ADVERTISEMENT

ಎನ್‌ಡಿಪಿಪಿ – ಬಿಜೆಪಿ ಸರ್ಕಾರಕ್ಕೆ ಬೆಂಬಲ: ನಾಗಾಲ್ಯಾಂಡ್‌ ಜೆಡಿಯು ಘಟಕ ವಿಸರ್ಜನೆ

ಪಿಟಿಐ
Published 9 ಮಾರ್ಚ್ 2023, 6:57 IST
Last Updated 9 ಮಾರ್ಚ್ 2023, 6:57 IST
ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌
ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌   

ಪಾಟ್ನಾ: ಎನ್‌ಡಿಪಿಪಿ–ಬಿಜೆಪಿ ಮೈತ್ರಿಕೂಟದ ಸರ್ಕಾರಕ್ಕೆ ಬೆಂಬಲ ನೀಡಿರುವ ನಾಗಾಲ್ಯಾಂಡ್‌ ಜೆಡಿಯು ಘಟಕದ ವಿರುದ್ಧ ಬಿಹಾರದ ಮುಖ್ಯಮಂತ್ರಿ, ಪಕ್ಷದ ವರಿಷ್ಠ ನಿತೀಶ್‌ ಕುಮಾರ್ ಅಸಮಾಧಾನಗೊಂಡಿದ್ದಾರೆ. ನಾಗಾಲ್ಯಾಂಡ್‌ ಜೆಡಿಯು ಘಟಕವು ಅಶಿಸ್ತು ಮತ್ತು ಮನಬಂದಂತೆ ವರ್ತಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಕ್ಷದ ನಾಗಾಲ್ಯಾಂಡ್‌ ರಾಜ್ಯ ಸಮಿತಿಯನ್ನು ವಿಸರ್ಜನೆಗೊಳಿಸಲಾಗಿದೆ ಎಂದು ಜೆಡಿಯುನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಫಕ್ ಅಹ್ಮದ್ ಖಾನ್ ತಿಳಿಸಿದ್ದಾರೆ.

ಇತ್ತೀಚೆಗೆ ನಾಗಾಲ್ಯಾಂಡ್‌ನ 60 ವಿಧಾನಸಭೆ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಜೆಡಿಯು ಒಂದು ಸ್ಥಾನ ಗೆದ್ದಿತ್ತು. ಎನ್‌ಡಿಪಿಪಿ–ಬಿಜೆಪಿ ಮೈತ್ರಿಕೂಟದ ಸರ್ಕಾರವು ಎರಡನೇ ಬಾರಿಗೆ ಸರ್ಕಾರ ರಚನೆ ಮಾಡಿದೆ.

ADVERTISEMENT

ನಾಗಾಲ್ಯಾಂಡ್‌ನ ಜೆಡಿಯು ರಾಜ್ಯ ಘಟಕದ ಅಧ್ಯಕ್ಷ ಪಕ್ಷದ ಹೈಕಮಾಂಡ್‌ಗೆ ಯಾವುದೇ ಮಾಹಿತಿ ನೀಡದೆ ನಾಗಾಲ್ಯಾಂಡ್‌ನ ಮುಖ್ಯಮಂತ್ರಿಗಳಿಗೆ ಬೆಂಬಲ ಪತ್ರವನ್ನು ಕಳುಹಿಸಿದ್ದಾರೆ. ಈ ಮೂಲಕ ಅಶಿಸ್ತು ಪ್ರದರ್ಶಿಸಿ, ಮನಬಂದಂತೆ ವರ್ತಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಕ್ಷಣವೇ ನಾಗಾಲ್ಯಾಂಡ್‌ ಘಟಕವನ್ನು ವಿರ್ಸಜಿಸಲಾಗಿದೆ ಎಂದು ಹೇಳಿಕೆಯೂ ತಿಳಿಸಿದೆ.

ಕಳೆದ ವರ್ಷ ಬಿಜೆ‍ಪಿಯೊಂದಿಗಿನ ಸಂಬಂಧವನ್ನು ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಕಡೆದುಕೊಂಡಿದ್ದು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪ್ರತಿಪಕ್ಷಗಳನ್ನು ಒಗ್ಗೂಡಿಸುವ ಮೂಲಕ ಬಿಜೆಪಿಯನ್ನು ಸೋಲಿಸುವ ಪಣ ತೊಟ್ಟಿದ್ದಾರೆ. ಇದೀಗ ಜೆಡಿಯು ಬಿಜೆಪಿಗೆ ನೀಡಿರುವ ಬೆಂಬಲವು ನಿತೀಶ್‌ಗೆ ಮುಜುಗರ ಉಂಟು ಮಾಡಿದೆ.

ಎನ್‌ಸಿಪಿ, ಎನ್‌ಪಿಪಿ, ನಾಗಾ ಪೀಪಲ್ಸ್ ಫ್ರಂಟ್, ಆರ್‌ಪಿಐ (ಎ), ಎಲ್‌ಜೆಪಿ, ಜೆಡಿಯು ಪಕ್ಷಗಳು ಸೇರಿದಂತೆ ಸ್ವತಂತ್ರ ಶಾಸಕರು ಎನ್‌ಡಿಪಿಪಿ-ಬಿಜೆಪಿ ಮೈತ್ರಿ ಸರ್ಕಾರಕ್ಕೆ ಬೆಂಬಲ ವ್ಯಕ್ತಪಡಿಸಿವೆ.

ಎನ್‌ಡಿಪಿಪಿ ಅಧ್ಯಕ್ಷ ನೆಫಿಯು ರಿಯೊ ಮಂಗಳವಾರ ನಾಗಾಲ್ಯಾಂಡ್‌ನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.