ರಾಕೇಶ್ ಕಿಶೋರ್
–ಎಎನ್‌ಐ ಟ್ವಿಟರ್ ಚಿತ್ರ
ನವದೆಹಲಿ: ‘ಸನಾತನ ಧರ್ಮದ ಮೇಲಿನ ಅವಮಾನವನ್ನು ಹಿಂದೂಸ್ತಾನವು ಸಹಿಸುವುದಿಲ್ಲ. ಹಾಗೆಯೇ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ್ದ ಘಟನೆ ಬಗ್ಗೆ ನನಗೆ ಯಾವುದೇ ವಿಷಾದವಿಲ್ಲ’ ಎಂದು 71 ವರ್ಷದ ವಕೀಲ ರಾಕೇಶ್ ಕಿಶೋರ್ ಹೇಳಿದ್ದಾರೆ.
ನ್ಯಾಯಾಲಯದ ಸಭಾಂಗಣದಲ್ಲಿ (ಕೋರ್ಟ್ ನಂ.1) ಸೋಮವಾರ ಗವಾಯಿ ಅವರ ಮೇಲೆ ರಾಕೇಶ್ ಕಿಶೋರ್ ಶೂ ಎಸೆಯಲು ಯತ್ನಿಸಿದ್ದರು. ಘಟನೆ ಸಂಬಂಧ ಸುದ್ದಿಸಂಸ್ಥೆ ‘ಎಎನ್‌ಐ’ಗೆ ನೀಡಿದ ಸಂದರ್ಶನದಲ್ಲಿ ಅವರು ಮಾತನಾಡಿದ್ದು, ‘ನಾನು ಹೆದರುವುದಿಲ್ಲ. ಘಟನೆ ಬಗ್ಗೆ ವಿಷಾದವನ್ನು ವ್ಯಕ್ತಪಡಿಸುವುದಿಲ್ಲ’ ಎಂದಿದ್ದಾರೆ.
‘ಧಾರ್ಮಿಕ ವಿಚಾರಗಳಿಗೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಹಲವು ಆದೇಶಗಳನ್ನು ನೀಡಿದೆ. ಸನಾತನ ಧರ್ಮ ಕುರಿತಾದ ಸಿಜೆಐ ಅವರ ಹೇಳಿಕೆಯಿಂದ ನನಗೆ ಬೇಸರವಾಗಿತ್ತು. ನ್ಯಾಯಾಧೀಶರು ಅರ್ಜಿದಾರರಿಗೆ ಪರಿಹಾರ ಒದಗಿಸದಿದ್ದರೂ ಪರವಾಗಿಲ್ಲ. ಆದರೆ, ಅಪಹಾಸ್ಯ ಮಾಡಬಾರದು. ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ್ದ ಸಂದರ್ಭದಲ್ಲಿ ನಾನು ಮದ್ಯಪಾನ ಮಾಡಿರಲಿಲ್ಲ’ ಎಂದೂ ಹೇಳಿದ್ದಾರೆ.
ಯುನೆಸ್ಕೊದ ವಿಶ್ವ ಪಾರಂಪರಿಕ ಪಟ್ಟಿಯಲ್ಲಿರುವ ಮಧ್ಯ ಪ್ರದೇಶದ ಖಜುರಾಹೋದ ಜಾವರಿ ದೇವಾಲಯದಲ್ಲಿನ 7 ಅಡಿ ಎತ್ತರ ವಿಷ್ಣು ಮೂರ್ತಿಯ ತಲೆಯ ಭಾಗವು ನಾಶವಾಗಿತ್ತು. ಈ ಮೂರ್ತಿಯನ್ನು ಮರುನಿರ್ಮಿಸಿ, ದೇವಾಲಯದಲ್ಲಿ ಮರುಸ್ಥಾಪಿಸಬೇಕು ಎಂದು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.
