ADVERTISEMENT

ರಾಜಸ್ಥಾನ: ಹಗ್ಗಜಗ್ಗಾಟಕ್ಕಿಲ್ಲ ಕೊನೆ

ಅಧಿವೇಶನ ನಡೆಸಲು ಷರತ್ತು ವಿಧಿಸಿದ ರಾಜ್ಯಪಾಲ: ವಿಶ್ವಾಸಮತ ಕೋರಿದರೆ ನೇರ ಪ್ರಸಾರ ಕಡ್ಡಾಯ

ಪಿಟಿಐ
Published 27 ಜುಲೈ 2020, 21:10 IST
Last Updated 27 ಜುಲೈ 2020, 21:10 IST
ಉತ್ತರಪ್ರದೇಶ ರಾಜ್ಯಪಾಲರ ನಿವಾಸದ ಮುಂದೆ ಪ್ರತಿಭಟನೆ ನಡೆಸಿದ ಕಾಂಗ್ರೆಸ್‌ ನಾಯಕರನ್ನು ಪೊಲೀಸರು ಸೋಮವಾರ ಬಂಧಿಸಿದರು –ಪಿಟಿಐ ಚಿತ್ರ
ಉತ್ತರಪ್ರದೇಶ ರಾಜ್ಯಪಾಲರ ನಿವಾಸದ ಮುಂದೆ ಪ್ರತಿಭಟನೆ ನಡೆಸಿದ ಕಾಂಗ್ರೆಸ್‌ ನಾಯಕರನ್ನು ಪೊಲೀಸರು ಸೋಮವಾರ ಬಂಧಿಸಿದರು –ಪಿಟಿಐ ಚಿತ್ರ   

ಜೈಪುರ/ನವದೆಹಲಿ: ಕೆಲವು ವಿಚಾರಗಳಿಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದರೆ ವಿಧಾನಸಭೆಯ ಅಧಿವೇಶನ ನಡೆಸಲು ಅನುಮತಿ ನೀಡುವುದಾಗಿ ರಾಜಸ್ಥಾನದ ರಾಜ್ಯಪಾಲ ಕಲ್‌ರಾಜ್‌ ಮಿಶ್ರಾ ಸೋಮವಾರ ಸರ್ಕಾರಕ್ಕೆ ಸೂಚಿಸಿದ್ದಾರೆ.

ಸರ್ಕಾರದ ಮುಂದೆ ಮೂರು ವಿಚಾರಗಳನ್ನು ಇಟ್ಟಿರುವ ಅವರು, ಅವುಗಳಿಗೆ ಸ್ಪಷ್ಟನೆ ನೀಡುವುದರ ಜತೆಗೆ ಹೊಸ ಪ್ರಸ್ತಾವನೆಯನ್ನು ಕಳುಹಿಸುವಂತೆ ಸೂಚಿಸಿದ್ದಾರೆ.

ಅಧಿವೇಶನಕ್ಕೆ ಕನಿಷ್ಠ 21 ದಿನ ಮುಂಚಿತವಾಗಿ ಶಾಸಕರಿಗೆ ನೋಟಿಸ್‌ ನೀಡಬೇಕು. ಅಧಿವೇಶದಲ್ಲಿ ಬಹುಮತ ಸಾಬೀತುಪಡಿಸುವುದಾಗಿ ಸರ್ಕಾರವು ಹೇಳಿಕೆಗಳನ್ನು ನೀಡಿದೆ. ಆದರೆ ಕಾರ್ಯಸೂಚಿಯಲ್ಲಿ ಆ ವಿಚಾರದ ಪ್ರಸ್ತಾಪವಿಲ್ಲ. ಬಹುಮತ ಸಾಬೀತುಪಡಿಸುವ ಉದ್ದೇಶ ಇದ್ದರೆ ಮಾತ್ರ, ಕಿರು ಅವಧಿಯ ನೋಟಿಸ್‌ ನೀಡಿ ಅಧಿವೇಶನ ಏರ್ಪಡಿಸಬಹುದು.

ADVERTISEMENT

ಬಹುಮತ ಸಾಬೀತುಪಡಿಸಲು ಸರ್ಕಾರವು ಮುಂದಾಗುವುದಾದರೆ, ಅದರ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಬೇಕು.

ಕೊರೊನಾ ಸೋಂಕು ಇರುವುದರಿಂದ ವಿಧಾನಸಭೆಯ ಆಸನ ವ್ಯವಸ್ಥೆಯಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಬೇಕು. ಈ ಮೂರು ವಿಚಾರಗಳ ಬಗ್ಗೆ ಸ್ಪಷ್ಟನೆಯ ಜತೆಗೆ ಹೊಸ ಪ್ರಸ್ತಾವನೆಯನ್ನು ಕಳುಹಿಸಿಕೊಡುವಂತೆ ರಾಜ್ಯಪಾಲರು ಸರ್ಕಾರಕ್ಕೆ ಸೂಚನೆ ನೀಡಿದ್ದಾರೆ.

