ADVERTISEMENT

ಪ್ರಧಾನಿ ವಿರುದ್ಧ ಪೋಸ್ಟ್‌: ಬೆಂಗಳೂರು ಯುವಕನ ಅರ್ಜಿ ವಜಾ

ತಮ್ಮ ವಿರುದ್ಧದ ಎಫ್ಐಆರ್‌ ರದ್ದುಪಡಿಸಲು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ಗುರುದತ್ತ ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2025, 14:43 IST
Last Updated 19 ಡಿಸೆಂಬರ್ 2025, 14:43 IST
ಸುಪ್ರೀಂ ಕೋರ್ಟ್‌ 
ಸುಪ್ರೀಂ ಕೋರ್ಟ್‌    

ನವದೆಹಲಿ: ‘ತಾವು ನಿಂದಿಸಿದ ವ್ಯಕ್ತಿಗಳ ಬಗ್ಗೆ ಅವರಿಗೆ ಯಾವುದೇ ಪಶ್ಚಾತ್ತಾಪ ಭಾವನೆಯಾಗಲೀ, ಮಾಡಿದ ತಪ್ಪಿಗೆ ಮರುಗುವ ಅಂತಃಕರಣವಾಗಲೀ ಇಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದ, ಬೆಂಗಳೂರಿನ 24 ವರ್ಷದ ಯುವಕನ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ ರದ್ದುಪಡಿಸಲು ಸುಪ್ರೀಂಕೋರ್ಟ್‌ ಶುಕ್ರವಾರ ನಿರಾಕರಿಸಿದೆ. 

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌, ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯ ಬಾಗ್ಚಿ ಹಾಗೂ ವಿಪುಲ್‌ ಎಂ.ಪಾಂಚೋಲಿ ಅವರನ್ನೊಳಗೊಂಡ ನ್ಯಾಯಪೀಠವು, ಬೆಂಗಳೂರು ನಿವಾಸಿ, ಗುರುದತ್ತ ಶೆಟ್ಟಿ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಜಾಗೊಳಿಸಿತು.

‘ಅರ್ಜಿದಾರರು ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನು ನಿರ್ಲಜ್ಜೆಯಿಂದ ನಿಂದಿಸಿದ್ದಾರೆ. ಈ ಹಂತದಲ್ಲಿ ನಾವು ಯಾವುದೇ ಎಚ್ಚರಿಕೆ ನೀಡಲು ಅಥವಾ ಪರಿಹಾರವನ್ನು ವಿಸ್ತರಿಸಲು ಸಾಧ್ಯವಿಲ್ಲ. ಆದಾಗ್ಯೂ, ಅರ್ಜಿದಾರರು, ತಮ್ಮ ವ್ಯಾಪ್ತಿಯ ಹೈಕೋರ್ಟ್‌ ಮೂಲಕ ಕಾನೂನಾತ್ಮಕವಾದ ಪರಿಹಾರ ಪಡೆಯಲು ಸ್ವತಂತ್ರರು’ ಎಂದು  ನ್ಯಾಯಪೀಠ ಅಭಿಪ್ರಾಯಪಟ್ಟಿತು. 

ADVERTISEMENT

ಗುರುದತ್ತ ಶೆಟ್ಟಿ ಪರವಾಗಿ ಹಾಜರಿದ್ದ ವಕೀಲ, ‘ಅರ್ಜಿದಾರರಿಗೆ ಕನಿಷ್ಠ ಒಂದು ವಾರ ರಕ್ಷಣೆ ಕೊಡಿ. ನಾವು ಹೈಕೋರ್ಟ್‌ ಮೊರೆಹೋಗುತ್ತೇವೆ’ ಎಂದು ಮನವಿ ಮಾಡಿದರು. ಇದನ್ನು ಸ್ಪಷ್ಟವಾಗಿ ಅಲ್ಲಗಳೆದ ಮುಖ್ಯ ನ್ಯಾಯಮೂರ್ತಿ (ಸಿಜೆಐ), ‘ಇದರಲ್ಲಿ ರಕ್ಷಣೆಯ ಪ್ರಶ್ನೆಯೇ ಇಲ್ಲ’ ಎಂದು ಅರ್ಜಿಯನ್ನು ತಿರಸ್ಕರಿಸಿದರು. 

‘ಶೆಟ್ಟಿ ವಿರುದ್ಧ ದಾಖಲಾಗಿರುವುದು ಜಾಮೀನು ನೀಡಬಹುದಾದ ಅಪರಾಧ ಪ್ರಕರಣಗಳಾಗಿವೆ. ನಮಗೆ ಕೆಲವೇ ದಿನಗಳು ಮಾತ್ರ ಸಾಕು, ನಾವು ಹೈಕೋರ್ಟ್‌ ಸಂಪರ್ಕಿಸಿ ಪರಿಹಾರ ಪಡೆಯುತ್ತೇವೆ. ಆದರೆ, ಅರ್ಜಿದಾರರು ವಿಚಾರಣೆಗಾಗಿ ಗುಜರಾತ್‌ಗೆ ಹೋಗುವಷ್ಟರಲ್ಲಿ ಅಲ್ಲಿನ ಪೊಲೀಸರು ಕೆಲವು ಜಾಮೀನುರಹಿತ ಅಪರಾಧಗಳನ್ನೂ ಇದಕ್ಕೆ ಸೇರಿಸಿ, ನನ್ನ ಕಕ್ಷಿದಾರರನ್ನು ಬಂಧಿಸುತ್ತಾರೆ ಎನ್ನುವ ಆತಂಕವಿದೆ’ ಎಂದು ಶೆಟ್ಟಿ ಪರ ವಕೀಲ ವಾದಿಸಿದರು.

