
ನವದೆಹಲಿ: ರೆಜಿಮೆಂಟಲ್ ಪರೇಡ್‌ನ ಭಾಗವಾಗಿ ನಡೆದ ಪೂಜೆಗೆ ಹಾಜರಾಗದ ಭಾರತೀಯ ಸೇನೆಯ ಕ್ರೈಸ್ತ ಸಮುದಾಯದ ಅಧಿಕಾರಿಯನ್ನು ಹುದ್ದೆಯಿಂದ ವಜಾಗೊಳಿಸಿದ್ದ ಆದೇಶ ರದ್ದುಗೊಳಿಸಲು ನಿರಾಕರಿಸಿದ ದೆಹಲಿ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿರುವ ಮೇಲ್ಮನವಿಯನ್ನು ಪುರಸ್ಕರಿಸಲು ಸುಪ್ರೀಂ ಕೋರ್ಟ್ ಮಂಗಳವಾರ ನಿರಾಕರಿಸಿದೆ.
‘ಸಂವಿಧಾನದ 25ನೇ ವಿಧಿ (ಧಾರ್ಮಿಕ ಸ್ವಾತಂತ್ರ್ಯ) ಉಲ್ಲಂಘನೆಯ ವಿಷಯ ಬಂದಾಗ ಧಾರ್ಮಿಕತೆಯ ಅಗತ್ಯ ಅಂಶಗಳನ್ನು ಪರಿಗಣಿಸಬೇಕು, ಕೇವಲ ಧಾರ್ಮಿಕ ಭಾವನೆ ಕುರಿತ ಅಂಶವನ್ನಲ್ಲ’ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜಾಯ್‌ಮಾಲ್ಯ ಬಾಗ್ಚಿ ಅವರ ಪೀಠ ಹೇಳಿದೆ.
‘ಈ ಅಧಿಕಾರಿಯು ತಾನು ಮುನ್ನಡೆಸಿದ್ದ ಬಹುಸಂಖ್ಯಾತರ ನಂಬಿಕೆಗಳನ್ನು ಗೌರವಿಸಬೇಕಿತ್ತು’ ಎಂದೂ ಹೇಳಿದೆ.
‘ತಮ್ಮ ಪಡೆಗಳು ಪೂಜೆ ಸಲ್ಲಿಸುತ್ತಿದ್ದ ಗರ್ಭಗುಡಿಗೆ ಪ್ರವೇಶಿಸದ ಒಂದು ಉಲ್ಲಂಘನೆಗಾಗಿ ಅಧಿಕಾರಿಯನ್ನು ವಜಾಗೊಳಿಸಲಾಗಿದೆ’ ಎಂದು ಅರ್ಜಿದಾರ ಸ್ಯಾಮುಯೆಲ್ ಕಮಲೇಶನ್ ಅವರ ಪರ ವಕೀಲ ಗೋಪಾಲ್ ಶಂಕರನಾರಾಯಣನ್ ವಾದಿಸಿದರು.
‘ರೆಜಿಮೆಂಟ್‌ಗಳ ಪ್ರಕಾರ, ಸರ್ವ ಧರ್ಮಗಳ ಸ್ಥಳವೆಂದು ಕರೆಯುವ ಒಂದು ಸಭಾಂಗಣವಿದೆ. ಅಲ್ಲಿ ವಿವಿಧ ಧಾರ್ಮಿಕ ನಂಬಿಕೆಗಳ ಚಿಹ್ನೆಗಳನ್ನು ಇಡಲಾಗುತ್ತದೆ. ಅವರು ಆ ಸ್ಥಳಗಳಿಗೆ ಪ್ರವೇಶಿಸಿದ್ದಾರೆ. ಪಂಜಾಬ್‌ನ ಮಾಮುನ್‌ನಲ್ಲಿರುವ ಈ ಒಂದು ಸ್ಥಳದಲ್ಲಿ ರೆಜಿಮೆಂಟ್‌ಅನ್ನು ನಿಯೋಜಿಸಲಾಗಿತ್ತು. ಅಲ್ಲಿ ಸರ್ವ ಧರ್ಮಗಳ ಸ್ಥಳ ಇರಲಿಲ್ಲ. ಅವರಿಗೆ ಗುರುದ್ವಾರ ಮತ್ತು ದೇವಾಲಯವಿತ್ತು. ಬೇರೇನೂ ಇರಲಿಲ್ಲ. ಗರ್ಭಗುಡಿಯ ಹೊರಗೆ ಅವರು ನಿಂತಿರುವ ಛಾಯಾಚಿತ್ರಗಳಿವೆ’ ಎಂದು ವಾದಿಸಿದರು.
‘ಅರ್ಜಿದಾರರು ಗರ್ಭಗುಡಿ ಪ್ರವೇಶಿಸುವುದು ಅವರ ಸ್ವಂತ ನಂಬಿಕೆಯ ಉಲ್ಲಂಘನೆಯಾಗಿದ್ದು, ಅವರ ತಂಡದ ಯಾವುದೇ ಸೈನಿಕರಿಗೆ ಸಮಸ್ಯೆ ಇರಲಿಲ್ಲ. ಆದರೆ, ಅವರ ಮೇಲಧಿಕಾರಿಗೆ ಇದರಲ್ಲಿ ಸಮಸ್ಯೆ ಇತ್ತು’ ಎಂದು ವಕೀಲರು ಹೇಳಿದರು.
‘ಇದು ಸೇನಾ ಅಧಿಕಾರಿಯ ಅತ್ಯಂತ ಘೋರವಾದ ಅಶಿಸ್ತನ್ನು ಪ್ರದರ್ಶಿಸುತ್ತದೆ’ ಎಂದು ಪೀಠ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.