ಅಧಿವೇಶನ ನಡೆಸಲು ಅನುಮತಿ ಕೋರಿ ಹಿಂದೆ ಸಲ್ಲಿಸಿದ್ದ ಪ್ರಸ್ತಾವನೆಯನ್ನುರಾಜ್ಯಪಾಲರು ಕಳೆದ ಶುಕ್ರವಾರ
ತಿರಸ್ಕರಿಸಿದ್ದರು. ಮುಖ್ಯಮಂತ್ರಿಯ ಮುಂದೆ ಆರು ಪ್ರಶ್ನೆಗಳನ್ನಿಟ್ಟು, ಅವುಗಳಿಗೆ ಸ್ಪಷ್ಟನೆ ನೀಡುವಂತೆ ಸೂಚಿಸಿದ್ದರು. ಇದಾದ ಮರುದಿನವೇ ಎಲ್ಲಾ ಸ್ಪಷ್ಟನೆಗಳೊಂದಿಗೆ ಮುಖ್ಯಮಂತ್ರಿ ಹೊಸ ಪ್ರಸ್ತಾವನೆಯನ್ನು ಸಲ್ಲಿಸಿ, ಜುಲೈ 31ರಿಂದ ಅಧಿವೇಶನ ನಡೆಸಲು ಅನುಮತಿ ಕೋರಿದ್ದರು. ಈಗ ಎರಡನೇ ಬಾರಿಗೆ ರಾಜ್ಯಪಾಲರು ಪ್ರಸ್ತಾವನೆಯನ್ನು ಸರ್ಕಾರಕ್ಕೆ ಮರಳಿಸಿದ್ದಾರೆ.

ರಾಷ್ಟ್ರಪತಿಗೆ ಪತ್ರ: ‘ರಾಜ್ಯದಲ್ಲಿ ಉಂಟಾಗಿರುವ ರಾಜಕೀಯ ಸ್ಥಿತಿಯ ಬಗ್ಗೆ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರು ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ. ಅಷ್ಟೇ ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ’ ಎಂದು ಕಾಂಗ್ರೆಸ್‌ ಮುಖಂಡರೊಬ್ಬರು ತಿಳಿಸಿದ್ದಾರೆ.

ಈ ನಡುವೆ, ರಾಜಕೀಯ ಅಸ್ಥಿರತೆ ಆರಂಭವಾದ ದಿನದಿಂದ ರೆಸಾರ್ಟ್‌ ಒಂದರಲ್ಲಿ ಉಳಿದುಕೊಂಡಿರುವ ಕಾಂಗ್ರೆಸ್‌ ಶಾಸಕರನ್ನು ಸೋಮವಾರ ಗೆಹ್ಲೋಟ್‌ ಭೇಟಿಮಾಡಿ ಮಾತುಕತೆ ನಡೆಸಿದ್ದಾರೆ.

ಅರ್ಜಿ ಹಿಂತೆಗೆದುಕೊಂಡ ಸ್ಪೀಕರ್

ರಾಜಸ್ಥಾನ ಹೈಕೋರ್ಟ್‌ ನೀಡಿದ ನಿರ್ದೇಶನದ ಸಿಂಧುತ್ವವನ್ನು ಪ್ರಶ್ನಿಸಿ, ಸುಪ್ರೀಂ ಕೋರ್ಟ್‌ಗೆ ತಾವು ಸಲ್ಲಿಸಿದ್ದ ಅರ್ಜಿಯನ್ನು ರಾಜಸ್ಥಾನ ವಿಧಾನಸಭೆಯ ಸ್ಪೀಕರ್‌ ಪಿ.ಸಿ. ಜೋಶಿ ಅವರು ಸೋಮವಾರ ಹಿಂಪಡೆದಿದ್ದಾರೆ.

