ADVERTISEMENT

ಪಶ್ಚಿಮ ಬಂಗಾಳ ಚುನಾವಣೋತ್ತರ ಹಿಂಸಾಚಾರ: ನ.16ಕ್ಕೆ ವಿಚಾರಣೆ ಮುಂದೂಡಿದ 'ಸುಪ್ರೀಂ'

ಪಿಟಿಐ
Published 22 ಅಕ್ಟೋಬರ್ 2021, 8:04 IST
Last Updated 22 ಅಕ್ಟೋಬರ್ 2021, 8:04 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ‘ಕಾಯ್ದೆಯಂತೆ ರಾಜ್ಯ ಸರ್ಕಾರದ ಪೂರ್ವಾನುಮತಿ ಪಡೆಯದೇ ರಾಜ್ಯದಲ್ಲಿನ ಚುನಾವಣೋತ್ತರ ಹಿಂಸಾಚಾರದ ತನಿಖೆಯನ್ನು ಸಿಬಿಐ ನಡೆಸುತ್ತಿದೆ‘ ಎಂದು ಆರೋಪಿಸಿ ಪಶ್ಚಿಮ ಬಂಗಾಳ ಸರ್ಕಾರವು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ನವೆಂಬರ್‌ 16ಕ್ಕೆ ಮುಂದೂಡಿತು.

ನ್ಯಾಯಮೂರ್ತಿಗಳಾದ ಎಲ್‌.ನಾಗೇಶ್ವರರಾವ್ ಮತ್ತು ಬಿ.ಆರ್.ಗವಾಯ್‌ ಅವರಿದ್ದ ನ್ಯಾಯಪೀಠವು, ಪಶ್ಚಿಮ ಬಂಗಾಳ ರಾಜ್ಯದ ಅರ್ಜಿಗೆ ಪ್ರತಿಕ್ರಿಯೆಯಾಗಿ ಕೇಂದ್ರ ಸರ್ಕಾರ ಈಗಾಗಲೇ ಪ್ರತಿಕ್ರಿಯೆ ದಾಖಲಿಸಿದೆ ಎಂಬದನ್ನೂ ಪರಿಗಣಿಸಿತು.

ಪಶ್ಚಿಮ ಬಂಗಾಳವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಕಪಿಲ್ ಸಿಬಲ್‌ ಅವರು, ಸಿಬಿಐ ಈಗಾಗಲೇ ಎಫ್‌ಐಆರ್ ಆಧರಿಸಿ ತನಿಖೆ ಕೈಗೊಂಡಿರುವ ಕಾರಣ ವಿಚಾರಣೆಗೆ ನಿರ್ದಿಷ್ಟ ದಿನಾಂಕವನ್ನು ಪ್ರಕಟಿಸಬೇಕು ಎಂದು ಮನವಿ ಮಾಡಿದರು.

ADVERTISEMENT

ಇದಕ್ಕೆ ನ್ಯಾಯಪೀಠವು, ನವೆಂಬರ್ 16ರಂದು ವಿಚಾರಣೆ ನಡೆಸೋಣ. ಸಂಬಂಧಿಸಿದವರು ಸ್ಪಷ್ಟನೆ ಅಥವಾ ಹೆಚ್ಚುವರಿ ದಾಖಲೆಗಳಿದ್ದರೆ ಸಲ್ಲಿಸಬಹುದು ಎಂದು ತಿಳಿಸಿತು. ಸಿಬಿಐ ಇತ್ತೀಚೆಗಷ್ಟೇ ಪಶ್ಚಿಮ ಬಂಗಾಳದಲ್ಲಿನ ಚುನಾವಣೋತ್ತರ ಹಿಂಸಾಚಾರ ಕೃತ್ಯಗಳಿಗೆ ಸಂಬಂಧಿಸಿ ವಿವಿಧ ಎಫ್‌ಐಆರ್‌ಗಳನ್ನು ದಾಖಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.