ADVERTISEMENT

ನೈತಿಕ ಪೊಲೀಸ್‌ಗಿರಿ: ಪ್ರಾಂಶುಪಾಲರನ್ನು ಕೊಠಡಿಯಲ್ಲಿ ಕೂಡಿ ಹಾಕಿದ ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 13 ಜನವರಿ 2020, 16:09 IST
Last Updated 13 ಜನವರಿ 2020, 16:09 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತಿರುವನಂತಪುರ: ನೈತಿಕ ಪೊಲೀಸ್‌ಗಿರಿ ನಡೆಸಿದ ಆರೋಪದ ಮೇರೆಗೆ ವಿದ್ಯಾರ್ಥಿಗಳು ಪ್ರಾಂಶುಪಾಲರನ್ನು ಕೊಠಡಿಯಲ್ಲಿ ಕೂಡಿ ಹಾಕಿದ ಘಟನೆ ಕೇರಳದ ಕೋಯಿಕೋಡ್ ಜಿಲ್ಲೆಯ ಚೇಳನ್ನೂರಿನಲ್ಲಿ ನಡೆದಿದೆ.

ಶ್ರೀನಾರಾಯಣ ಗುರು ಕಾಲೇಜಿನ ಪ್ರಾಂಶುಪಾಲರಾದ ದೇವಿಪ್ರಿಯಾ ಕೊಠಡಿಯಲ್ಲಿ ಬಂಧಿತರಾದವರು.

ಅತಿಥಿ ಉಪನ್ಯಾಸಕರೊಬ್ಬರು ವಿಚಾರ ಸಂಕಿರಣವೊಂದರಲ್ಲಿ ಸ್ನಾತಕೋತ್ತರ ಪದವಿ ಓದುತ್ತಿರುವ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರನ್ನು ಒಟ್ಟಿಗೆ ಕೂರಲು ಅವಕಾಶ ಕೊಟ್ಟಿದ್ದರು ಎನ್ನುವ ಕಾರಣಕ್ಕಾಗಿ ಉಪನ್ಯಾಸಕರನ್ನು ಸೇವೆಯಿಂದ ಅಮಾನತುಗೊಳಿಸಿದ್ದರು.

ADVERTISEMENT

‘ಪ್ರಾಂಶುಪಾಲರು ನೈತಿಕ ಪೊಲೀಸ್‌ಗಿರಿ ನಡೆಸುತ್ತಿದ್ದಾರೆ ಎಂದು ಆರೋಪಿಸಿರುವ ವಿದ್ಯಾರ್ಥಿಗಳು, ಅತಿಥಿ ಉಪನ್ಯಾಸಕರನ್ನು ಅಮಾನತು ರದ್ದುಗೊಳಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ಈ ಸಂಬಂಧ ಕಾಲೇಜು ಆಡಳಿತ ಮಂಡಳಿಯ ಪ್ರತಿಕ್ರಿಯೆ ಪಡೆಯಲು ಪ್ರಯತ್ನಿಸಿದಾಗ ಅವರು ಲಭ್ಯರಾಗಲಿಲ್ಲ.

‘ಪ್ರಾಂಶುಪಾಲರು ವಿದ್ಯಾರ್ಥಿಗಳೊಂದಿಗೆ ಮಾತನಾಡಲು ಸಿದ್ಧರಿರಲಿಲ್ಲ. ಹಾಗಾಗಿ, ವಿದ್ಯಾರ್ಥಿಗಳು ಪ್ರಾಂಶುಪಾಲರನ್ನು ಕೊಠಡಿಯಲ್ಲಿ ಕೂಡಿಹಾಕಿದರು’ ಎಂದು ಮೂಲಗಳು ತಿಳಿಸಿವೆ.

ಕಾಲೇಜಿಗೆ ಭೇಟಿ ನೀಡಿದ ಹಿರಿಯ ಪೊಲೀಸ್ ಅಧಿಕಾರಿಗಳು ವಿದ್ಯಾರ್ಥಿಗಳು ಮತ್ತು ಪ್ರಾಂಶುಪಾಲರ ಮನವೊಲಿಸಲು ಯತ್ನಿಸಿದರಾದರೂ, ಪ್ರಾಂಶುಪಾಲರು ವಿದ್ಯಾರ್ಥಿಗಳೊಂದಿಗೆ ಮಾತನಾಡಲು ನಿರಾಕರಿಸಿದರು. ಪ್ರಾಂಶುಪಾಲರು ನಮ್ಮ ಬೇಡಿಕೆ ಈಡೇರಿಸಿದಲ್ಲಿ ಮಾತ್ರ ಅವರೊಂದಿಗೆ ಮಾತನಾಡುವುದಾಗಿ ವಿದ್ಯಾರ್ಥಿಗಳು ಪಟ್ಟು ಹಿಡಿದರು ಎನ್ನಲಾಗಿದೆ.

ಇತ್ತೀಚೆಗಷ್ಟೇ ಇದೇ ಕಾಲೇಜಿನ ವಿದ್ಯಾರ್ಥಿನಿಯೊಬ್ಬರು ಸಂಜೆ ವೇಳೆ ಹಾಸ್ಟೆಲ್‌ನಲ್ಲಿ ಮೊಬೈಲ್ ಬಳಸುವುದನ್ನು ನಿಷೇಧಿಸಿದ್ದನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೊಕ್ಕಿದ್ದರು. ಈ ಪ್ರಕರಣದಲ್ಲಿ ಕೋರ್ಟ್ ವಿದ್ಯಾರ್ಥಿನಿಯರ ಪರ ಆದೇಶ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.