ಸುಪ್ರೀಂ ಕೋರ್ಟ್
ನವದೆಹಲಿ: ನಗದು ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ತುರ್ತು ವಿಚಾರಣೆಗೆ ಪಟ್ಟಿ ಮಾಡಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.
ವಕೀಲ ಮ್ಯಾಥ್ಯೂಸ್ ನೆಡುಂಬಾರ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಇದು ತಮ್ಮ ಮೂರನೇ ಅರ್ಜಿಯಾಗಿದ್ದು, ಅದನ್ನು ತುರ್ತಾಗಿ ವಿಚಾರಣೆಗೆ ಪಟ್ಟಿ ಮಾಡಬೇಕೆಂದು ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಅವರನ್ನೊಳಗೊಂಡ ಪೀಠವನ್ನು ಒತ್ತಾಯಿಸಿದರು.
‘ಈ ಆರ್ಜಿಯನ್ನು ಈಗಲೇ ವಜಾಗೊಳಿಸಲು ನೀವು ಬಯಸುತ್ತೀರಾ’ ಎಂದು ಪ್ರಶ್ನಿಸಿದ ಸಿಜೆಐ, ಸೂಕ್ತ ಸಮಯದಲ್ಲಿ ವಿಚಾರಣೆಗೆ ಪಟ್ಟಿ ಮಾಡಲಾಗುವುದು ಎಂದು ಹೇಳಿದರು.
‘ಅರ್ಜಿಯನ್ನು ವಜಾಗೊಳಿಸುವುದು ಅಸಾಧ್ಯ. ಈ ಪ್ರಕರಣದ ಎಫ್‌ಐಆರ್ ದಾಖಲಿಸಬೇಕಾಗಿದೆ. ಈಗ ವರ್ಮಾ ಕೂಡಾ ಅದನ್ನೇ ಕೇಳುತ್ತಿರುವಂತೆ ತೋರುತ್ತಿದೆ. ಎಫ್‌ಐಆರ್ ದಾಖಲಿಸಿ ತನಿಖೆ ನಡೆಯಬೇಕು’ ಎಂದು ವಕೀಲರು ತಿಳಿಸಿದರು.
ವಕೀಲರು ಹೈಕೋರ್ಟ್ ನ್ಯಾಯಮೂರ್ತಿಯನ್ನು ‘ವರ್ಮಾ’ ಎಂದಷ್ಟೇ ಸಂಬೋಧಿಸಿರುವುದಕ್ಕೆ ಪೀಠ ತೀವ್ರ ಆಕ್ಷೇಪ ವ್ಯಕ್ತಪಡಿಸಿತು.
‘ಅವರು (ವರ್ಮಾ) ನಿಮ್ಮ ಸ್ನೇಹಿತರೇ? ವರ್ಮಾ ಅವರು ಇನ್ನೂ ನ್ಯಾಯಮೂರ್ತಿ ಆಗಿದ್ದಾರೆ. ನೀವು ಅವರನ್ನು ಯಾವ ರೀತಿ ಸಂಬೋಧಿಸುತ್ತೀರಿ? ಶಿಷ್ಟಾಚಾರ ಪಾಲಿಸಿರಿ’ ಎಂದು ಸಿಜೆಐ ಹೇಳಿದರು.
‘ನ್ಯಾಯಮೂರ್ತಿ ಎಂಬ ಗೌರವದ ಸ್ಥಾನ ಅವರಿಗೆ ಅನ್ವಯಿಸಬಹುದು ಎಂದು ನಾನು ಭಾವಿಸುವುದಿಲ್ಲ. ಅರ್ಜಿಯನ್ನು ವಿಚಾರಣೆಗೆ ಪಟ್ಟಿ ಮಾಡಬೇಕು’ ಎಂದು ವಕೀಲರು ಒತ್ತಾಯಿಸಿದರು. ‘ದಯವಿಟ್ಟು ನ್ಯಾಯಾಲಯಕ್ಕೆ ಅಪ್ಪಣೆ ಮಾಡಬೇಡಿ’ ಎಂದು ಸಿಜೆಐ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.