ಬಾಂಬ್ ಬೆದರಿಕೆ
(ಸಾಂದರ್ಭಿಕ ಚಿತ್ರ)
ನವದೆಹಲಿ: ನೋಯ್ಡಾದ ನಾಲ್ಕು ಶಾಲೆಗಳಿಗೆ ಬಾಂಬ್ ಬೆದರಿಕೆಯ ನಕಲಿ ಇ–ಮೇಲ್ ಕಳುಹಿಸಿದ್ದ 9ನೇ ತರಗತಿಯ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನನ್ನ ಸ್ಥಳ ಮತ್ತು ಐಪಿ ವಿಳಾಸವನ್ನು ಮರೆಮಾಚಲು ವರ್ಚುವಲ್ ಪ್ರೈವೇಟ್ ನೆಟ್‌ವರ್ಕ್ (ವಿಪಿಎನ್) ತಂತ್ರಜ್ಞಾನವನ್ನು ಬಳಸಿದ್ದೆ ಎಂದು ದೆಹಲಿಯ ಸರಿತಾ ವಿಹಾರ್ ನಿವಾಸಿಯಾಗಿರುವ ವಿದ್ಯಾರ್ಥಿ ತಪ್ಪೊಪ್ಪಿಕೊಂಡಿದ್ದಾನೆ. ವಿಚಾರಣೆ ಬಳಿಕ ಆತನನ್ನು ಬಾಲಾಪರಾಧ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘ನೋಯ್ಡಾದ ಹೆರಿಟೇಜ್ ಸ್ಕೂಲ್, ಜ್ಞಾನಶ್ರೀ ಮತ್ತು ಮಯೂರ್ ಶಾಲೆಗಳಿಗೆ ಬುಧವಾರ ಮಧ್ಯರಾತ್ರಿ ಬಾಂಬ್ ಬೆದರಿಕೆಯ ಇ–ಮೇಲ್ ಬಂದಿತ್ತು. ಈ ಕುರಿತು ಶಾಲೆಯ ಆಡಳಿತ ಮಂಡಳಿಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಧಾವಿಸಿ ತಪಾಸಣೆ ನಡೆಸಿದಾಗ ಯಾವುದೇ ಅನುಮಾನಾಸ್ಪದ ವಸ್ತುಗಳು ಕಂಡುಬಂದಿರಲಿಲ್ಲ’ ಎಂದು ನೋಯ್ಡಾ ಪೊಲೀಸ್ ಉಪ ಆಯುಕ್ತ (ಡಿಸಿಪಿ) ರಾಮ್ ಬದನ್ ಸಿಂಗ್ ‘ಪಿಟಿಐ’ಗೆ ತಿಳಿಸಿದ್ದಾರೆ.
ಎಲ್ಲಾ ಶಾಲೆಗಳಿಗೆ ನಕಲಿ ಇ–ಮೇಲ್ ಕಳುಹಿಸಿರುವುದರ ಹಿಂದೆ 9ನೇ ತರಗತಿಯ ವಿದ್ಯಾರ್ಥಿಯ ಕೈವಾಡವಿದೆ ಎಂದು ಸೈಬರ್ ಅಧಿಕಾರಿಗಳ ತಂಡ ಪತ್ತೆ ಹಚ್ಚಿದೆ ಎಂದು ಬದನ್ ಸಿಂಗ್ ಹೇಳಿದ್ದಾರೆ.
‘ವಿದ್ಯಾರ್ಥಿ ಶಾಲೆಗಳಿಗೆ ಬಾಂಬ್ ಬೆದರಿಕೆ ಇ–ಮೇಲ್‌ಗಳನ್ನು ಕಳುಹಿಸುವುದು ಹೇಗೆ ಎಂಬುದರ ಕುರಿತು ಇಂಟರ್‌ನೆಟ್‌ನಲ್ಲಿ ಹುಡುಕಾಟ ನಡೆಸಿದ್ದ. ಜತೆಗೆ, ಬಾಂಬ್ ಬೆದರಿಕೆ ಹಾಕುವ ಬಗ್ಗೆ ವಿವಿಧ ವೆಬ್‌ಸೈಟ್‌ಗಳಲ್ಲಿ ಪ್ರಕಟವಾಗಿರುವ ಸುದ್ದಿಗಳನ್ನು ಓದಿಕೊಂಡಿದ್ದ’ ಎಂದು ಸಿಂಗ್ ವಿವರಿಸಿದ್ದಾರೆ.
ಪ್ರಕರಣ ಸಂಬಂಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) 212, 351(4), 352 ಮತ್ತು ಐಟಿ ಕಾಯ್ದೆಯ 67 ಡಿ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.