ಸ್ಪೀಕರ್‌ ಅವರು ತಮಗೆ ನೀಡಿದ್ದ ನೋಟಿಸ್‌ಅನ್ನು ಪ್ರಶ್ನಿಸಿ, ಕಾಂಗ್ರೆಸ್‌ ಮುಖಂಡ ಸಚಿನ್‌ ಪೈಲಟ್‌ ಹಾಗೂ ಇತರ 18 ಮಂದಿ ಬಂಡಾಯ ಶಾಸಕರು ಹೈಕೋರ್ಟ್‌ ಮೊರೆಹೋಗಿದ್ದರು. ಇದರ ವಿಚಾರಣೆ ನಡೆಸಿದ ಕೋರ್ಟ್‌, ‘ಜುಲೈ 24ಕ್ಕೆ (ಶುಕ್ರವಾರ) ಪ್ರಕರಣಕ್ಕೆ ಸಂಬಂಧಿಸಿ ಆದೇಶ ನೀಡಲಾಗುವುದು. ಅಲ್ಲಿಯವರೆಗೆ ಬಂಡಾಯ ಶಾಸಕರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬಾರದು’ ಎಂದು ಸ್ಪೀಕರ್‌ ಅವರಿಗೆ ನಿರ್ದೇಶನ ನೀಡಿತ್ತು. ಹೈಕೋರ್ಟ್‌ನ ಆದೇಶಕ್ಕೇ ತಡೆಯಾಜ್ಞೆ ನೀಡಬೇಕು ಎಂದು ಸ್ಪೀಕರ್‌ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ತಡೆಯಾಜ್ಞೆ ನೀಡಲು ನಿರಾಕರಿಸಿದ್ದ ಸುಪ್ರೀಂ ಕೋರ್ಟ್‌, ‘ಪ್ರಜಾಪ್ರಭುತ್ವದಲ್ಲಿ ಭಿನ್ನಮತದ ದನಿಯನ್ನು ಅಡಗಿಸಲಾಗದು’ ಎಂದಿತ್ತು.

ಬಂಡಾಯ ಶಾಸಕರಿಗೆ ನೀಡಿರುವ ಅನರ್ಹತೆಯ ನೋಟಿಸ್‌ ವಿಚಾರದಲ್ಲಿ ಯಥಾಸ್ಥಿತಿ ಕಾಪಾಡುವಂತೆ ರಾಜಸ್ಥಾನ ಹೈಕೋರ್ಟ್‌ ಶುಕ್ರವಾರ ನಿರ್ದೇಶನ ನೀಡಿದೆ.

‘ಹೈಕೋರ್ಟ್‌ನ ಶುಕ್ರವಾರದ ಆದೇಶದಿಂದಾಗಿ ಸ್ಪೀಕರ್‌ ಅವರ ಅರ್ಜಿಗೆ ಔಚಿತ್ಯ ಇಲ್ಲದಾಗಿದೆ. ಮುಂದಿನ ಕಾನೂನು ಹೋರಾಟದ ಬಗ್ಗೆ ಚಿಂತನೆ ನಡೆಸಲು ನಾವು ತೀರ್ಮಾನಿಸಿದ್ದು ಅರ್ಜಿಯನ್ನು ಹಿಂತೆಗೆದುಕೊಳ್ಳುತ್ತೇವೆ’ ಎಂದು ಸ್ಪೀಕರ್‌ ಪರವಾಗಿ ಕೋರ್ಟ್‌ಗೆ ಹಾಜರಾಗಿದ್ದ ವಕೀಲ ಕಪಿಲ್‌ ಸಿಬಲ್‌ ಹೇಳಿದರು.

‘ಸ್ಪೀಕರ್‌ ಅವರು ಪ್ರಜಾತಂತ್ರ ಮತ್ತು ಅದರ ಉಳಿವಿಗೆ ಸಂಬಂಧಿಸಿದ ದೊಡ್ಡ ಪ್ರಶ್ನೆಯನ್ನು ಎತ್ತಿದ್ದಾರೆ. ಆ ಕುರಿತು ಸುದೀರ್ಘ ವಿಚಾರಣೆ ನಡೆಸುವುದು ಅಗತ್ಯ’ ಎಂದು ಕೋರ್ಟ್‌ ಹೇಳಿದೆ.

ಕಾಂಗ್ರೆಸ್ ಪ್ರತಿಭಟನೆ

ರಾಜಸ್ಥಾನದ ಬೆಳವಣಿಗೆಗಳನ್ನು ಖಂಡಿಸಿ ಕಾಂಗ್ರೆಸ್‌ ನೇತೃತ್ವದಲ್ಲಿ ಸೋಮವಾರ ದೇಶದಾದ್ಯಂತ ‘ಪ್ರಜಾಪ್ರಭುತ್ವ ಮತ್ತು ಸಂವಿಧಾನ ಉಳಿಸಿ’ ಹೋರಾಟ ಹಮ್ಮಿಕೊಳ್ಳಲಾಗಿತ್ತು. ವಿವಿಧ ರಾಜ್ಯಗಳಲ್ಲಿ ಕಾಂಗ್ರೆಸ್‌ ನಾಯಕರು ರಾಜ್ಯಪಾಲರ ನಿವಾಸದ ಮುಂದೆ ಪ್ರತಿಭಟನೆ ನಡೆಸಿದರು.

ಉತ್ತರಪ್ರದೇಶ, ಗುಜರಾತ್‌ ಹಾಗೂ ದೆಹಲಿಯಲ್ಲಿ ರಾಜ್ಯಪಾಲರ ನಿವಾಸದತ್ತ ತೆರಳುತ್ತಿದ್ದ ಕೆಲವು ಮುಖಂಡರನ್ನು ಬಂಧಿಸಿ ಬಿಡುಗಡೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.