ADVERTISEMENT

ಅಯೋಧ್ಯೆ: ಸುನ್ನಿ ಮಂಡಳಿಯಿಂದ ಮೇಲ್ಮನವಿ ಇಲ್ಲ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2019, 19:41 IST
Last Updated 26 ನವೆಂಬರ್ 2019, 19:41 IST

ಲಖನೌ: ಅಯೋಧ್ಯೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸದಿರಲು ಸುನ್ನಿ ಕೇಂದ್ರ ವಕ್ಫ್ ಮಂಡಳಿ ನಿರ್ಧರಿಸಿದೆ. ಆದರೆ ಪರ್ಯಾಯ ಜಮೀನು ಸ್ವೀಕರಿಸುವ ಬಗ್ಗೆ ಯಾವುದೇ ತೀರ್ಮಾನಕ್ಕೆ ಮಂಡಳಿ ಬಂದಿಲ್ಲ.

ಎಂಟು ಸದಸ್ಯರ ಪೈಕಿ ಏಳು ಸದಸ್ಯರುಮಂಗಳವಾರ ಸಭೆ ನಡೆಸಿ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಮಂಡಳಿ ಅಧ್ಯಕ್ಷ ಝಫರ್ ಫಾರೂಕಿ ಅವರು ಹೇಳಿದ್ದಾರೆ. ಸಭೆಯಲ್ಲಿ ಹಾಜರಿದ್ದವರ ಪೈಕಿ ಆರು ಸದಸ್ಯರು ಮೇಲ್ಮನವಿ ಸಲ್ಲಿಸಬಾರದು ಎಂದು ಪ್ರತಿಪಾದಿಸಿದರು.

ಕೋರ್ಟ್ ಆದೇಶದ ಪ್ರಕಾರ ಅಯೋಧ್ಯೆಯಲ್ಲಿ ಹೊಸ ಮಸೀದಿ ನಿರ್ಮಾಣಕ್ಕೆ ಐದು ಎಕರೆ ಭೂಮಿಯನ್ನು ತೆಗೆದುಕೊಳ್ಳಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಮಂಡಳಿ ಇನ್ನಷ್ಟೇ ನಿರ್ಧಾರ ತೆಗೆದುಕೊಳ್ಳಬೇಕಿದೆ. ಇದಕ್ಕೆ ಇನ್ನಷ್ಟು ಸಮಯ ಬೇಕಿದೆ ಎಂದು ಫಾರೂಕಿ ಹೇಳಿದ್ದಾರೆ.

ADVERTISEMENT

ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವುದಾಗಿ ‘ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ’ಯು (ಎಐಎಂಪಿಎಲ್‌ಬಿ) ಈ ಮೊದಲು ಹೇಳಿತ್ತು. ಮಸೀದಿ ನೀರ್ಮಾಣಕ್ಕೆ ಪರ್ಯಾಯ ಜಾಗ ಸ್ವೀಕರಿಸುವುದನ್ನೂ ಮಂಡಳಿ ವಿರೋಧಿಸಿತ್ತು.

ಫಾರೂಕಿ ವಿರುದ್ಧ ಆರೋಪ

ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಬೇಕು ಎಂಬ ನಿಲುವು ಪ್ರತಿಪಾದಿಸಿದ ಏಕೈಕ ಸದಸ್ಯ ಅಬ್ದುಲ್ ರಜಾಕ್ ಸಭೆಯಿಂದ ಅರ್ಧದಲ್ಲಿಯೇ ಹೊರನಡೆದರು. ಮೇಲ್ಮನವಿ ಹಾಗೂ ಜಮೀನು ಸ್ವೀಕಾರಕ್ಕೆ ಸಂಬಂಧಪಟ್ಟಂತೆ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು ಎಂದು ಮೂಲಗಳು ತಿಳಿಸಿವೆ.ಮಂಡಳಿ ಮುಖ್ಯಸ್ಥರ ಮಾತುಗಳಿಗೆ ಎಲ್ಲ ಸದಸ್ಯರೂ ತಲೆಯಾಡಿಸುತ್ತಾರೆ ಎಂದು ಅವರು ಆರೋಪಿಸಿದ್ದಾರೆ.

ಫಾರೂಕಿ ಅವರ ವಿರುದ್ಧ ವಕ್ಫ್ ಮಂಡಳಿಯ ಜಮೀನು ಮಾರಾಟ ಹಾಗೂ ಖರೀದಿ ಅವ್ಯವಹಾರದ ಆರೋಪವಿದೆ. ಈ ಸಂಬಂಧ ಉತ್ತರ ಪ್ರದೇಶ ಸರ್ಕಾರವು ಸಿಬಿಐ ತನಿಖೆಗೆ ಆದೇಶಿಸಿದೆ. ಸರ್ಕಾರದ ಜತೆ ಒಳ್ಳೆಯ ಸಂಬಂಧ ಇರಿಸಿಕೊಳ್ಳುವ ಸಲುವಾಗಿ ಮೇಲ್ಮನವಿ ಸಲ್ಲಿಸದಿರಲು ಫಾರೂಕಿ ನಿರ್ಧರಿಸಿದ್ದಾರೆ ಎಂಬುದು ಅವರ ವಿರೋಧಿಗಳ ಆರೋಪವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.