ADVERTISEMENT

ಮನೆ ಖರೀದಿದಾರರನ್ನು ಉಳಿಸಿ: ಸುಪ್ರೀಂ ಕೋರ್ಟ್‌

ಅರ್ಥಕ್ಕೆ ನಿಂತ ಮನೆ ನಿರ್ಮಾಣ ಕಾಮಗಾರಿಗಳಿಂದ ಮಧ್ಯಮ ವರ್ಗದ ಜನರಿಗೆ ತೊಂದರೆ

ಪಿಟಿಐ
Published 13 ಸೆಪ್ಟೆಂಬರ್ 2025, 16:14 IST
Last Updated 13 ಸೆಪ್ಟೆಂಬರ್ 2025, 16:14 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ತಮ್ಮ ತಲೆಯ ಮೇಲೊಂದು ಸೂರು ಇರಬೇಕು ಎನ್ನುವುದು ಎಲ್ಲ ಜನರ ಆಸೆ. ಸಂವಿಧಾನದ 21ನೇ ವಿಧಿ (ಆಶ್ರಯದ ಹಕ್ಕು) ಅನ್ವಯ ಇದು ಜನರ ಮೂಲಭೂತ ಹಕ್ಕು ಕೂಡ ಹೌದು. ತಮ್ಮ ಕನಸಿನ ಮನೆ ಖರೀದಿಯಾಗಿ ಜನರು ತಮ್ಮ ಜೀವಮಾನ ಎಲ್ಲ ದುಡಿಮೆಯನ್ನು ಹಾಕಿರುತ್ತಾರೆ. ಈ ಮನೆಗಳು ನಿರ್ಮಾಣವಾಗದೆ ಅರ್ಧಕ್ಕೆ ನಿಂತು ಹೋದರೆ ಹೇಗೆ? ಇದಕ್ಕೆ ಕೇಂದ್ರ ಸರ್ಕಾರವು ಸೂಕ್ರ ಕ್ರಮ ಕೈಗೊಳ್ಳಬೇಕು. ಇದಕ್ಕಾಗಿ ಪುನಃಶ್ಚೇತನ ನಿಧಿಯೊಂದನ್ನು ಸ್ಥಾಪಿಸಿ...

– ಹೀಗೆ ಹೇಳಿದ್ದು ಸುಪ್ರೀಂ ಕೋರ್ಟ್‌. ‘ಹಣ ನೀಡಿದರೂ ಮನೆ ನಿರ್ಮಾಣ ಪೂರ್ಣಗೊಳ್ಳದಿದ್ದಾಗ ಜನರಲ್ಲಿ ಆತಂಕ ಮನೆ ಮಾಡುತ್ತದೆ. ಅದರಿಂದ ಅವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಅವರ ಕಾರ್ಯಕ್ಷಮತೆ ತಗ್ಗುತ್ತದೆ’ ಎಂದು ಕೋರ್ಟ್‌ ಹೇಳಿದೆ.

ಹಣ ನೀಡಿದ ಬಳಿಕವೂ ಮನೆ ನಿರ್ಮಾಣ ಮಾಡಿ ಕೊಡದ ಕಂಪನಿಗಳು ವಿರುದ್ಧ ಮಾನಸಿ ಬ್ರಾರ್‌ ಮತ್ತು ಸುನಿತಾ ಅಗರ್ವಾಲ್‌ ಎಂಬುವರು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು. ಈ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ ಮತ್ತು ಆರ್‌. ಮಹದೇವನ್‌ ಅವರಿದ್ದ ಪೀಠವು ಶುಕ್ರವಾರ (ಸೆ.12) ತೀರ್ಪು ನೀಡಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಹಲವು ನಿರ್ದೇಶನಗಳನ್ನೂ ನೀಡಿದೆ.

ADVERTISEMENT

‘ರಾಷ್ಟ್ರೀಯ ಆಸ್ತಿ ಮರುನಿರ್ಮಾಣ ಕಂಪನಿ ಲಿಮಿಟೆಡ್‌ (ಎನ್‌ಎಆರ್‌ಸಿಎಲ್‌) ರೀತಿಯಲ್ಲಿಯೇ ಮತ್ತೊಂದು ಸಂಸ್ಥೆಯೊಂದನ್ನು ರೂಪಿಸಿ. ಈ ಸಂಸ್ಥೆಗೆ ರಿಯಲ್‌ ಎಸ್ಟೇಟ್‌ ಅಥವಾ ನಿರ್ಮಾಣದಲ್ಲಿ ತೊಡಗಿಕೊಂಡಿರುವ ಸರ್ಕಾರಿ ಸಂಸ್ಥೆಗಳು ಸಹಕಾರ ನೀಡಲಿ. ಖಾಸಗಿ–ಸರ್ಕಾರಿ ಸಹಭಾಗಿತ್ವದಲ್ಲಿ ಈ ಸಂಸ್ಥೆ ನಡೆಯಲಿ. ದಿವಾಳಿ ಸಂಹಿತೆ 2026ರ ಅಡಿಯಲ್ಲಿ ಇದು ಕೆಲಸ ಮಾಡಲಿ. ಅರ್ಧಕ್ಕೆ ನಿಂತಿರುವ ಕಾಮಗಾರಿಗಳನ್ನು ಗುರುತಿಸುವುದು, ಅಂಥ ಕಾಮಗಾರಿಗಳನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವುದು ಈ ಸಂಸ್ಥೆಯ ಕಾರ್ಯವಾಗಲಿ’ ಎಂದು ಪೀಠ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.