳೀಯ ಆಡಳಿತದ ನಿಷ್ಕ್ರಿಯತೆಯೇ ಕಾರಣ’ ಎಂದು ಸುಪ್ರೀಂ ಕೋರ್ಟ್ ಗುರುವಾರ ಅಭಿಪ್ರಾಯಪಟ್ಟಿದೆ.
ದೆಹಲಿ ಮತ್ತು ಎನ್‌ಸಿಆರ್ ಪ್ರದೇಶಗಳಲ್ಲಿ ಇರುವ ಎಲ್ಲ ಬೀದಿ ನಾಯಿಗಳನ್ನು ಆಶ್ರಯತಾಣಗಳಿಗೆ ಸ್ಥಳಾಂತರಿಸಿ ಎಂದು ಆಗಸ್ಟ್ 11ರಂದು ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ ಮತ್ತು ಆರ್. ಮಹದೇವನ್ ಅವರಿದ್ದ ಪೀಠವು ನೀಡಿದ ನಿರ್ದೇಶನಕ್ಕೆ ಮಧ್ಯಂತರ ತಡೆ ನೀಡಬೇಕು ಎಂದು ಕೊರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನಡೆಸಲಾಯಿತು.
ನ್ಯಾಯಮೂರ್ತಿ ವಿಕ್ರಮ್ ನಾಥ್ ನೇತೃತ್ವದಲ್ಲಿ ನ್ಯಾಯಮೂರ್ತಿಗಳಾದ ಸಂದೀಪ್ ಮೆಹ್ತಾ ಮತ್ತು ಎನ್.ವಿ. ಅಂಜಾರಿಯಾ ಅವರಿದ್ದ ಪೀಠವು ಅರ್ಜಿಯ ವಿಚಾರಣೆ ನಡೆಸಿತು. ಬೀದಿ ನಾಯಿಗಳನ್ನು ಸ್ಥಳಾಂತರಿಸುವ ಕುರಿತು ನೀಡಿದ ನಿರ್ದೇಶನಕ್ಕೆ ತಡೆ ನೀಡಬೇಕೆಂಬ ಕೋರಿಕೆಗೆ ಸಂಬಂಧಿಸಿದ ಆದೇಶವನ್ನು ಸುಪ್ರೀಂ ಕೋರ್ಟ್ ಕಾಯ್ದಿರಿಸಿತು.
‘ಬೀದಿ ನಾಯಿಗಳ ಕುರಿತು ಪ್ರಾಣಿ ಅಭಿವೃದ್ಧಿ ಮಂಡಳಿ, ಸ್ಥಳೀಯ ಆಡಳಿತ ಮತ್ತು ಸರ್ಕಾರಗಳು ಏನನ್ನೂ ಮಾಡಲಿಲ್ಲ. ಎನ್‌ಜಿಒಗಳು ಮಾತನಾಡುತ್ತವೆಯಷ್ಟೆ. ಆದರೆ, ಅವುಗಳಿಗೆ ತಾವು ನಿಜವಾಗಿ ಏನನ್ನು ಮಾಡಬೇಕು ಎಂದೇ ತಿಳಿದಿಲ್ಲ. ಪ್ರಾಣಿಗಳ ಸಂತಾನ ಶಕ್ತಿ ಹರಣ ನಿಯಮಗಳನ್ನು ಜಾರಿ ಮಾಡುವಲ್ಲಿ ಇವರೇ ಮುಂದಾಗಿರಬೇಕಿತ್ತು. ಏನೂ ಆಗುತ್ತಿಲ್ಲ’ ಎಂದು ಪೀಠ ಹೇಳಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.