ಪ್ರಧಾನಿ ವಿರುದ್ಧದ ಆನ್‌ಲೈನ್‌ ಪೋಸ್ಟ್‌ನ ಮೂಲ ಬರಹಗಾರ ಗುರುದತ್ತ ಶೆಟ್ಟಿ ಅಲ್ಲ, ಅವರು ಈ ಪೋಸ್ಟ್‌ ಅನ್ನು ಪ್ರಶ್ನಾರ್ಥಕ ಚಿಹ್ನೆಯೊಂದಿಗೆ ಮರು ಪೋಸ್ಟ್‌ ಮಾಡಿದ್ದಾರಷ್ಟೆ ಎಂದು ಅವರು ಪೀಠದ ಗಮನ ಸೆಳೆಯಲು ಪ್ರಶ್ನಿಸಿದರು. ಆದರೆ, ವಕೀಲರಿಗೆ ಎಚ್ಚರಿಕೆ ನೀಡಿದ ಸಿಜೆಐ, ‘ಮುಕ್ತ ಕೋರ್ಟ್‌ನಲ್ಲಿ ಈ ಪೋಸ್ಟ್‌ ಅನ್ನು ನಾವು ಓದಬೇಕು ಎಂದು ನಿಮ್ಮ ಅರ್ಜಿದಾರರು ಬಯಸುತ್ತಿದ್ದಾರೆಯೇ’ ಎಂದು ಪ್ರಶ್ನಿದರು.   

ಶೆಟ್ಟಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್‌) ಸೆಕ್ಷನ್‌ 336 (4) ಮತ್ತು ಸೆಕ್ಷನ್‌ 79ರ ಅಡಿ ಸಂಜ್ಞೇಯ ಮತ್ತು ಜಾಮೀನು ನೀಡಬಹುದಾದ ಅಪರಾಧ ಪ್ರಕರಣ ದಾಖಲಾಗಿದೆ. ‘ಈ ಪೋಸ್ಟ್‌ನ ಉದ್ದೇಶವು ಪ್ರಧಾನಿ ಅವರ ಘನತೆಗೆ ಧಕ್ಕೆ ತರುವಂತೆ ಇತ್ತು’ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. 

‘ಬೇಷರತ್‌ ಕ್ಷಮೆ ಯಾಚಿಸಲು ಸಿದ್ಧ‘

‘ಈ ಪ್ರಕರಣದಲ್ಲಿ ತಮ್ಮ ಕಕ್ಷಿದಾರರು ಬೇಷರತ್‌ ಕ್ಷಮೆ ಯಾಚಿಸಲು ಸಿದ್ಧರಿದ್ದಾರೆ. ಅವರು ತಮ್ಮ ವ್ಯಾಪ್ತಿಯ ಹೈಕೋರ್ಟ್‌ ಮೊರೆಹೋಗುವವರೆಗೆ ಕೆಲವೇ ಕೆಲವು ದಿನ ಅಂದರೆ, 5ರಿಂದ 7 ದಿನ ರಕ್ಷಣೆ ಒದಗಿಸುವಂತೆ ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಲಿದ್ದೇವೆ’ ಎಂದು ಗುರುದತ್ತ ಶೆಟ್ಟಿ ಪರವಾಗಿ ಹಾಜರಿದ್ದ ವಕೀಲ ವಿಚಾರಣೆಗೂ ಮುನ್ನ ಮಾಧ್ಯಮದ ಎದುರು ಹೇಳಿದ್ದರು. 

‘ವಾರಂಟ್‌ ಜಾರಿ ಮಾಡಿಲ್ಲ’

‘ಪೋಸ್ಟ್‌ಗೆ ಸಂಬಂಧಿಸಿದಂತೆ ಯಾವುದೇ ವಾರಂಟ್‌ ಜಾರಿ ಮಾಡಿಲ್ಲ. ಗುಜರಾತ್‌ ಪೊಲೀಸರು ನವೆಂಬರ್‌ 10ರಂದು ಬೆಂಗಳೂರಿನ ನನ್ನ ನಿವಾಸಕ್ಕೆ ಬಂದು ಬಲವಂತವಾಗಿ ನನ್ನನ್ನು ಕಾರಿಗೆ ಹತ್ತಿಸಿಕೊಂಡರು. ವಿಚಾರಣೆ ನಡೆಸಿ ಅಂದು ಮಧ್ಯರಾತ್ರಿ ಬಿಡುಗಡೆ ಮಾಡಿದರು. ಅದರ ಬೆನ್ನಲ್ಲೇ, ಬಿಎನ್‌ಎಸ್‌ಎಸ್‌ ಸೆಕ್ಷನ್‌ 35ರ ಅಡಿ ನೋಟಿಸ್‌ ನೀಡಿ, ಗುಜರಾತ್‌ನಲ್ಲಿ ಪೊಲೀಸ್‌ ತನಿಖಾಧಿಕಾರಿ ಎದುರು ಹಾಜರಾಗುವಂತೆ  ಸೂಚಿಸಿದರು. ನನ್ನ ವಿರುದ್ಧ ಕಾನೂನುಬಾಹಿರವಾಗಿ ದಾಖಲಾಗಿರುವ ಎಫ್‌ಐಆರ್‌ ರದ್ದುಪಡಿಸಬೇಕು’ ಎಂದು ಗುರುದತ್ತ ಶೆಟ್ಟಿ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.