ADVERTISEMENT

ಅಕ್ರಮ ಡಿನೋಟಿಫಿಕೇಷನ್‌: ವಿಚಾರಣೆ ಪುನಾರಂಭಕ್ಕೆ ‘ಸುಪ್ರೀಂ’ಗೆ ಅರ್ಜಿ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2019, 18:56 IST
Last Updated 5 ಮಾರ್ಚ್ 2019, 18:56 IST
s
s   

ನವದೆಹಲಿ: ಅಕ್ರಮ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹಾಗೂ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧದ ಅಪರಾಧ ಪ್ರಕರಣದ ವಿಚಾರಣೆಯನ್ನು ಪುನಾರಂಭಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ.

ಈ ಇಬ್ಬರೂ ಮುಖಂಡರ ವಿರುದ್ಧದ ಪ್ರಕರಣವನ್ನು ಕೈಬಿಟ್ಟು 2015ರ ಡಿಸೆಂಬರ್‌ 18ರಂದು ರಾಜ್ಯ ಹೈಕೋರ್ಟ್‌ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ವಿಶೇಷ ಅರ್ಜಿಯನ್ನು ರಾಮನಗರದ ಸಾಮಾಜಿಕ ಕಾರ್ಯಕರ್ತ ಕಬ್ಬಾಳೆ ಗೌಡ ಅವರು ಹಿಂದಕ್ಕೆ ಪಡೆದ ಕಾರಣ ಫೆಬ್ರುವರಿ 21ರಂದು ಸುಪ್ರೀಂ ಕೋರ್ಟ್‌ ಪ್ರಕರಣವನ್ನು ವಜಾಗೊಳಿಸಿತ್ತು.

ಮೂಲ ಅರ್ಜಿದಾರರು ರಾಜಿ ಆಗುವ ಮೂಲಕ ಅರ್ಜಿಯನ್ನು ಹಿಂದಕ್ಕೆ ಪಡೆದಿದ್ದಾರೆ. ಜೊತೆಗೆ ಆರೋಪಿಯು ಕಾನೂನಿನ ದುರ್ಬಳಕೆ ಮಾಡಿಕೊಂಡಿರುವ ಸಾಧ್ಯತೆ ಇದೆ. ದೂರುದಾರರು ರಾಜಿ ಆಗಿರಬಹುದು. ದೂರು ಹಾಗೇ ಇದೆ. ಹಾಗಾಗಿ ಈ ಪ್ರಕರಣದ ವಿಚಾರಣೆಯನ್ನು ಪುನಾರಂಭಿಸಬೇಕು ಎಂದು ಮೇಲ್ಮನವಿ ಸಲ್ಲಿಸಿರುವ ಸಮಾಜ ಪರಿವರ್ತನ ಸಮುದಾಯದ ಅಧ್ಯಕ್ಷ ಎಸ್‌.ಆರ್‌. ಹಿರೇಮಠ ಮೇಲ್ಮನವಿಯಲ್ಲಿ ತಿಳಿಸಿದ್ದಾರೆ.

ADVERTISEMENT

ಈ ಮೇಲ್ಮನವಿಯ ಕುರಿತು ಪರಿಶೀಲನೆ ನಡೆಸಲಾಗುವುದು ಎಂದು ನ್ಯಾಯಾಲಯ ತಿಳಿಸಿದೆ. ಬೆಂಗಳೂರಿನ ಕೆ.ಆರ್.ಪುರ ಹೋಬಳಿಯ ಬೆನ್ನಿಗಾನಹಳ್ಳಿಯಲ್ಲಿ 1962ರಲ್ಲಿ ಬಿ.ಕೆ. ಶ್ರೀನಿವಾಸನ್‌ ಎಂಬುವವರು ಖರೀದಿಸಿದ್ದ 5.11 ಎಕರೆ ಭೂಮಿಯ ಪೈಕಿ 4.20 ಎಕರೆ ಕೃಷಿ ಭೂಮಿಯನ್ನು ಕೈಗಾರಿಕೆ ಉದ್ದೇಶಕ್ಕೆ ಪರಿವರ್ತಿಸಲಾಗಿತ್ತು. ನಂತರ ಇದೇ ಭೂಮಿಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಾಯ್ದೆ ಅಡಿ ಸ್ವಾಧೀನಪಡಿಸಿಕೊಳ್ಳಲು ನೋಟಿಫೈ ಮಾಡಲಾಗಿತ್ತು.

ಆದರೆ, 2003ರಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದ ಡಿ.ಕೆ. ಶಿವಕುಮಾರ್ ಅವರು ನೋಟಿಫೈ ಮಾಡಿರುವ ವಿಷಯ ಗೊತ್ತಿದ್ದೂ ಶ್ರೀನಿವಾಸನ್‌ ಅವರಿಂದ ಈ ಭೂಮಿಯನ್ನು ₹ 1.62 ಕೋಟಿ ನೀಡಿ ಖರೀದಿಸಿದ್ದರು. 2010ರಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್‌. ಯಡಿಯೂರಪ್ಪ ಅವರು ₹ 29 ಕೋಟಿ ಮೌಲ್ಯದ ಭೂಮಿಯನ್ನು ವಸತಿ ಸಮುಚ್ಛಯ ನಿರ್ಮಿಸುವ ಉದ್ದೇಶಕ್ಕೆ ಡಿನೋಟಿಫೈ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.