ಸೆಪ್ಟೆಂಬರ್ 16ರಂದು ಅರ್ಜಿ ವಿಚಾರಣೆ ನಡೆಸಿದ್ದ ಗವಾಯಿ ಅವರು, ‘ಇದೊಂದು ಪ್ರಚಾರ ಹಿತಾಸಕ್ತಿ ಮೊಕದ್ದಮೆ... ಏನಾದರೂ ಮಾಡುವಂತೆ ಹೋಗಿ, ನಿಮ್ಮ ದೇವರಲ್ಲಿಯೇ ಕೇಳಿಕೊಳ್ಳಿ. ನೀವು ವಿಷ್ಣುವಿನ ಪರಮ ಭಕ್ತ ಎಂದು ಹೇಳಿಕೊಂಡಿದ್ದೀರಿ. ಆದ್ದರಿಂದ ನೀವೇ ಹೋಗಿ ದೇವರಲ್ಲಿ ಪ್ರಾರ್ಥಿಸಿ. ಇದು ಪುರಾತತ್ವ ಇಲಾಖೆಗೆ ಸೇರಿದ ಜಾಗ. ಇದಕ್ಕೆ ಇಲಾಖೆ ಅನುಮತಿ ನೀಡಬೇಕು’ ಎಂದು ಹೇಳಿದ್ದರು.
ಗವಾಯಿ ಅವರ ಹೇಳಿಕೆಯು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿ, ವಿವಾದದ ಸ್ವರೂಪವನ್ನು ಪಡೆದುಕೊಂಡಿತ್ತು. ಜಾಲತಾಣಗಳ ಆಕ್ರೋಶಕ್ಕೆ ಪ್ರತಿಕ್ರಿಯಿಸಿದ್ದ ಗವಾಯಿ ಅವರು, ‘ನಾನು ಎಲ್ಲ ಧರ್ಮಗಳನ್ನೂ ಗೌರವಿಸುತ್ತೇನೆ. ಇವೆಲ್ಲವೂ ಸಾಮಾಜಿಕ ಜಾಲತಾಣಗಳ ಸೃಷ್ಟಿ’ ಎಂದಿದ್ದರು. ‘ಯಾವುದೇ ಹೇಳಿಕೆಯನ್ನು ಅತಿರಂಜಿತವಾಗಿ ಬಿಂಬಿಸಿ ಜಾಲ ತಾಣಗಳಲ್ಲಿ ಹಂಚಿಕೊಳ್ಳಲಾಗುತ್ತದೆ’ ಎಂದು ತುಷಾರ್ ಮೆಹ್ತಾ ಹೇಳಿದ್ದರು.
‘ಸಿಜೆಐ ನ್ಯಾಯಾಲಯದಲ್ಲಿ ಪಿಐಎಲ್ ಸಲ್ಲಿಸಲಾಯಿತು. ಸಿಜೆಐ ಅದನ್ನು ಅಪಹಾಸ್ಯ ಮಾಡಿ ಹೇಳಿದರು - ಹೋಗಿ ವಿಗ್ರಹವನ್ನು ಪ್ರಾರ್ಥಿಸಿ ಮತ್ತು ಅದರ ಸ್ವಂತ ತಲೆಯನ್ನು ಪುನಃಸ್ಥಾಪಿಸಲು ಹೇಳಿ... ನಮ್ಮ ಸನಾತನ ಧರ್ಮಕ್ಕೆ ಸಂಬಂಧಿಸಿದ ವಿಷಯ ಬಂದಾಗ, ಸುಪ್ರೀಂ ಕೋರ್ಟ್ ಅಂತಹ ಆದೇಶಗಳನ್ನು ನೀಡುತ್ತದೆ. ಅರ್ಜಿದಾರರಿಗೆ ಪರಿಹಾರ ನೀಡಬೇಡಿ, ಆದರೆ ಅವರನ್ನು ಅಪಹಾಸ್ಯ ಮಾಡಬೇಡಿ... ನನಗೆ ನೋವಾಯಿತು... ನಾನು ಕುಡಿದಿರಲಿಲ್ಲ; ಇದು ಅವರ ಕ್ರಮಕ್ಕೆ ನನ್ನ ಪ್ರತಿಕ್ರಿಯೆ..." ಅವರು ಮತ್ತಷ್ಟು ಹೇಳಿದರು.
ಖಜುರಾಹೊ ದೇವಾಲಯ ಸಂಕೀರ್ಣದ ಭಾಗವಾಗಿರುವ ಮಧ್ಯಪ್ರದೇಶದ ಜವರಿ ದೇವಾಲಯದಲ್ಲಿ ವಿಷ್ಣು ವಿಗ್ರಹ ಪುನಃಸ್ಥಾಪನೆಯ ಕುರಿತು ಸಿಜೆಐ ಅವರ ಅಭಿಪ್ರಾಯಗಳಿಗೆ ಪ್ರತಿಕ್ರಿಯೆಯಾಗಿ ಅವರ ಆಕ್ರೋಶ ಬಂದಿತು ಎಂದು ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.