ADVERTISEMENT

ಮೂರು ವರ್ಷ ಕಳೆದರೂ ನಡೆಯದ ವಿಚಾರಣೆ: ಮೆಹಬೂಬ ಮುಫ್ತಿ ಬೇಸರ

370ನೇ ವಿಧಿ ರದ್ದು; ವಿಚಾರಣೆ ವಿಳಂಬಕ್ಕೆ ಪಿಡಿಪಿ ಮುಖ್ಯಸ್ಥೆ ಮೆಹಬೂಬ ಮುಫ್ತಿ ಬೇಸರ

​ಪ್ರಜಾವಾಣಿ ವಾರ್ತೆ
Published 9 ಮೇ 2022, 18:51 IST
Last Updated 9 ಮೇ 2022, 18:51 IST
ಮೆಹಬೂಬ ಮುಫ್ತಿ
ಮೆಹಬೂಬ ಮುಫ್ತಿ   

ಶ್ರೀನಗರ: ‘ಜಮ್ಮು–ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿದ ಸರ್ಕಾರದ ಕ್ರಮ ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ಮೂರು ವರ್ಷಗಳಿಂದ ನಡೆಯದಿರುವುದು ನಿರಾಶೆ ತಂದಿದೆ’ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಬೇಸರ ವ್ಯಕ್ತಪಡಿಸಿದರು.

ಕುಪ್ವಾರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜಮ್ಮು–ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದಂತಹ ಸೂಕ್ಷ್ಮ ವಿಚಾರಗಳನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುಪ್ರೀಂಕೋರ್ಟ್‌ ಮೂರು ವರ್ಷಗಳಷ್ಟು ದೀರ್ಘ ಸಮಯ ತೆಗೆದುಕೊಂಡಿದ್ದು ನಮಗೆ ಬೇಸರ ತಂದಿದೆ. ಆದರೂ ಸುಪ್ರೀಂಕೋರ್ಟ್‌ ಜಮ್ಮು–ಕಾಶ್ಮೀರಕ್ಕೆ ನ್ಯಾಯ ಒದಗಿಸಲಿದೆ. ವಿಶೇಷ ಸ್ಥಾನಮಾನವನ್ನು ಮರುಸ್ಥಾಪಿಸುವ ವಿಶ್ವಾಸವಿದೆ’ ಎಂದು ಅವರು ಹೇಳಿದರು.

‘ದೆಹಲಿಯ ಜಹಂಗೀರ್‌ಪುರಿ ಪ್ರದೇಶದಲ್ಲಿ ಸುಪ್ರೀಂಕೋರ್ಟ್‌ ತೀರ್ಪನ್ನು ಉಲ್ಲಂಘಿಸಿದ ಅಧಿಕಾರಿಗಳ ವಿರುದ್ಧ ನ್ಯಾಯಾಲಯವು ಕ್ರಮ ಕೈಗೊಳ್ಳದಿರುವುದು ಒಂದು ವರ್ಗದ ಜನರ ಆತಂಕಕ್ಕೆ ಕಾರಣವಾಗಿದೆ’ ಎಂದು ಹೇಳಿದರು.

ADVERTISEMENT

‘ಜಹಾಂಗೀರ್‌ಪುರಿಯಲ್ಲಿ ಸುಪ್ರೀಂಕೋರ್ಟ್‌ ಆದೇಶದ ನಡುವೆಯೂ ತೆರವು ಕಾರ್ಯಾಚರಣೆ ಮುಂದುವರೆದಿತ್ತು. ಇದು ನ್ಯಾಯಾಂಗ ನಿಂದನೆ ಎಂಬುದು ನನ್ನ ಭಾವನೆ. ಆದರೆ ಈ ವಿಚಾರವಾಗಿ ಸುಪ್ರೀಂಕೋರ್ಟ್‌ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ನ್ಯಾಯಾಲಯಕ್ಕೆ ಅಗೌರವ ತೋರಿದ ಹಾಗೂ ನ್ಯಾಯಾಲಯದ ಆದೇಶಗಳನ್ನು ನಿರಾಕರಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕಿತ್ತು. ಹಾಗಾಗಿ ನಮಗೆ ಆತಂಕಗಳಿವೆ’ ಎಂದು ಅವರು ಹೇಳಿದರು.

‘ನಮ್ಮ ಹಕ್ಕು ಹಾಗೂ ಸ್ಥಾನವನ್ನು ಅಸಂವಿಧಾನಿಕವಾಗಿ ಕಸಿದುಕೊಳ್ಳಲು ಬಿಜೆಪಿ ತನ್ನ ಬಹುಮತವನ್ನು ಬಳಸಿಕೊಂಡಿತು. ಆದರೆ ಸುಪ್ರೀಂಕೋರ್ಟ್ ಅದನ್ನು ಮರುಸ್ಥಾಪಿಸಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕ್ಷೇತ್ರ ಪುನರ್‌ ವಿಂಗಡಣ ಆಯೋಗದ ಅಂತಿಮ ವರದಿ ಕುರಿತು ಕೇಳಿದ ಪ್ರಶ್ನೆಗೆ ‘ಮುಸ್ಲಿಂ ಬಾಹುಳ್ಯದ ಜಮ್ಮು–ಕಾಶ್ಮೀರದಲ್ಲಿ ಬಹುಸಂಖ್ಯಾತರ ಸ್ಥಾನಮಾನವನ್ನು ಬದಲಾಯಿಸಲು 2019ರ ಆಗಸ್ಟ್‌ 5ರಂದು ಆರಂಭವಾದ ಪ್ರಕ್ರಿಯೆಯ ಮುಂದುವರೆದ ಭಾಗವಾಗಿದೆ’ ಎಂದು ಉತ್ತರಿಸಿದರು.

‘ಕಣಿವೆಯಲ್ಲಿ ಜಮ್ಮು–ಕಾಶ್ಮೀರದ ಜನರನ್ನು ಅಶಕ್ತರನ್ನಾಗಿ ಮಾಡಲು ಬಿಜೆಪಿ ಎಲ್ಲ ಪ್ರಯತ್ನಗಳನ್ನು ನಡೆಸಿದೆ’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.