ADVERTISEMENT

SIR | ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿ, ತೊಂದರೆ ನಿವಾರಿಸಿ: ಸುಪ್ರೀಂ ಕೋರ್ಟ್

ಪಿಟಿಐ
Published 4 ಡಿಸೆಂಬರ್ 2025, 14:35 IST
Last Updated 4 ಡಿಸೆಂಬರ್ 2025, 14:35 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣಾ ಕಾರ್ಯಕ್ಕೆ (ಎಸ್‌ಐಆರ್‌) ನೇಮಿಸಲಾಗಿರುವ ಬೂತ್‌ ಮಟ್ಟದ ಅಧಿಕಾರಿಗಳ (ಬಿಎಲ್‌ಒ) ಕಾರ್ಯ ಒತ್ತಡ ಕಡಿಮೆಗೊಳಿಸಲು ಹೆಚ್ಚುವರಿ ಸಿಬ್ಬಂದಿ ನಿಯೋಜಿಸುವುದನ್ನು ಪರಿಗಣಿಸುವಂತೆ ಸುಪ್ರೀಂ ಕೋರ್ಟ್‌ ಗುರುವಾರ ರಾಜ್ಯ ಸರ್ಕಾರಗಳಿಗೆ ನಿರ್ದೇಶಿಸಿದೆ.

ನಟ ವಿಜಯ್‌ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌, ನ್ಯಾಯಮೂರ್ತಿ ಜಾಯ್‌ಮಾಲ್ಯ ಬಾಗ್ಚಿ ಅವರ ಪೀಠ ಈ ಕುರಿತು ಸೂಚಿಸಿತು.

‘ನಿಗದಿತ ಅವಧಿಯಲ್ಲಿ ಮುಗಿಸಬೇಕಾದ ಎಸ್‌ಐಆರ್‌ನಿಂದ ಬಿಎಲ್‌ಒಗಳ ಕೆಲಸದ ಒತ್ತಡ ಹೆಚ್ಚಾಗಿದೆ. ಇದನ್ನು ನಿರ್ವಹಿಸಲಾಗದೆ ಕೆಲ ಬಿಎಲ್‌ಒಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಟಿವಿಕೆ ಅರ್ಜಿಯಲ್ಲಿ ತಿಳಿಸಿದೆ. ಈ ಕರ್ತವ್ಯ ನಿರ್ವಹಿಸಲು ಆಗದ ಸಿಬ್ಬಂದಿ ವಿರುದ್ಧ ಪ್ರಜಾಪ್ರತಿನಿಧಿ ಕಾಯ್ದೆ (ಆರ್‌ಪಿ) ಅಡಿ ಕ್ರಮ ತೆಗೆದುಕೊಳ್ಳದಂತೆ ಚುನಾವಣಾ ಆಯೋಗಕ್ಕೆ ಸೂಚಿಸುವಂತೆ ಅರ್ಜಿಯಲ್ಲಿ ಕೋರಿದೆ.

ADVERTISEMENT

ಟಿವಿಕೆ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಗೋಪಾಲ್‌ ಶಂಕರನಾರಾಯಣನ್‌, ‘ಶಿಕ್ಷಕರು, ಅಂಗನವಾಡಿ ಕಾರ್ಯಕರ್ತರು ಸೇರಿದಂತೆ ವಿವಿಧ ಹಂತದ ಸಿಬ್ಬಂದಿಯನ್ನು ಬಿಎಲ್‌ಒಗಳಾಗಿ ನೇಮಿಸಲಾಗಿದೆ. ಕರ್ತವ್ಯ ನಿರ್ವಹಿಸಲು ವಿಫಲರಾಗುವ ಬಿಎಲ್‌ಒಗಳ ವಿರುದ್ಧ ಆಯೋಗ ಎಫ್‌ಐಆರ್‌ ದಾಖಲಿಸುತ್ತಿದೆ. ಈ ಎಲ್ಲ ಒತ್ತಡಗಳಿಂದಾಗಿ ಕೆಲ ಬಿಎಲ್‌ಒಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ತಿಳಿಸಿದರು.

‘ಕೆಲಸದ ಒತ್ತಡ ಕಡಿಮೆ ಮಾಡಲು ಹೆಚ್ಚುವರಿ ಸಿಬ್ಬಂದಿ ನಿಯೋಜಿಸುವ ನಿಟ್ಟಿನಲ್ಲಿ ರಾಜ್ಯಗಳು ಕ್ರಮವಹಿಸಬಹುದು. ದೈನಂದಿನ ಕರ್ತವ್ಯಗಳ ಜತೆಗೆ ಹೆಚ್ಚುವರಿ ಕೆಲಸದ ನಿರ್ವಹಣೆಯಿಂದ ಸಿಬ್ಬಂದಿಗೆ ತೊಂದರೆಗಳಾಗುತ್ತಿದ್ದರೆ ಸರ್ಕಾರಗಳು ಅದನ್ನು ನಿವಾರಿಸಲು ಗಮನಹರಿಸಬೇಕು’ ಎಂದು ಸಿಜೆಐ ಹೇಳಿದರು. 

ಯಾವುದೇ ಸಿಬ್ಬಂದಿ ಎಸ್‌ಐಆರ್‌ ಕರ್ತವ್ಯದಿಂದ ವಿನಾಯಿತಿ ಪಡೆಯಲು ‘ನಿರ್ದಿಷ್ಟ ಕಾರಣ’ ಹೊಂದಿದ್ದರೆ, ಸಕ್ಷಮ ಅಧಿಕಾರಿ ಅದನ್ನು ಪರಿಶೀಲಿಸಿ ಮನವಿಯನ್ನು ಪರಿಗಣಿಸಬಹುದು. ಆ ಸಿಬ್ಬಂದಿಯ ಬದಲಿಗೆ ಇನ್ನೊಬ್ಬರನ್ನು ಅಲ್ಲಿಗೆ ನಿಯೋಜಿಸಬಹುದು ಎಂದು ಪೀಠ ಹೇಳಿದೆ. 

ಆಯೋಗವು ಸಿಬ್ಬಂದಿ ವಿರುದ್ಧ ಏಕೆ ಎಫ್‌ಐಆರ್‌ಗಳನ್ನು ದಾಖಲಿಸಬೇಕು ಎಂದು ಶಂಕರನಾರಾಯಣ್‌ ಇದೇ ವೇಳೆ ಕೇಳಿದರು. 

ಆಯೋಗದ ಪರ ಹಾಜರಾಗಿದ್ದ ಹಿರಿಯ ವಕೀಲರಾದ ರಾಕೇಶ್‌ ದ್ವಿವೇದಿ ಮತ್ತು ಮಣೀಂದರ್‌ ಸಿಂಗ್‌, ಕರ್ತವ್ಯಗಳನ್ನು ನಿರ್ವಹಿಸಲು ಬಿಎಲ್‌ಒಗಳು ಹಿಂಜರಿಕೆ ತೋರಿದಾಗ ಮಾತ್ರ ಆಯೋಗ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುತ್ತದೆ. ಆದರೆ ಇದಕ್ಕೆ ನಿರ್ದಿಷ್ಟ ರಾಜಕೀಯ ನಿರೂಪಣೆ ಸ್ಥಾಪಿಸಲು ಈ ರೀತಿ ವಾದಿಸಲಾಗುತ್ತಿದೆ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.