ADVERTISEMENT

ಭಾರತ ಬಲಾಢ್ಯ, ಒಗ್ಗಟ್ಟಾಗಿರುವುದನ್ನು ಸಂವಿಧಾನ ಖಾತ್ರಿಪಡಿಸಿದೆ: ಸಿಜೆಐ ಗವಾಯಿ

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಭೂಷಣ್ ಗವಾಯಿ ಅಭಿಮತ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2025, 13:19 IST
Last Updated 12 ಅಕ್ಟೋಬರ್ 2025, 13:19 IST
ಬಿ.ಆರ್. ಗವಾಯಿ
ಬಿ.ಆರ್. ಗವಾಯಿ   

ರತ್ನಗಿರಿ: ‘ನೆರೆಹೊರೆಯ ರಾಷ್ಟ್ರಗಳು ಅಶಾಂತಿ ಹಾಗೂ ಪ್ರಕ್ಷುಬ್ಧತೆಯನ್ನು ಎದುರಿಸುತ್ತಿರುವಾಗ, ದೇಶವು ಬಲಾಢ್ಯ ಮತ್ತು ಒಗ್ಗಟ್ಟಾಗಿರುವುದನ್ನು ಸಂವಿಧಾನ ಖಚಿತಪಡಿಸಿದೆ’ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಭೂಷಣ್‌ ಗವಾಯಿ ಅವರು ಭಾನುವಾರ ಹೇಳಿದರು.

ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಮಂಡಣಗಡ ತಾಲ್ಲೂಕಿನಲ್ಲಿ ನ್ಯಾಯಾಲಯದ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಸಿಜೆಐ, ‘ನಾವು ಆಂತರಿಕ ತುರ್ತು ಪರಿಸ್ಥಿತಿಯನ್ನು ಎದುರಿಸಿದರೂ ಬಲಿಷ್ಠವಾಗಿದ್ದೇವೆ ಹಾಗೂ ಒಂದಾಗಿದ್ದೇವೆ’ ಎಂದರು.

‘ಯುದ್ಧ ಮತ್ತು ಶಾಂತಿಯಲ್ಲಿ ದೇಶವು ಒಗ್ಗಟ್ಟಿನಿಂದ ಹಾಗೂ ಅಭಿವೃದ್ಧಿ ಪಥದಲ್ಲೇ ಉಳಿದಿರುವುದಕ್ಕೆ ಬಾಬಾಸಾಹೇಬ್ ಅಂಬೇಡ್ಕರ್‌ ಅವರು ನೀಡಿದ ಸಂವಿಧಾನವೇ ಕಾರಣ’ ಎಂದು ಹೇಳಿದರು.

ADVERTISEMENT

‘ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಈಚೆಗೆ ನೇಪಾಳದಲ್ಲಿ ನಡೆದ ನಾಗರಿಕ ಅಶಾಂತಿಯು ಸರ್ಕಾರಗಳನ್ನೇ ಬದಲಿಸಿದೆ. ಗಲಭೆಯಿಂದ ಭಾರಿ ಹಾನಿಯಾಗಿದೆ’ ಎಂದರು.

‘ಕಳೆದ 22 ವರ್ಷಗಳಲ್ಲಿ ನಾನು ನ್ಯಾಯಾಧೀಶನಾಗಿ, ನ್ಯಾಯಮೂರ್ತಿಯಾಗಿ ನ್ಯಾಯದಾನ ವ್ಯವಸ್ಥೆಯ ವಿಕೇಂದ್ರೀಕರಣದ ಪರವಾಗಿ ನಿಂತಿದ್ದೇನೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ಹಲವು ಮೂಲಸೌಕರ್ಯ ಯೋಜನೆಗಳು ಪೂರ್ಣಗೊಳ್ಳುವುದನ್ನು ಖಾತ್ರಿಪಡಿಸಿದ್ದೇನೆ’ ಎಂದು ತಿಳಿಸಿದರು.

‘ಕೊಲ್ಹಾಪುರ ಸರ್ಕ್ಯೂಟ್‌ ಬೆಂಚ್‌ (ಬಾಂಬೆ ಹೈಕೋರ್ಟ್‌) ಮತ್ತು ಮಂಡಣಗಡ ನ್ಯಾಯಾಲಯದ ಕಟ್ಟಡವು ಎರಡು ವರ್ಷದಲ್ಲಿ ಪೂರ್ಣಗೊಂಡಿದೆ. ನಾಸಿಕ್, ನಾಗ್ಪುರ, ಕೊಲ್ಹಾಪುರ, ದರ್ಯಾಪುರದಲ್ಲಿ ಈಚೆಗಷ್ಟೇ ನ್ಯಾಯಾಲಯಗಳ ನೂತನ ಸಂಕೀರ್ಣ ಕಾರ್ಯಾರಂಭ ಮಾಡಿವೆ. ಇವುಗಳ ಗುಣಮಟ್ಟದ ಬಗ್ಗೆ ತೃಪ್ತಿಯಿದೆ’ ಎಂದರು.

‘ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅವರ ಅಂಬಾವಡೆ ಗ್ರಾಮವಿರುವ ಪ್ರದೇಶಕ್ಕೆ ಬಂದಿರುವುದು ಸಂತಸ ತಂದಿದ್ದು, ಈ ನೂತನ ನ್ಯಾಯಾಲಯಗಳು ಅಂಬೇಡ್ಕರ್‌ ಅವರ ಕನಸಿನಂತೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತ್ವರಿತವಾಗಿ ನ್ಯಾಯ ಒದಗಿಸಲಿವೆ’ ಎಂದು ಹೇಳಿದರು.

ಅಭಿವೃದ್ಧಿ ಪಥದಲ್ಲೇ ಉಳಿದಿರುವ ಭಾರತ ತ್ವರಿತ ನ್ಯಾಯಕ್ಕಾಗಿ ಹೊಸ ನ್ಯಾಯಾಲಯಗಳು 22 ವರ್ಷದಿಂದಲೂ ವಿಕೇಂದ್ರೀಕರಣದ ಪರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.