ADVERTISEMENT

ಶೂ ಎಸೆತ: ನ್ಯಾಯಾಂಗ ನಿಂದನೆ ನೋಟಿಸ್ ಜಾರಿಗೆ ಒಲವು ವ್ಯಕ್ತಪಡಿಸದ ಸುಪ್ರೀಂ ಕೋರ್ಟ್

ಸಿಜೆಐ ಬಿ.ಆರ್‌.ಗವಾಯಿ ಮೇಲೆ ಶೂ ಎಸೆತ ಪ್ರಕರಣ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2025, 15:34 IST
Last Updated 27 ಅಕ್ಟೋಬರ್ 2025, 15:34 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಬಿ.ಆರ್‌.ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ ಹಿರಿಯ ವಕೀಲ ರಾಕೇಶ್‌ ಕಿಶೋರ್‌ ಅವರಿಗೆ ನ್ಯಾಯಾಂಗ ನಿಂದನೆ ನೋಟಿಸ್‌ ಜಾರಿ ಮಾಡಲು ಸುಪ್ರೀಂಕೋರ್ಟ್‌ ಒಲವು ವ್ಯಕ್ತಪಡಿಸಿಲ್ಲ. ಈ ವಿಚಾರದಲ್ಲಿ ಸಿಜೆಐ ಅವರೇ ಮುಂದುವರಿಸಲು ನಿರಾಕರಿಸಿದ್ದನ್ನು ಉಲ್ಲೇಖಿಸಿದೆ.

‘ನ್ಯಾಯಾಲಯದಲ್ಲಿ ಘೋಷಣೆ ಹಾಕುವುದು ಮತ್ತು ಶೂ ಎಸೆಯುವುದು ಸ್ಪಷ್ಟವಾಗಿ ನ್ಯಾಯಾಂಗದ ನಿಂದನೆಯ ಪ್ರಕರಣಗಳಾಗಿವೆ. ಆದರೆ, ಕ್ರಮಕೈಗೊಳ್ಳುವುದು ನ್ಯಾಯಮೂರ್ತಿ ಅವರ ವಿವೇಚನೆಗೆ ಸಹ ಸಂಬಂಧಿಸಿದ್ದಾಗಿದೆ. ನ್ಯಾಯಮೂರ್ತಿ ಅವರು ಈ ವಿಚಾರದಲ್ಲಿ ಕಾನೂನಿನ ಅಡಿಯಲ್ಲಿ ಮುಂದುವರಿಯಬೇಕೆ ಅಥವಾ ಬೇಡವೇ ಎನ್ನುವ ಬಗ್ಗೆ ನಿರ್ಧಾರ ಕೈಗೊಳ್ಳುತ್ತಾರೆ’ ಎಂದು ನ್ಯಾಯಮೂರ್ತಿಗಳಾದ ಸೂರ್ಯಕಾಂತ ಮತ್ತು ಜಾಯ್‌ಮಾಲ್ಯ ಬಾಗ್ಚಿ ಅವರಿದ್ದ ಪೀಠವು ತಿಳಿಸಿದೆ.

‘ಇಂತಹ ಘಟನೆಗಳು ನಡೆಯದಂತೆ ತಡೆಗಟ್ಟುವ ಕ್ರಮಗಳ ಕುರಿತು ಪರಿಶೀಲನೆ ನಡೆಸಲಾಗುವುದು’ ನ್ಯಾಯಪೀಠವು ತಿಳಿಸಿದೆ.

ADVERTISEMENT

ಅಕ್ಟೋಬರ್‌ 6ರಂದು ಶೂ ಎಸೆದ ವಕೀಲ ರಾಕೇಶ್‌ ಕಿಶೋರ್‌ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಬೇಕು ಎಂದು ಕೋರಿ ಸುಪ್ರೀಂ ಕೋರ್ಟ್‌ನ ವಕೀಲ ಸಂಘ (ಎಸ್‌ಸಿಬಿಎ) ಅರ್ಜಿ ಸಲ್ಲಿಸಿತ್ತು.

‘ಶೂ ಎಸೆದ ವಕೀಲರಿಗೆ ನ್ಯಾಯಾಂಗ ನಿಂದನೆ ನೋಟಿಸ್‌ ಜಾರಿ ಮಾಡಿದರೆ, ಅವರಿಗೆ ಅನಗತ್ಯ ಪ್ರಾಮುಖ್ಯತೆ ನೀಡಿದಂತಾಗುತ್ತದೆ. ಪ್ರಕರಣದ ಅವಧಿಯೂ ಹೆಚ್ಚಾಗುತ್ತದೆ. ಅದರ ಪಾಡಿಗೆ ಸಹಜವಾಗಿ ಸಾಯಲು ಬಿಡಬೇಕು’ ಎಂದು ನ್ಯಾಯಪೀಠ ತಿಳಿಸಿದೆ.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.