
ಸಾಂದರ್ಭಿಕ ಚಿತ್ರ
ಕೋಲ್ಕತ್ತ: ಅನಾಥವಾಗಿ ಬಿದ್ದಿದ್ದ ನವಜಾತ ಶಿಶುವನ್ನು ಬೀದಿ ನಾಯಿಗಳ ಗುಂಪೊಂದು ರಾತ್ರಿ ಇಡೀ ಕಾವಲು ಕಾದು ರಕ್ಷಿಸಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ನಾದಿಯಾ ಜಿಲ್ಲೆಯ ರೈಲ್ವೆ ಕಾರ್ಮಿಕರ ಕಾಲೋನಿಯಲ್ಲಿ ಶಿಶು ಪತ್ತೆಯಾಗಿದೆ ಎಂದು ವರದಿಯಾಗಿದೆ.
ಮಗುವನ್ನು ಶೌಚಾಲಯದ ಹೊರಗೆ ನೆಲದ ಮೇಲೆ ಇರಿಸಲಾಗಿತ್ತು. ಮಗುವಿನ ಮೈಮೇಲೆ ಬಟ್ಟೆ ಸಹ ಇರಲಿಲ್ಲ ಎಂದು ನಿವಾಸಿಗಳು ಹೇಳಿದ್ದಾರೆ. ಆ ನವಜಾತ ಶಿಶುವಿನ ಸುತ್ತಲೂ ವೃತ್ತಾಕಾರದಲ್ಲಿ ಸುತ್ತುವರಿದಿದ್ದ ಬೀದಿನಾಯಿಗಳು ಬೆಳಗಿನವರೆಗೂ ಅಲ್ಲಿಯೇ ಇದ್ದವು ಎಂದು ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ.
ಸಾಮಾನ್ಯವಾಗಿ ಬೀದಿ ನಾಯಿಗಳು ಮಕ್ಕಳ ಮೇಲೆ ಆಕ್ರಮಣ ಮಾಡುವುದನ್ನು ನೋಡಿರುತ್ತೇವೆ. ಆದರೆ, ಇಲ್ಲಿನ ಕಥೆಯೇ ಬೇರೆ. ನಾಯಿಗಳು ಆಕ್ರಮಣಕಾರಿಯಾಗಿರಲಿಲ್ಲ. ಮಗು ಬದುಕಲು ಹೋರಾಡುತ್ತಿದೆ ಎಂಬುದನ್ನು ಅರ್ಥಮಾಡಿಕೊಂಡಂತೆ ಅವು ಕಾಯುತ್ತಿದ್ದವು ಎಂದು ಅವರು ತಿಳಿಸಿದ್ದಾರೆ.
ಬೆಳಗಿನ ಜಾವ ಮಗು ಅಳುವ ಶಬ್ಧ ಕೇಳಿಸಿತು. ಯಾವುದೋ ಕುಟುಂಬದಲ್ಲಿ ಅನಾರೋಗ್ಯ ಪೀಡಿತ ಮಗು ಇದೆ ಎಂದು ನಾನು ಭಾವಿಸಿದೆ. ಆದರೆ, ಹೊರಗೆ ಬಂದು ನೋಡಿದಾಗ ಅಚ್ಚರಿಯಾಯಿತು. ನವಜಾತ ಶಿಶು ಬೀದಿಯಲ್ಲಿ ಮಲಗಿತ್ತು. ನಾಯಿಗಳು ಕಾವಲು ಕಾಯುತ್ತಿದ್ದವು. ಆ ದೃಶ್ಯ ನನಗೆ ನಂಬಲು ಅಸಾಧ್ಯವಾಗಿತ್ತು ಎಂದು ಮತ್ತೊಬ್ಬ ನಿವಾಸಿ ಸುಭಾಷ್ ಪಾಲ್ ಹೇಳಿದ್ದಾರೆ.
ಬಳಿಕ, ಸ್ಥಳೀಯ ನಿವಾಸಿಯೊಬ್ಬರು ಶಿಶುವನ್ನು ತನ್ನ ದುಪಟ್ಟಾದಲ್ಲಿ ಸುತ್ತಿಕೊಂಡು ಸಮೀಪದ ಮಹೇಶ್‌ಗಂಜ್ ಆಸ್ಪತ್ರೆಗೆ ಕರೆದೊಯ್ದರು. ನಂತರ, ಮಗುವನ್ನು ಕೃಷ್ಣನಗರ ಸದರ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಮಗುವಿಗೆ ಯಾವುದೇ ಗಾಯಗಳಾಗಿಲ್ಲ ಎಂದು ವೈದ್ಯರು ದೃಢಪಡಿಸಿದ್ದು, ತಲೆಯ ಮೇಲೆ ಕಂಡುಬಂದ ರಕ್ತವು ಹುಟ್ಟಿನಿಂದಲೇ ಇದ್ದಂತೆ ಕಾಣುತ್ತದೆ ಎಂದು ಹೇಳಿದ್ದಾರೆ.
ಪೊಲೀಸರು ಈ ಸಂಬಂಧ ತನಿಖೆ ಆರಂಭಿಸಿದ್ದು, ಮಗುವನ್ನು ಬಿಟ್ಟುಹೋದವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.