ADVERTISEMENT

ವಿದ್ಯಾರ್ಥಿ ನಿಲಯಕ್ಕೂ ಇದೆ ಜಿಎಸ್‌ಟಿ ವಿನಾಯಿತಿ: ಸುಪ್ರೀಂ ಕೋರ್ಟ್‌

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2025, 16:15 IST
Last Updated 4 ಡಿಸೆಂಬರ್ 2025, 16:15 IST
<div class="paragraphs"><p>ಸುಪ್ರೀಂ ಕೋರ್ಟ್‌</p></div>

ಸುಪ್ರೀಂ ಕೋರ್ಟ್‌

   

ನವದೆಹಲಿ: ‘ವಿದ್ಯಾರ್ಥಿಗಳಿಗೆ ಮತ್ತು ಉದ್ಯೋಗಸ್ಥ ಪುರುಷ, ಮಹಿಳೆಯರಿಗಾಗಿ ವಿದ್ಯಾರ್ಥಿ ನಿಲಯ ನಡೆಸಲು ಯಾವುದಾರು ಕಟ್ಟಡವನ್ನು ಭೋಗ್ಯಕ್ಕೆ ಅಥವಾ ಬಾಡಿಗೆಗೆ ಪಡೆದುಕೊಂಡಿದ್ದರೆ, ಇದರ ಶುಲ್ಕದ ಮೇಲೆ ಜಿಎಸ್‌ಟಿ ಪಾವತಿ ಮಾಡಬೇಕಾಗಿಲ್ಲ’ ಎಂದು ಸುಪ್ರೀಂ ಕೋರ್ಟ್‌ ಗುರುವಾರ ಹೇಳಿದೆ.

ಬೆಂಗಳೂರಿನ ವಸತಿ ನಿಲಯವೊಂದರ ಸಹ ಮಾಲೀಕರೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲ ಮತ್ತು ಕೆ.ವಿ. ವಿಶ್ವನಾಥನ್‌ ಅವರ ಪೀಠ ನಡೆಸಿತು. ಇದೇ ವಿಚಾರವಾಗಿ ಅರ್ಜಿದಾರರು ಕರ್ನಾಟಕದ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಇಲ್ಲಿಯೂ ಇವರ ಪರವಾಗಿಯೇ ಆದೇಶ ಬಂದಿತ್ತು.

ADVERTISEMENT

ವಿಚಾರದ ಕುರಿತು ಹೆಚ್ಚಿನ ಸ್ಪಷ್ಟತೆಗಾಗಿ ಅರ್ಜಿದಾರರು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು. ಡಿಟ್ವೆಲ್‌ ಸ್ಪೇಸ್‌ ಪ್ರೈವೇಟ್‌ ಲಿ. ಕಂಪನಿಯು ಕಟ್ಟಡವನ್ನು ಭೋಗ್ಯಕ್ಕೆ ಪಡೆದುಕೊಂಡಿತ್ತು.

‘ಈ ಪ್ರಕರಣದಲ್ಲಿ ವಸತಿ ಪ್ರದೇಶವನ್ನು ವಸತಿ ನೀಡುವುದಕ್ಕಾಗಿಯೇ ಬಳಸಿಕೊಳ್ಳಲಾಗಿದೆ. ಒಂದು ವೇಳೆ ಕಟ್ಟಡ ಬಾಡಿಗೆ ಶುಲ್ಕದ ಮೇಲೆ ಶೇ 18ರಷ್ಟು ಜಿಎಸ್‌ಟಿ ಕಟ್ಟುವಂತೆ ಕಂಪನಿಗೆ ಹೇಳಿದರೆ, ಅದು ಈ ಹಣವನ್ನು ನಿಲಯದಲ್ಲಿ ಉಳಿದುಕೊಂಡ ವಿದ್ಯಾರ್ಥಿಗಳು ಮತ್ತು ಉದ್ಯೋಗಸ್ಥರಿಂದ ವಸೂಲಿ ಮಾಡುತ್ತದೆ. ಇದರಿಂದ ವಸತಿ ನಿಲಯಗಳನ್ನು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿಡುವ ಕಾನೂನಿನ ಮೂಲ ಉದ್ದೇಶವೇ ಹಾಳಾಗುತ್ತದೆ’ ಎಂದು ಪೀಠ ಹೇಳಿತು.

ವಿದ್ಯಾರ್ಥಿ ನಿಲಯದಲ್ಲಿ ಒಟ್ಟು 42 ಕೊಠಡಿಗಳಿವೆ. ಜಿಎಸ್‌ಟಿ ವಿನಾಯಿತಿಗಾಗಿ ಅರ್ಜಿದಾರರು ಮೊದಲಿಗೆ ಕರ್ನಾಟಕದ ವಾಣಿಜ್ಯ ತೆರಿಗೆ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ‘ವಿದ್ಯಾರ್ಥಿ ನಿಲಯವು ವಸತಿ ನಿಲಯವಲ್ಲ. ಆದ್ದರಿಂದ, ನಿಯಮಗಳ ಅನುಸಾರ ವಿನಾಯಿತಿ ಸಾಧ್ಯವಿಲ್ಲ’ ಎಂದು ಇಲಾಖೆ ಹೇಳಿತ್ತು. ಇದರ ವಿರುದ್ಧ ಅರ್ಜಿದಾರರು ವಾಣಿಜ್ಯ ತೆರಿಗೆ ಮೇಲ್ಮನವಿ ನ್ಯಾಯ ಮಂಡಳಿ ಮೊರೆ ಹೋಗಿದ್ದರು. ಇಲ್ಲಿಯೂ ವಿನಾಯಿತಿ ಸಾಧ್ಯವಿಲ್ಲ ಎಂಬ ಆದೇಶ ಬಂದಿತ್ತು. ಅರ್ಜಿದಾರರು ಬಳಿಕ ಕರ್ನಾಟಕ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.